ADVERTISEMENT

IND v NZ Test | ಬ್ಯಾಟಿಂಗ್ ಆರಂಭಿಸಿದ ಕಿವೀಸ್; ರಾಹುಲ್, ಸಿರಾಜ್ ಕೈಬಿಟ್ಟ ಭಾರತ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಅಕ್ಟೋಬರ್ 2024, 4:53 IST
Last Updated 24 ಅಕ್ಟೋಬರ್ 2024, 4:53 IST
<div class="paragraphs"><p>ಮೊಹಮ್ಮದ್‌ ಸಿರಾಜ್‌ ಹಾಗೂ ಕೆ.ಎಲ್‌.ರಾಹುಲ್‌ </p></div>

ಮೊಹಮ್ಮದ್‌ ಸಿರಾಜ್‌ ಹಾಗೂ ಕೆ.ಎಲ್‌.ರಾಹುಲ್‌

   

ಪಿಟಿಐ ಚಿತ್ರಗಳು

ಪುಣೆ: ಆತಿಥೇಯ ಭಾರತ ವಿರುದ್ಧ ಪುಣೆಯಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಟಾಸ್‌ ಗೆದ್ದಿರುವ ಪ್ರವಾಸಿ ನ್ಯೂಜಿಲೆಂಡ್‌, ಬ್ಯಾಟಿಂಗ್‌ ಆರಂಭಿಸಿದೆ.

ADVERTISEMENT

ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದ್ದು, ನ್ಯೂಜಿಲೆಂಡ್‌ ತಂಡ 11 ಓವರ್‌ಗಳ ಅಂತ್ಯಕ್ಕೆ 1 ವಿಕೆಟ್‌ ಕಳೆದುಕೊಂಡು 38 ರನ್‌ ಗಳಿಸಿದೆ.

ಅನುಭವಿ ಡೆವೊನ್ ಕಾನ್ವೆ ಜೊತೆ ಇನಿಂಗ್ಸ್‌ ಆರಂಭಿಸಿದ ನಾಯಕ ಟಾಮ್‌ ಲೇಥಮ್‌ (15) ಅವರನ್ನು ಸ್ಪಿನ್ನರ್‌ ಆರ್‌. ಅಶ್ವಿನ್‌ ಎಲ್‌ಬಿ ಬಲೆಗೆ ಬೀಳಿಸಿದ್ದಾರೆ. ಕಾನ್ವೆ (20) ಹಾಗೂ ವಿಲ್‌ ಯಂಗ್‌ (2) ಕ್ರೀಸ್‌ನಲ್ಲಿದ್ದಾರೆ.

ಮೂರು ಪಂದ್ಯಗಳ ಟೆಸ್ಟ್‌ ಸರಣಿಯ ಮೊದಲ ಪಂದ್ಯ ಗೆದ್ದಿರುವ ಲಥಾಮ್‌ ಪಡೆ, ಈ ಪಂದ್ಯವನ್ನೂ ಜಯಿಸಿ, ಸರಣಿ ವಶಪಡಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ. ಆದರೆ, ಇಲ್ಲಿ ಗೆದ್ದು ಪುಟಿದೇಳುವ ವಿಶ್ವಾಸದಲ್ಲಿ ರೋಹಿತ್‌ ಶರ್ಮಾ ಬಳಗವಿದೆ.

ಭಾರತ ತಂಡದಲ್ಲಿ ಮೂರು ಬದಲಾವಣೆ

ರನ್‌ ಗಳಿಸಲು ಪರದಾಡುತ್ತಿರುವ ಕನ್ನಡಿಗ ಕೆ.ಎಲ್‌.ರಾಹುಲ್‌ ಅವರನ್ನು ಭಾರತ ತಂಡದಿಂದ ಕೈಬಿಡಲಾಗಿದೆ. ಯುವ ಬ್ಯಾಟರ್‌ ಶುಭಮನ್‌ ಗಿಲ್‌ ತಂಡ ಕೂಡಿಕೊಂಡಿದ್ದಾರೆ.

ರಾಹುಲ್‌ ಮಾತ್ರವಲ್ಲ ವೇಗಿ ಮೊಹಮ್ಮದ್‌ ಸಿರಾಜ್‌ ಮತ್ತು 'ಚೈನಾಮನ್‌' ಕುಲದೀಪ್‌ ಯಾದವ್‌ಗೂ ಕೋಕ್‌ ನೀಡಲಾಗಿದೆ.

ಕಳೆದ ಪಂದ್ಯದಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾದ ಸಿರಾಜ್ ಬದಲು ಮಧ್ಯಮ ವೇಗಿ ಆಕಾಶ್‌ ದೀಪ್‌ ಮತ್ತು ಯಾದವ್‌ ಬದಲು ಆಲ್‌ರೌಂಡರ್‌ ವಾಷಿಂಗ್ಟನ್ ಸುಂದರ್‌ಗೆ ಅವಕಾಶ ಸಿಕ್ಕಿದೆ.

ಕಳೆದ ಪಂದ್ಯದಲ್ಲಿ ಮಿಂಚಿದ್ದ ವೇಗಿ ಮ್ಯಾಟ್‌ ಹೆನ್ರಿ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಅವರ ಬದಲು ಆಲ್‌ರೌಂಡರ್‌ ಮಿಚೇಲ್‌ ಸ್ಯಾಂಟ್ನರ್‌ ಅವರು ನ್ಯೂಜಿಲೆಂಡ್‌ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಹನ್ನೊಂದರ ಬಳಗ

ಭಾರತ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್‌, ಶುಭಮನ್ ಗಿಲ್‌, ವಿರಾಟ್ ಕೊಹ್ಲಿ, ರಿಷಭ್‌ ಪಂತ್‌, ಸರ್ಫರಾಜ್‌ ಖಾನ್‌, ರವೀಂದ್ರ ಜಡೇಜ, ವಾಷಿಂಗ್ಟನ್‌ ಸುಂದರ್‌, ಆರ್‌.ಅಶ್ವಿನ್‌, ಆಕಾಶ್‌ ದೀಪ್‌, ಜಸ್‌ಪ್ರಿತ್‌ ಬೂಮ್ರ

ನ್ಯೂಜಿಲೆಂಡ್‌: ಟಾಮ್‌ ಲೇಥಮ್‌ (ನಾಯಕ), ಡೆವೊನ್ ಕಾನ್ವೆ, ವಿಲ್‌ ಯಂಗ್‌, ರಚಿನ್‌ ರವೀಂದ್ರ, ಡ್ಯಾರಿಲ್ ಮಿಚೆಲ್, ಟಾಮ್ ಬ್ಲಂಡಲ್‌, ಗ್ಲೆನ್‌ ಫಿಲಿಪ್ಸ್‌, ಮಿಚೇಲ್‌ ಸ್ಯಾಂಟ್ನರ್‌, ಟಿಮ್‌ ಸೌಥಿ, ಎಜಾಜ್‌ ಪಟೇಲ್‌, ಜಸ್‌ಪ್ರಿತ್‌ ಬೂಮ್ರ, ವಿಲಿಯಮ್ ಓ ರೂರ್ಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.