ಬೆಂಗಳೂರು: ಸರ್ಫರಾಜ್ ಖಾನ್ (150), ರಿಷಭ್ ಪಂತ್ (99), ವಿರಾಟ್ ಕೊಹ್ಲಿ (70) ಮತ್ತು ನಾಯಕ ರೋಹಿತ್ ಶರ್ಮಾ (52) ದಿಟ್ಟ ಹೋರಾಟದ ಹೊರತಾಗಿಯೂ ಟೀಮ್ ಇಂಡಿಯಾ, ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ 99.3 ಓವರ್‌ಗಳಲ್ಲಿ 462 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿದೆ.
ಆ ಮೂಲಕ ಎದುರಾಳಿ ನ್ಯೂಜಿಲೆಂಡ್ ತಂಡದ ಗೆಲುವಿಗೆ 107 ರನ್‌ಗಳ ಗುರಿ ನೀಡಿದೆ.
ಬಳಿಕ ಮಳೆಯಿಂದಾಗಿ ನಾಲ್ಕನೇ ದಿನದಾಟದ ಅಂತ್ಯಕ್ಕೆ ನ್ಯೂಜಿಲೆಂಡ್ ನಾಲ್ಕು ಎಸೆತಗಳನ್ನಷ್ಟೇ ಎದುರಿಸಿದ್ದು, ಇನ್ನಷ್ಟೇ ಖಾತೆ ತೆರೆಯಬೇಕಿದೆ. ನಾಳೆ (ಭಾನುವಾರ) ಅಂತಿಮ ದಿನಾದಟದಲ್ಲಿ 'ಮ್ಯಾಜಿಕ್' ಸಂಭವಿಸಬಹುದೇ ಎಂದು ಭಾರತೀಯ ಅಭಿಮಾನಿಗಳು ನಿರೀಕ್ಷೆಯಲ್ಲಿದ್ದಾರೆ.
ಮತ್ತೊಂದೆಡೆ ನ್ಯೂಜಿಲೆಂಡ್ 36 ವರ್ಷಗಳ ಬಳಿಕ ಭಾರತ ನೆಲದಲ್ಲಿ ಟೆಸ್ಟ್ ಪಂದ್ಯ ಗೆಲುವಿನ ಹುಮ್ಮಸ್ಸಿನಲ್ಲಿದೆ.
ಭಾರತ ಮೊದಲ ಇನಿಂಗ್ಸ್‌ನಲ್ಲಿ ಕೇವಲ 46 ರನ್‌ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಉತ್ತರವಾಗಿ ನ್ಯೂಜಿಲೆಂಡ್ 402 ರನ್ ಪೇರಿಸಿತ್ತು. ಇದರಿಂದಾಗಿ ಮೊದಲ ಇನಿಂಗ್ಸ್‌ನಲ್ಲಿ 356 ರನ್‌ಗಳ ಭಾರಿ ಹಿನ್ನಡೆಗೆ ಒಳಗಾಗಿತ್ತು.
ನಾಲ್ಕನೇ ದಿನದಾಟದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಸರ್ಫರಾಜ್ ಖಾನ್ ಹಾಗೂ ರಿಷಭ್ ಪಂತ್ ದಿಟ್ಟ ಹೋರಾಟ ಪ್ರದರ್ಶಿಸಿದರು. ಅಲ್ಲದೆ ನಾಲ್ಕನೇ ವಿಕೆಟ್‌ಗೆ 177 ರನ್‌ಗಳ ಅಮೂಲ್ಯ ಜೊತೆಯಾಟ ಕಟ್ಟಿದರು.
ಸರ್ಫರಾಜ್ ಖಾನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ದಾಖಲಿಸಿದರು. ಮತ್ತೊಂದೆಡೆ ರಿಷಭ್ ಪಂತ್ ಮಗದೊಂದು ಆಕರ್ಷಕ ಅರ್ಧಶತಕ ಗಳಿಸಿದರು.
ಮಳೆಯಿಂದಾಗಿ ಪಂದ್ಯಕ್ಕೆ ಅಡಚಣೆಯಾಯಿತು. ಬಳಿಕ ಪಂದ್ಯ ಮುಂದುವರಿಸಿದಾಗ ಭಾರತ ಮುನ್ನಡೆ ಗಳಿಸುವಲ್ಲಿ ಯಶಸ್ವಿಯಾಯಿತು.
ಸರ್ಫರಾಜ್ ಖಾನ್ 195 ಎಸೆತಗಳಲ್ಲಿ 150 ರನ್ ಗಳಿಸಿದರು. ಅವರ ಸೊಗಸಾದ ಇನಿಂಗ್ಸ್‌ನಲ್ಲಿ 18 ಬೌಂಡರಿ ಹಾಗೂ ಮೂರು ಸಿಕ್ಸರ್ ಸೇರಿದ್ದವು.
ರಿಷಭ್ ಪಂತ್ ಕೇವಲ ಒಂದು ರನ್ ಅಂತರದಿಂದ ಶತಕ ವಂಚಿತರಾದರು. ಪಂತ್ 105 ಎಸೆತಗಳಲ್ಲಿ ಒಂಬತ್ತು ಬೌಂಡರಿ ಹಾಗೂ ಐದು ಸಿಕ್ಸರ್ ನೆರವಿನಿಂದ 99 ರನ್ ಗಳಿಸಿದರು.
ಕೊನೆಯ 54 ರನ್ ಅಂತರದಲ್ಲಿ ಭಾರತ ಏಳು ವಿಕೆಟ್‌ಗಳನ್ನು ಕಳೆದುಕೊಳ್ಳುವ ಮೂಲಕ ಹಿನ್ನಡೆಗೊಳಗಾಯಿತು. ಕೆ.ಎಲ್. ರಾಹುಲ್ (12), ರವೀಂದ್ರ ಜಡೇಜ (5), ಆರ್. ಅಶ್ವಿನ್ (15), ಜಸ್‌ಪ್ರೀತ್ ಬೂಮ್ರಾ (0), ಮೊಹಮ್ಮದ್ ಸಿರಾಜ್ (0) ನಿರಾಸೆ ಮೂಡಿಸಿದರು. ಕುಲದೀಪ್ ಯಾದವ್ 6 ರನ್ ಗಳಿಸಿ ಅಜೇಯರಾಗುಳಿದರು.
ನ್ಯೂಜಿಲೆಂಡ್ ಪರ ವಿಲಿಯಮ್ ಓರೂರ್ಕಿ ಹಾಗೂ ಮ್ಯಾಟ್ ಹೆನ್ರಿ ತಲಾ ಮೂರು ಮತ್ತು ಎಜಾಜ್ ಪಟೇಲ್ ಎರಡು ವಿಕೆಟ್ ಗಳಿಸಿದರು.
ಮಳೆಯಿಂದಾಗಿ ಮೊದಲ ದಿನದಾಟ ರದ್ದಾಗಿತ್ತು. ಎರಡನೇ ದಿನದಾಟದಲ್ಲಿ ಭಾರತ ಮೊದಲ ಇನಿಂಗ್ಸ್‌ನಲ್ಲಿ ಕೇವಲ 46 ರನ್ನಿಗೆ ಆಲೌಟ್ ಆಗಿತ್ತು. ನ್ಯೂಜಿಲೆಂಡ್ ಪರ ಮ್ಯಾಟ್ ಹೆನ್ರಿ ಐದು ಹಾಗೂ ವಿಲಿಯಮ್ ಓರೂರ್ಕಿ ನಾಲ್ಕು ವಿಕೆಟ್ ಗಳಿಸಿದರು.
ಬಳಿಕ ರಚಿನ್ ರವೀಂದ್ರ (134) ಶತಕ ಮತ್ತು ಡೆವೊನ್ ಕಾನ್ವೆ (91) ಹಾಗೂ ಟಿಮ್ ಸೌಥಿ (65) ಅರ್ಧಶತಕಗಳ ನೆರವಿನಿಂದ ನ್ಯೂಜಿಲೆಂಡ್ 402 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ಭಾರತ ಪರ ಕುಲದೀಪ್ ಯಾದವ್ ಹಾಗೂ ರವೀಂದ್ರ ಜಡೇಜ ತಲಾ ಮೂರು ವಿಕೆಟ್ ಗಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.