ADVERTISEMENT

IND vs NZ | ಸ್ಪಿನ್ನರ್‌ಗಳ ಕೈಚಳಕ; ಭಾರತಕ್ಕೆ 359 ರನ್ ಗುರಿ, ರೋಹಿತ್ ಔಟ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಅಕ್ಟೋಬರ್ 2024, 6:08 IST
Last Updated 26 ಅಕ್ಟೋಬರ್ 2024, 6:08 IST
<div class="paragraphs"><p>ಔಟಾಗಿ ಪೆವಿಲಿಯನ್‌ನತ್ತ ಹೆಜ್ಜೆ ಇಟ್ಟ ರೋಹಿತ್‌ ಶರ್ಮಾ ಹಾಗೂ ನ್ಯೂಜಿಲೆಂಡ್‌ ಆಟಗಾರರು</p></div>

ಔಟಾಗಿ ಪೆವಿಲಿಯನ್‌ನತ್ತ ಹೆಜ್ಜೆ ಇಟ್ಟ ರೋಹಿತ್‌ ಶರ್ಮಾ ಹಾಗೂ ನ್ಯೂಜಿಲೆಂಡ್‌ ಆಟಗಾರರು

   

ಪಿಟಿಐ ಚಿತ್ರ

ಪುಣೆ: ನ್ಯೂಜಿಲೆಂಡ್‌ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯವನ್ನು ಗೆಲ್ಲಲು ಭಾರತ ತಂಡಕ್ಕೆ 359 ರನ್‌ಗಳ ಸವಾಲಿನ ಗುರಿ ನಿಗದಿಯಾಗಿದೆ.

ADVERTISEMENT

ಪುಣೆಯ ಮಹಾರಾಷ್ಟ್ರ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದೆ.

ಬ್ಯಾಟಿಂಗ್‌ ಆರಂಭಿಸಿರುವ ಟೀಂ ಇಂಡಿಯಾ, 10 ಓವರ್‌ಗಳಲ್ಲಿ 1 ವಿಕೆಟ್‌ಗೆ 64 ರನ್ ಗಳಿಸಿದೆ. ನಾಯಕ ರೋಹಿತ್‌ ಶರ್ಮಾ 8 ರನ್‌ ಗಳಿಸಿ ಮಿಚೆಲ್ ಸ್ಯಾಂಟ್ನರ್‌ಗೆ ವಿಕೆಟ್‌ ಒಪ್ಪಿಸಿದ್ದಾರೆ. ಯುವ ಬ್ಯಾಟರ್‌ಗಳಾದ ಯಶಸ್ವಿ ಜೈಸ್ವಾಲ್‌ ಹಾಗೂ ಶುಭಮನ್‌ ಗಿಲ್‌ (15 ರನ್‌) ಕ್ರೀಸ್‌ನಲ್ಲಿದ್ದಾರೆ.

ಬಿರುಸಿನ ಬ್ಯಾಟಿಂಗ್‌ ನಡೆಸುತ್ತಿರುವ ಜೈಸ್ವಾಲ್‌, 29 ಎಸೆತಗಳಲ್ಲಿ 36 ರನ್‌ ಗಳಿಸಿದ್ದಾರೆ. ಟೀಂ ಇಂಡಿಯಾ ಗೆಲ್ಲಲು, ಉಳಿದಿರುವ 9 ವಿಕೆಟ್‌ಗಳಿಂದ 295 ರನ್ ಗಳಿಸಬೇಕಿದೆ.

ಕುಸಿದ ಕಿವೀಸ್‌
ಮೊದಲ ಇನಿಂಗ್ಸ್‌ನಲ್ಲಿ 103 ರನ್‌ಗಳ ಉತ್ತಮ ಮುನ್ನಡೆ ಪಡೆದಿದ್ದ ಟಾಮ್ ಲೇಥಮ್‌ ಬಳಗ, ಎರಡನೇ ಇನಿಂಗ್ಸ್‌ನಲ್ಲಿ 255 ರನ್‌ಗಳಿಗೆ ಆಲೌಟ್‌ ಆಯಿತು.

2ನೇ ದಿನದಾಟದ ಅಂತ್ಯಕ್ಕೆ 5 ವಿಕೆಟ್‌ ಕಳೆದುಕೊಂಡು 198 ರನ್‌ ಗಳಿಸಿದ್ದ ನ್ಯೂಜಿಲೆಂಡ್‌, ಇಂದು ದಿಢೀರ್‌ ಕುಸಿತ ಅನುಭವಿಸಿತು. ಹಿಂದಿನ ದಿನದ ಮೊತ್ತಕ್ಕೆ 57 ರನ್‌ ಸೇರಿಸುವಷ್ಟರಲ್ಲಿ ಉಳಿದ ಬ್ಯಾಟರ್‌ಗಳು ಗಂಟುಮೂಟೆ ಕಟ್ಟಿದರು.

30 ರನ್ ಗಳಿಸಿ ಕ್ರೀಸ್‌ ಕಾಯ್ದುಕೊಂಡಿದ್ದ ಟಾಮ್‌ ಬ್ಲಂಡಲ್‌ ಅವರು, ಇಂದು 11 ರನ್‌ (ಒಟ್ಟು 41 ರನ್‌) ಗಳಿಸಿ ಔಟಾದರು. ನಂತರ ಬಂದ ನಾಲ್ಕು ಬ್ಯಾಟರ್‌ಗಳು 20 ರನ್‌ ಅಂತರದಲ್ಲಿ ಪೆವಿಲಿಯನ್‌ ಸೇರಿಕೊಂಡರು. ಗ್ಲೆನ್‌ ಫಿಲಿಪ್ಸ್‌ ಔಟಾಗದೆ 48 ರನ್ ಗಳಿಸಿದ್ದರಿಂದ ತಂಡದ ಮೊತ್ತ 250ರ ಗಡಿ ದಾಟಿತು.

ಮೊದಲ ಇನಿಂಗ್ಸ್‌ನಲ್ಲಿ 7 ವಿಕೆಟ್‌ ಪಡೆದುಕೊಂಡಿದ್ದ ವಾಷಿಂಗ್ಟನ್‌ ಸುಂದರ್‌ ಈ ಬಾರಿ 4 ವಿಕೆಟ್‌ ಉರುಳಿಸಿದರು. ಆ ಮೂಲಕ ಟೆಸ್ಟ್‌ ಪಂದ್ಯವೊಂದರಲ್ಲಿ ಮೊದಲ ಸಲ ಹತ್ತಕ್ಕಿಂತ ಹೆಚ್ಚು ವಿಕೆಟ್‌ ಗಳಿಸಿ ಸಂಭ್ರಮಿಸಿದರು. ಉಳಿದ ಆರು ವಿಕೆಟ್‌ಗಳಲ್ಲಿ ಐದನ್ನು ಆರ್‌.ಅಶ್ವಿನ್‌ (2) ಮತ್ತು ರವೀಂದ್ರ ಜಡೇಜ (3) ಹಂಚಿಕೊಂಡರು. ಮತ್ತೊಂದು ವಿಕೆಟ್‌ ರನೌಟ್‌ ರೂಪದಲ್ಲಿ ಬಂದಿತು.

ಸ್ಪಿನ್‌ ಮೋಡಿ
ಪುಣೆ ಪಿಚ್‌ ಸ್ಪಿನ್‌ ಬೌಲರ್‌ಗಳಿಗೆ ಹೆಚ್ಚಿನ ನೆರವು ನೀಡುತ್ತಿದೆ. ಇಲ್ಲಿ ಮೊದಲ ಮೂರು ಇನಿಂಗ್ಸ್‌ಗಳಲ್ಲಿ ಪತನಗೊಂಡಿರುವ 30 ವಿಕೆಟ್‌ಗಳ ಪೈಕಿ 28 ಅನ್ನು ಸ್ಪಿನ್ನರ್‌ಗಳೇ ಬುಟ್ಟಿಗೆ ಹಾಕಿಕೊಂಡಿದ್ದಾರೆ. ಉಳಿದ ಎರಡರಲ್ಲಿ ಒಂದು ನ್ಯೂಜಿಲೆಂಡ್‌ ವೇಗಿ ಟಿಮ್‌ ಸೌಥಿ ಪಾಲಾದರೆ, ಇನ್ನೊಂದು ರನೌಟ್‌.

ನ್ಯೂಜಿಲೆಂಡ್‌ನ ಮೊದಲ ಇನಿಂಗ್ಸ್‌ ವೇಳೆ ವಾಷಿಂಗ್ಟನ್‌ ಸುಂದರ್‌ 7 ಹಾಗೂ ಆರ್‌.ಅಶ್ವಿನ್‌ 3 ವಿಕೆಟ್‌ ಪಡೆದಿದ್ದರು. ನಂತರ ಭಾರತದ ಏಳು ಬ್ಯಾಟರ್‌ಗಳನ್ನು ಪ್ರವಾಸಿ ಪಡೆಯ ಮಿಚೆಲ್ ಸ್ಯಾಂಟ್ನರ್‌ ಔಟ್ ಮಾಡಿದ್ದರು. ಉಳಿದ ಮೂರರಲ್ಲಿ ಎರಡನ್ನು ಗ್ಲೆನ್‌ ಫಿಲಿಪ್ಸ್‌ ಮತ್ತು ಒಂದನ್ನು ಸೌಥಿ ಕಬಳಿಸಿದ್ದರು.

ಬಳಿಕ ಕಿವೀಸ್‌ 2ನೇ ಇನಿಂಗ್ಸ್‌ ಆರಂಭಿಸಿದಾಗಲೂ, ಭಾರತದ ಸ್ಪಿನ್ನರ್‌ಗಳು ಪಾರಮ್ಯ ಮೆರೆದು ಹತ್ತೂ ವಿಕೆಟ್‌ಗಳನ್ನು ಜೇಬಿಗಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.