ಬೆಂಗಳೂರು: ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯ ರೋಚಕ ಹಂತವನ್ನು ತಲುಪಿದೆ.
ನಾಯಕ ರೋಹಿತ್ ಶರ್ಮಾ (52), ವಿರಾಟ್ ಕೊಹ್ಲಿ (70) ಹಾಗೂ ಸರ್ಫರಾಜ್ ಖಾನ್ (70*) ಅರ್ಧಶತಕಗಳ ನೆರವಿನಿಂದ ಟೀಮ್ ಇಂಡಿಯಾ ಮೂರನೇ ದಿನದಾಟಕ್ಕೆ 49 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 231 ರನ್ ಗಳಿಸಿದೆ. ಭಾರತ ಈಗಲೂ 125 ರನ್‌ಗಳ ಹಿನ್ನಡೆಯಲ್ಲಿದೆ.
ದಿನದಾಟದ ಕೊನೆಯ ಎಸೆತದಲ್ಲಿ ವಿರಾಟ್ ವಿಕೆಟ್ ನಷ್ಟವಾಗಿರುವುದು ಭಾರತಕ್ಕೆ ಹಿನ್ನಡೆಯಾಗಿ ಪರಿಗಣಮಿಸಿದೆ. ಅಲ್ಲದೆ ಪಂದ್ಯ ರೋಚಕ ಹಂತವನ್ನು ತಲುಪಿದೆ.
ಭಾರತ ದಿಟ್ಟ ಉತ್ತರ...
ಮೊದಲ ಇನಿಂಗ್ಸ್‌ನಲ್ಲಿ 356 ರನ್‌ಗಳ ಹಿನ್ನಡೆಯ ಹೊರತಾಗಿಯೂ ದ್ವಿತೀಯ ಇನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ಬ್ಯಾಟರ್‌ಗಳು ದಿಟ್ಟ ಹೋರಾಟ ನೀಡಿದರು.
ನಾಯಕ ರೋಹಿತ್ ಶರ್ಮಾ ಹಾಗೂ ಯಶಸ್ವಿ ಜೈಸ್ವಾಲ್ ಮೊದಲ ವಿಕೆಟ್‌ಗೆ 72 ರನ್ ಪೇರಿಸಿದರು. ಆದರೆ 35 ರನ್ ಗಳಿಸಿದ ಜೈಸ್ವಾಲ್, ತಮ್ಮದೇ ತಪ್ಪಿನಿಂದಾಗಿ ಸ್ಟಂಪಿಂಗ್‌ಗೆ ಔಟ್ ಆದರು.
ಮತ್ತೊಂದೆಡೆ ನಾಯಕ ರೋಹಿತ್ ಶರ್ಮಾ ಆಕರ್ಷಕ ಅರ್ಧಶತಕ ಗಳಿಸಿದರು. ಆದರೆ ಅದೃಷ್ಟ ಅವರಿಗೆ ಸಾಥ್ ಕೊಡಲಿಲ್ಲ. ಪರಿಣಾಮ ಎಡಗೈ ಸ್ಪಿನ್ನರ್ ಎಜಾಜ್ ಪಟೇಲ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ರೋಹಿತ್ 63 ಎಸೆತಗಳಲ್ಲಿ ಎಂಟು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 52 ರನ್ ಗಳಿಸಿದರು.
ಕೊಹ್ಲಿ, ಸರ್ಫರಾಜ್ ಅರ್ಧಶತಕ...
ರೋಹಿತ್, ಜೈಸ್ವಾಲ್ ವಿಕೆಟ್ ಪತನದ ಬಳಿಕ ವಿರಾಟ್ ಕೊಹ್ಲಿ ಹಾಗೂ ಸರ್ಫರಾಜ್ ಖಾನ್ ಆಕ್ರಮಣಕಾರಿ ಬ್ಯಾಟ್ ಬೀಸಿದರು.
ನ್ಯೂಜಿಲೆಂಡ್ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿದ ಆ ಜೋಡಿ ಅಮೂಲ್ಯ ಶತಕದ ಜೊತೆಯಾಟದಲ್ಲಿ ಭಾಗಿಯಾದರು. ಸರ್ಫರಾಜ್ ಖಾನ್ ಟೆಸ್ಟ್ ಕ್ರಿಕೆಟ್‌ನಲ್ಲಿ 4ನೇ ಅರ್ಧಶತಕ ಗಳಿಸಿದರು.
ಅತ್ತ ರನ್ ಬರ ನೀಗಿಸಿದ ವಿರಾಟ್ ಕೊಹ್ಲಿ, ಟೆಸ್ಟ್ ಕ್ರಿಕೆಟ್‌ನಲ್ಲಿ 9,000 ರನ್‌ಗಳ ಮೈಲಿಗಲ್ಲು ತಲುಪಿದರು. ಆ ಮೂಲಕ ಸಚಿನ್ ತೆಂಡೂಲ್ಕರ್, ಸುನಿಲ್ ಗವಾಸ್ಕರ್ ಹಾಗೂ ರಾಹುಲ್ ದ್ರಾವಿಡ್ ಬಳಿಕ ಈ ಸಾಧನೆ ಮಾಡಿದ ಭಾರತದ ನಾಲ್ಕನೇ ಬ್ಯಾಟರ್ ಎನಿಸಿದ್ದಾರೆ.
ವಿರಾಟ್ ಹಾಗೂ ಸರ್ಫರಾಜ್ ನಾಲ್ಕನೇ ವಿಕೆಟ್‌ಗೆ 136 ರನ್‌ಗಳ ಜೊತೆಯಾದಲ್ಲಿ ಭಾಗಿಯಾದರು.
ರಚಿನ್ ಶತಕ, ಸೌಥಿ ಅರ್ಧಶತಕ; ನ್ಯೂಜಿಲೆಂಡ್‌ಗೆ 356 ರನ್ ಮುನ್ನಡೆ...
ಈ ಮೊದಲು ಎಡಗೈ ಬ್ಯಾಟರ್ ರಚಿನ್ ರವೀಂದ್ರ ಗಳಿಸಿದ ಅಮೋಘ ಶತಕದ ಬಲದಿಂದ ನ್ಯೂಜಿಲೆಂಡ್ ತಂಡ ಮೊದಲ ಇನಿಂಗ್ಸ್‌ನಲ್ಲಿ 402 ರನ್ ಗಳಿಸಿ ಆಲೌಟ್ ಆಯಿತು. ಇದರೊಂದಿಗೆ ಮೊದಲ ಇನಿಂಗ್ಸ್‌ನಲ್ಲಿ 356 ರನ್‌ಗಳ ಭಾರಿ ಮುನ್ನಡೆ ಸಾಧಿಸಿತು.
ಮೊದಲ ದಿನದಾಟ ಮಳೆಯಿಂದಾಗಿ ರದ್ದಾಗಿತ್ತು. ಎರಡನೇ ದಿನ ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಆತಿಥೇಯ ಭಾರತ ತಂಡ ಹೀನಾಯ ಪ್ರದರ್ಶನ ನೀಡಿತ್ತು.
ಪ್ರವಾಸಿ ಬೌಲರ್‌ಗಳ ಶಿಸ್ತಿನ ದಾಳಿಗೆ ದಿಕ್ಕೆಟ್ಟ ಟೀಂ ಇಂಡಿಯಾ, ಕೇವಲ 46 ರನ್ ಗಳಿಗೆ ಆಲೌಟ್ ಆಗಿತ್ತು. ನಂತರ ಇನಿಂಗ್ಸ್ ಆರಂಭಿಸಿದ ಟಾಮ್ ಲಥಾಮ್ ಬಳಗ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿತು.
157 ಎಸೆತಗಳನ್ನು ಎದುರಿಸಿದ ರಚಿನ್ ರವೀಂದ್ರ 134 ರನ್ ಗಳಿಸಿ ಮಿಂಚಿದರು. ಆರಂಭಿಕ ಬ್ಯಾಟರ್ ಡೆವೊನ್ ಕಾನ್ವೆ (91 ರನ್) ಹಾಗೂ ಕೆಳ ಕ್ರಮಾಂಕದ ಟಿಮ್ ಸೌಥಿ (65 ರನ್) ಸಹ ಅರ್ಧಶತಕ ಗಳಿಸಿದ್ದರಿಂದ, ಆತಿಥೇಯರು ಭಾರಿ ಹಿನ್ನಡೆ ಅನುಭವಿಸುವಂತಾಯಿತು.
ಭಾರತದ ಪರ ರವೀಂದ್ರ ಜಡೇಜ, ಕುಲದೀಪ್ ಯಾದವ್ ತಲಾ ಮೂರು ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್ ಎರಡು ವಿಕೆಟ್ ಉರುಳಿಸಿದರು. ಇನ್ನೆರಡು ವಿಕೆಟ್‌ಗಳನ್ನು ಜಸ್‌ಪ್ರೀತ್ ಬೂಮ್ರಾ ಮತ್ತು ಆರ್.ಅಶ್ವಿನ್ ಹಂಚಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.