ನೇಪಿಯರ್: ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಮೂರನೇಟಿ20 ಕ್ರಿಕೆಟ್ ಪಂದ್ಯವು ಮಳೆಯಿಂದಾಗಿ ಟೈ ಆಗಿದೆ.
ಇಲ್ಲಿನ ಮೆಕ್‌ಲೀನ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 19.4 ಓವರ್‌ಗಳಲ್ಲಿ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 160ರನ್ ಕಲೆಹಾಕಿತ್ತು.
ಡೆವೋನ್ ಕಾನ್ವೆ (59) ಹಾಗೂಗ್ಲೆನ್ ಫಿಲಿಪ್ಸ್ (53) ಅರ್ಧಶತಕ ಗಳಿಸಿ ಆತಿಥೇಯ ತಂಡಕ್ಕೆ ನೆರವಾದರು. ಅದರ ಹೊರತಾಗಿಯೂ, ಭಾರತ ಪರ ಮಿಂಚಿದ ಪ್ರದರ್ಶನ ನೀಡಿದ ಯುವ ವೇಗಿಗಳಾದ ಅರ್ಶದೀಪ್ ಸಿಂಗ್ (37ಕ್ಕೆ 4) ಮತ್ತು ಮೊಹಮ್ಮದ್ ಸಿರಾಜ್ (17ಕ್ಕೆ 4) ತಲಾ ನಾಲ್ಕು ವಿಕೆಟ್ ಕಬಳಿಸಿದರು. ಜೊತೆಗೆ, ಕಿವೀಸ್ ಪಡೆ ಬೃಹತ್ ಮೊತ್ತ ಕಲೆಹಾಕದಂತೆ ನೋಡಿಕೊಂಡರು.
ಈ ಗುರಿ ಬೆನ್ನತ್ತಿದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಇನಿಂಗ್ಸ್ ಶುರು ಮಾಡಿದ ಇಶಾನ್ ಕಿಶನ್ (10), ರಿಷಭ್ ಪಂತ್ (11) ಮತ್ತು ಶ್ರೇಯಸ್ ಅಯ್ಯರ್ (0) ತಂಡದ ಮೊತ್ತ 21 ರನ್ ಆಗುವಷ್ಟರಲ್ಲಿ ಪೆವಿಲಿಯನ್ ಸೇರಿಕೊಂಡರು. ಕಳೆದ ಪಂದ್ಯದ ಹೀರೊ ಸೂರ್ಯಕುಮಾರ್ ಯಾದವ್ ಆಟ 13 ರನ್‌ಗೆ ಕೊನೆಗೊಂಡಿತು. ಹೀಗಾಗಿ ಹಾರ್ದಿಕ್ ಪಾಂಡ್ಯ ಬಳಗ ಒತ್ತಡಕ್ಕೆ ಸಿಲುಕಿತ್ತು.
ಈ ಹಂತದಲ್ಲಿ ಜೊತೆಯಾದ ನಾಯಕ ಪಾಂಡ್ಯ ಮತ್ತು ದೀಪಕ್ ಹೂಡ ಐದನೇ ವಿಕೆಟ್ ಪಾಲುದಾರಿಕೆಯಲ್ಲಿ 15 ರನ್ ಗಳಿಸಿದ್ದರು. ಪಾಂಡ್ಯ 30 ಮತ್ತು ಹೂಡಾ 9 ರನ್ ಗಳಿಸಿ ಆಸರೆಯಾಗಿದ್ದರು. ತಂಡದ ಮೊತ್ತ 9 ಓವರ್‌ಗಳ ಅಂತ್ಯಕ್ಕೆ 4 ವಿಕೆಟ್‌ಗೆ 75 ರನ್ ಆಗಿತ್ತು.
ಮಳೆ ಹೆಚ್ಚಾದ್ದರಿಂದ ಪಂದ್ಯವನ್ನು ನಿಲ್ಲಿಸಿ, ಡಕ್ವರ್ಥ್ ಲೂಯಿಸ್ ನಿಯಮದನ್ವಯ ಟೈ ಎಂದು ಘೋಷಿಸಲಾಯಿತು. ಭಾರತದ ಖಾತೆಯಲ್ಲಿ 75ಕ್ಕಿಂತ ಹೆಚ್ಚು ಅಥವಾ ಕಡಿಮೆ ರನ್ ಇದ್ದಿದ್ದರೆ, ಗೆಲುವು ಇಲ್ಲವೇ ಸೋಲು ನಿರ್ಧಾರವಾಗುತ್ತಿತ್ತು.
ನಾಲ್ಕು ವಿಕೆಟ್ ಪಡೆದಮೊಹಮ್ಮದ್ ಸಿರಾಜ್ ಪಂದ್ಯಶ್ರೇಷ್ಠರೆನಿಸಿದರೆ, ಕಳೆದ ಪಂದ್ಯದಲ್ಲಿ ಅಜೇಯ ಶತಕ ಸೇರಿ ಒಟ್ಟು 124 ರನ್ ಕೆಲಹಾಕಿದಸೂರ್ಯ ಸರಣಿಶ್ರೇಷ್ಠ ಪ್ರಶಸ್ತಿ ಪಡೆದರು.
ಭಾರತಕ್ಕೆ ಸರಣಿ
ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯವೂ ಮಳೆಯಿಂದಾಗಿ ರದ್ದಾಗಿತ್ತು. ಎರಡನೇ ಪಂದ್ಯದಲ್ಲಿ ಭಾರತ 65 ರನ್ ಅಂತರದ ಗೆಲುವು ಸಾಧಿಸಿತ್ತು. ಇದೀಗ ಮೂರನೇ ಪಂದ್ಯ ಟೈ ಆಗಿರುವುದರಿಂದ ಭಾರತ 1–0 ಅಂತರದಲ್ಲಿ ಸರಣಿ ಕೈ ವಶ ಮಾಡಿಕೊಂಡಿತು.
ಉಭಯ ತಂಡಗಳು ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯಲ್ಲಿ ಸೆಣಸಾಟ ನಡೆಸಲಿವೆ. ಪಂದ್ಯಗಳು ಕ್ರಮವಾಗಿ ನವೆಂಬರ್ 25, ನವೆಂಬರ್ 27 ಹಾಗೂ ನವೆಂಬರ್ 30ರಂದು ನಡೆಯಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.