ADVERTISEMENT

IND vs NZ | ಭಾರತ 156 ರನ್‌ಗೆ ಆಲೌಟ್; 2ನೇ ಟೆಸ್ಟ್‌ನಲ್ಲೂ ಇನಿಂಗ್ಸ್ ಹಿನ್ನಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಅಕ್ಟೋಬರ್ 2024, 7:18 IST
Last Updated 25 ಅಕ್ಟೋಬರ್ 2024, 7:18 IST
<div class="paragraphs"><p>ಔಟಾಗಿ ಹೊರನಡೆಯುತ್ತಿರುವ ವಿರಾಟ್‌ ಕೊಹ್ಲಿ ಹಾಗೂ ನ್ಯೂಜಿಲೆಂಡ್ ಆಟಗಾರರು</p></div>

ಔಟಾಗಿ ಹೊರನಡೆಯುತ್ತಿರುವ ವಿರಾಟ್‌ ಕೊಹ್ಲಿ ಹಾಗೂ ನ್ಯೂಜಿಲೆಂಡ್ ಆಟಗಾರರು

   

ಪಿಟಿಐ ಚಿತ್ರಗಳು

ಪುಣೆ: ನ್ಯೂಜಿಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯ ಆರಂಭಿಕ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಮುಗ್ಗರಿಸಿದ್ದ ಭಾರತದ ಬ್ಯಾಟರ್‌ಗಳು ಎರಡನೇ ಪಂದ್ಯದಲ್ಲೂ ನೀರಸ ಪ್ರದರ್ಶನ ತೋರಿದ್ದಾರೆ. ಪ್ರವಾಸಿ ತಂಡ ಗಳಿಸಿದ್ದ 259 ರನ್‌ ಎದುರು ಕೇವಲ 156 ರನ್‌ಗೆ ಸರ್ವಪತನಗೊಳ್ಳುವ ಮೂಲಕ 103 ರನ್‌ಗಳ ಹಿನ್ನಡೆ ಅನುಭವಿಸಿದ್ದಾರೆ.

ADVERTISEMENT

ಪುಣೆಯಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ದಿನದಾಟದ ಅಂತ್ಯಕ್ಕೆ 11 ಓವರ್‌ಗಳಲ್ಲಿ 1 ವಿಕೆಟ್‌ಗೆ 16 ರನ್ ಗಳಿಸಿದ್ದ ಟೀಂ ಇಂಡಿಯಾ, ಎರಡನೇ ದಿನದಾಟದ ಆರಂಭದಲ್ಲೇ ಟಾಮ್‌ ಲೇಥಮ್‌ ಬಳಗದ ಸ್ಪಿನ್‌ ಖೆಡ್ಡಾಗೆ ಉರುಳಿತು.

ಯುವ ಬ್ಯಾಟರ್‌ ಶುಭಮನ್‌ ಗಿಲ್‌ (30 ರನ್‌) ಅವರು ತಂಡದ ಮೊತ್ತ 50 ರನ್‌ ಆಗಿದ್ದಾಗ ಔಟಾಗುವುದರೊಂದಿಗೆ ಪೆವಿಲಿಯನ್‌ ಪರೇಡ್ ಆರಂಭವಾಯಿತು. ಅನುಭವಿ ವಿರಾಟ್‌ ಕೊಹ್ಲಿ (1) ಹೆಚ್ಚು ಹೊತ್ತು ನಿಲ್ಲದೆ ಮರಳಿದರು. ಯಶಸ್ವಿ ಜೈಸ್ವಾಲ್‌ (30 ರನ್‌), ರಿಷಭ್‌ ಪಂತ್‌ (18 ರನ್‌), ಸರ್ಫರಾಜ್‌ ಖಾನ್‌ (11 ರನ್‌), ರವಿಚಂದ್ರನ್‌ ಅಶ್ವಿನ್‌ (4 ರನ್‌) ಅವರ ಹಿಂದೆಯೇ ನಡೆದರು.

ಭೋಜನ ವಿರಾಮದ ಬಳಿಕ ರವೀಂದ್ರ ಜಡೇಜ ಕೆಲಕಾಲ ಬೀಸಾಡಿ 38 ರನ್ ಗಳಿಸಿದರು. ಇದು ಭಾರತದ ಪರ ವೈಯಕ್ತಿಕ ಗರಿಷ್ಠ ಮೊತ್ತವೆನಿಸಿತು. ವಾಷಿಂಗ್ಟನ್‌ ಸುಂದರ್‌ (ಅಜೇಯ 18 ರನ್‌) ಸಹ ಉಪಯುಕ್ತ ಆಟವಾಡಿದರು. ಹೀಗಾಗಿ ತಂಡದ ಮೊತ್ತ 150ರ ಗಡಿ ದಾಟಿತು.

ತಿರುವು ಪಡೆಯುತ್ತಿದ್ದ ಪಿಚ್‌ನಲ್ಲಿ ಅಮೋಘ ಬೌಲಿಂಗ್‌ ಪ್ರದರ್ಶನ ನೀಡಿದ ಮಿಚೇಲ್ ಸ್ಯಾಂಟ್ನರ್‌ 53 ರನ್‌ ನೀಡಿ 7 ವಿಕೆಟ್‌ ಪಡೆದರು. ಇದು ಟೆಸ್ಟ್‌ ಕ್ರಿಕೆಟ್‌ನಲ್ಲಿ ಅವರ ಜೀವನಶ್ರೇಷ್ಠ ಸಾಧನೆಯಾಯಿತು. ಅವರಿಗೆ ಉತ್ತಮ ಸಹಕಾರ ನೀಡಿದ ಗ್ಲೆನ್‌ ಫಿಲಿಪ್ಸ್‌ (26 ರನ್‌ಗೆ 2 ವಿಕೆಟ್‌) ತಮ್ಮ ತಂಡಕ್ಕೆ ಉತ್ತಮ ಮುನ್ನಡೆ ತಂದುಕೊಟ್ಟರು.

ಭಾರತ ತಂಡವು ಬೆಂಗಳೂರಿನಲ್ಲಿ ನಡೆದ ಮೊದಲ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಕೇವಲ 46 ರನ್‌ಗಳಿಗೆ ಆಲೌಟ್‌ ಆಗಿತ್ತು. ಟೀಂ ಇಂಡಿಯಾ, ತವರಿನಲ್ಲಿ ನಡೆದ ಪಂದ್ಯದ ಇನಿಂಗ್ಸ್‌ವೊಂದರಲ್ಲಿ ಗಳಿಸಿದ ಕನಿಷ್ಠ ಮೊತ್ತ ಇದಾಗಿದೆ. ಎರಡನೇ ಇನಿಂಗ್ಸ್‌ನಲ್ಲಿ ಮರುಹೋರಾಟ ನಡೆಸಿತ್ತಾದರೂ, ಸೋಲು ತಪ್ಪಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.