ADVERTISEMENT

IND vs NZ | ಎಜಾಜ್ ಮ್ಯಾಜಿಕ್; ಭಾರತದ ಎದುರು ಕ್ಲೀನ್ ಸ್ವೀಪ್ ಸಾಧಿಸಿದ ಕಿವೀಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ನವೆಂಬರ್ 2024, 7:41 IST
Last Updated 3 ನವೆಂಬರ್ 2024, 7:41 IST
<div class="paragraphs"><p>ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮೂರನೇ ಟೆಸ್ಟ್‌ ಪಂದ್ಯವನ್ನು ಭಾನುವಾರ ಗೆದ್ದ ನ್ಯೂಜಿಲೆಂಡ್ ತಂಡದ ಆಟಗಾರರು ಸಂಭ್ರಮಪಟ್ಟಿದ್ದು ಹೀಗೆ.... </p></div>

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮೂರನೇ ಟೆಸ್ಟ್‌ ಪಂದ್ಯವನ್ನು ಭಾನುವಾರ ಗೆದ್ದ ನ್ಯೂಜಿಲೆಂಡ್ ತಂಡದ ಆಟಗಾರರು ಸಂಭ್ರಮಪಟ್ಟಿದ್ದು ಹೀಗೆ....

   

-ಪಿಟಿಐ ಚಿತ್ರ

ಮುಂಬೈ: ಆಗ ಗಂಟೆ 12.23. ಭಾನುವಾರ ಮಧ್ಯಾಹ್ನ ಮುಂಬೈ ಮಹಾನಗರಿಯ ಜನಜೀವನ ಎಂದಿನಂತೆ ಇತ್ತು. ಆದರೆ ವಾಂಖೆಡೆ ಕ್ರೀಡಾಂಗಣದ ಒಳಗೆ ಸೇರಿದ್ದ 20,000 ಪ್ರೇಕ್ಷಕರಲ್ಲಿ ಅಸಹಜ ಮೌನ ಆವರಿಸಿದ್ದು ಎಲ್ಲರೂ ತದೇಕಚಿತ್ತರಾಗಿ ದೈತ್ಯ ಪರದೆಯತ್ತ ನೋಡುತ್ತಿದ್ದರು.

ADVERTISEMENT

ರಿಷಭ್ ಪಂತ್ ಅವರು ಔಟ್‌ ಅಥವಾ ನಾಟೌಟ್‌ ಎಂಬ ತೀರ್ಮಾನ ವಾಗಬೇಕಿತ್ತು. ಅವರೆಲ್ಲ ನಾಟೌಟ್‌ ಎಂದು ಉದ್ಗರಿಸಲಾರಂಭಿಸಿದರು. ಪಂತ್‌ ‘ಕಾಟ್‌ ಬಿಹೈಂಡ್‌’ ಆಗಿದ್ದಾರೆ ಎಂಬ ಬೌಲರ್ ಮನವಿಗೆ ಮೈದಾನದಲ್ಲಿದ್ದ ಅಂಪೈರ್‌ ನಾಟೌಟ್ ತೀರ್ಪು ನೀಡಿದ್ದರು. ಟಿ.ವಿ. ಅಂಪೈರ್‌ ಪಾಲ್‌ ರೈಫೆಲ್ ಕೂಡ ಹಾಗೇ ಹೇಳಬಹುದೆಂಬ ನಿರೀಕ್ಷೆ ಅವರೆಲ್ಲರದೂ ಆಗಿತ್ತು. ಆದರೆ ಪರದೆಯಲ್ಲಿ ಕೆಂಪು ಬಣ್ಣದಲ್ಲಿ ಔಟ್‌ ಪದ ಮೂಡಿತು. ಎಡಗೈ ಸ್ಪಿನ್ನರ್‌ ಬೌಲರ್ ಎಜಾಜ್ ಪಟೇಲ್ (57ಕ್ಕೆ6) ಅವರನ್ನು ಮುತ್ತಿದ ನ್ಯೂಜಿಲೆಂಡ್ ಆಟಗಾರರು ಅಭಿನಂದಿಸಿದರು. ಕೆಚ್ಚೆದೆಯ 64 ರನ್‌ಗಳ ಆಟ ಈ ರೀತಿ ಅಂತ್ಯಕಾಣಬಹುದೆಂಬ ನಿರೀಕ್ಷೆ ಪಂತ್‌ ಅವರಲ್ಲಿ ಇರಲಿಲ್ಲ. ‘ಚೀಟರ್ಸ್‌, ಚೀಟರ್ಸ್‌’ ಎಂಬ ಕೂಗುಗಳು ಕೇಳಿಬಂದವು. 

ಇದಾಗಿ 40 ನಿಮಿಷಗಳ ನಂತರ ನ್ಯೂಜಿಲೆಂಡ್ ತಂಡ, ಪ್ರೇಕ್ಷಕರ ಗ್ಯಾಲರಿ ಯಲ್ಲಿ ಮೌನ ಆವರಿಸುವಂತೆ ಮಾಡಿತು. ನ್ಯೂಜಿಲೆಂಡ್ ಮೂರನೇ ಟೆಸ್ಟ್ ಪಂದ್ಯವನ್ನು ಎರಡೂವರೆ ದಿನಗಳಲ್ಲಿ 25 ರನ್‌ಗಳಿಂದ ಗೆದ್ದುಕೊಂಡಿತು.

ಭಾರತ ತಂಡ ತವರಿನಲ್ಲಿ ನಡೆದ ಮೂರು ಟೆಸ್ಟ್‌ಗಳ ಸರಣಿಯಲ್ಲಿ ಮೊದಲ ಬಾರಿ ‘ವೈಟ್‌ವಾಷ್‌’ ಕಳಂಕ ಅನುಭವಿಸಬೇಕಾಯಿತು. ಈ ಹಿಂದೆ 2000ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 2–0 ಯಿಂದ ಸೋತರೂ ಆ ಸರಣಿ ಎರಡು ಟೆಸ್ಟ್‌ ಗಳದ್ದಾಗಿತ್ತು. ಇದು ಮೂರು ಪಂದ್ಯಗಳ ಸರಣಿಯಾಗಿದ್ದು, ಭಾರತ ತಂಡದ ಇದು ವರೆಗಿನ ಹೀನಾಯ ಪ್ರದರ್ಶನ ಎನಿಸಿತು.

ಸತತವಾಗಿ 18 ಸರಣಿಗಳನ್ನು ಗೆದ್ದುಬೀಗಿದ್ದ ತಂಡ ತವರಿನಲ್ಲೇ 147 ರನ್‌ಗಳ ಗುರಿಯನ್ನು ತಲುಪಲು ಅಸಮರ್ಥವಾಯಿತು. ಮೊದಲ ಎರಡೂ ಟೆಸ್ಟ್‌ಗಳಲ್ಲಿ (ಬೆಂಗಳೂರು ಮತ್ತು ಪುಣೆ) ಮೊದಲ ಇನಿಂಗ್ಸ್‌ ವೈಫಲ್ಯ ಸೋಲಿಗೆ ಕಾರಣವಾಯಿತು. ಆದರೆ ಇಲ್ಲಿ ಮೊದಲ ಇನಿಂಗ್ಸ್‌ ಮುನ್ನಡೆ ಪಡೆದಿತ್ತು. ಜಡೇಜ ಪಂದ್ಯದಲ್ಲಿ ಎರಡನೇ ಸಲ ಐದು ವಿಕೆಟ್‌ಗಳ ಗೊಂಚಲು ಪಡೆದಿದ್ದರು. ಎರಡನೇ ಇನಿಂಗ್ಸ್‌ನಲ್ಲಿ ಸಾಧಾರಣ ಗುರಿ ಎದುರಾಗಿತ್ತು. ಸಮಯವೂ ಹೇರಳವಾಗೇ ಇತ್ತು.

ಆದರೆ ಬ್ಯಾಟ್ಸ್‌ಮನ್ನರ್ ವೈಫಲ್ಯ ಮುಳುವಾಯಿತು. ರೋಹಿತ್ ‘ಪುಲ್‌’ ಹೊಡೆತಕ್ಕೆ ಆಯ್ದ ಎಸೆತ ಅದಕ್ಕೆ ತಕ್ಕುದಾಗಿರಲಿಲ್ಲ. ತಪ್ಪು ಮಾಡಿ ಮಿಡ್‌ವಿಕೆಟ್‌ ನಲ್ಲಿ ಕ್ಯಾಚಿತ್ತರು. ಶುಭಮನ್ ಗಿಲ್‌, ಎಜಾಜ್‌ ಪಟೇಲ್ ಬೌಲಿಂಗ್‌ನಲ್ಲಿ ಆಫ್‌ ಸ್ಟಂಪ್‌ ಆಚೆ ಬಿದ್ದ ಚೆಂಡನ್ನು ಆಡದೇ ಬಿಟ್ಟರು. ಅದು ಒಳಕ್ಕೆ ತಿರುಗಿ ಬೌಲ್ಡ್‌ ಆಗಬೇಕಾಯಿತು. ವಿರಾಟ್‌ ಕೊಹ್ಲಿ ಅವರ ಬ್ಯಾಟ್‌ನ ಮೇಲಂಚಿಗೆ ತಾಗಿದ ಚೆಂಡು ಸ್ಲಿಪ್‌ನಲ್ಲಿ ಕ್ಯಾಚಾಯಿತು.

ಗ್ಲೆನ್‌ ಫಿಲಿಪ್ಸ್‌ ಬೌಲಿಂಗ್‌ನಲ್ಲಿ ಚೆಂಡು ತಿರುಗಬಹುದೆಂದು ಗ್ರಹಿಸಿ ಯಶಸ್ವಿ ಜೈಸ್ವಾಲ್ ಆಡಹೋದರು. ಆದರೆ ಅದು ನೇರವಾಗಿ ಬಂದು ಪ್ಯಾಡ್‌ಗೆ ಬಡಿದು ಎಲ್‌ಬಿ ಬಲೆಗೆ ಬಿದ್ದರು. ಸರ್ಫರಾಜ್, ಫುಲ್‌ಟಾಸ್‌ ಎಸೆತವನ್ನು ಸ್ವೀಪ್ ಮಾಡಲು ಹೋಗಿ ಡೀಪ್‌ ಸ್ಕ್ವೇರ್‌ನಲ್ಲಿ ಕ್ಯಾಚಿತ್ತರು. 43 ಎಸೆತಗಳ ಅಂತರದಲ್ಲಿ ಭಾರತ 29 ರನ್ನಿಗೆ 5 ವಿಕೆಟ್‌ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು. ಪಿಚ್‌ ಕೂಡ ಹದಗೆಡಲು ಶುರುವಾಗಿತ್ತು.

ಆದರೆ ಪಂತ್ ಆಕ್ರಮಣಕಾರಿಯಾಗಿದ್ದರು. ಮೊದಲ ಇನಿಂಗ್ಸ್‌ನಲ್ಲಿ 60 ರನ್ ಗಳಿಸಿದ್ದ ಎಡಗೈ ಆಟಗಾರ ಮತ್ತೊಮ್ಮೆ ವೇಗವಾಗಿ 64 ರನ್ ಗಳಿಸಿದರು. ಪಿಚ್‌ ಸ್ಥಿತಿ ನೋಡಿದರೆ, ಈ ಇನಿಂಗ್ಸ್‌ಗೆ ಹೆಚ್ಚು ತೂಕ. ಪಂತ್ ಮತ್ತು ರವೀಂದ್ರ ಜಡೇಜ ನಡುವಣ 42 ರನ್‌ಗಳ ಆರನೇ ವಿಕೆಟ್‌ ಜೊತೆಯಾಟದಿಂದ ಈ ಎಲ್ಲ ನಾಟಕೀಯ ತಿರುವು ಕೊನೆಯಾಗುವಂತೆ ಕಂಡಿತು. ಪಂತ್‌, ಈ ಪಂದ್ಯದ ಅತ್ಯುತ್ತಮ ಬೌಲರ್ ಎನಿಸಿದ ಎಜಾಜ್ (160ಕ್ಕೆ11) ಅವರನ್ನು ನಿರಾಯಾಸವಾಗಿ
ಆಡತೊಡಗಿದ್ದರು.

ಈ ಹಂತದಲ್ಲಿ ಜಡೇಜ, ಬ್ಯಾಟ್‌ಗೆ ತಾಗಿದ ಚೆಂಡು ಪ್ಯಾಡ್‌ಗೆ ಸವರಿ ಷಾರ್ಟ್‌ಲೆಗ್‌ನತ್ತ ಹಾರಿದಾಗ ವಿಲ್‌ ಯಂಗ್ ತ‍‍ಪ್ಪು ಮಾಡಲಿಲ್ಲ. 35 ರನ್ ಬಳಿಕ (ಮೊತ್ತ 106) ಪಂತ್ ನಿರ್ಗಮನವು ಸೋಲು ಖಚಿತಪಡಿಸಿತು. ಅವರು ಮುನ್ನುಗ್ಗಿ ಆಡಲು ಅನುವಾಗಿದ್ದರು. ಆದರೆ ಮನಸ್ಸು ಬದಲಾಯಿಸಿ ಪ್ಯಾಡ್‌ನಿಂದ ಚೆಂಡನ್ನು ಆಡಿದರು. ಆದರೆ ಎರಡು ಸದ್ದು ಕೇಳಿದ ತಕ್ಷಣ ಕಿವೀಸ್ ಆಟಗಾರು ಬಲವಾದ ಮನವಿ ಮಾಡಿದರು. ಅಂಪೈರ್ ಇಲಿಂಗ್‌ವರ್ತ್‌ ನಾಟೌಟ್ ನೀಡಿದಾಗ, ಉಳಿದಿದ್ದ ಏಕೈಕ ಮರುಪರಿಶೀಲನೆ ಅವಕಾಶವನ್ನು ಪ್ರವಾಸಿ ತಂಡ ಬಳಸಿತು. ಮರುಪ್ರಸಾರವನ್ನು ವಿವಿಧ ಕೋನಗಳ ಮೂಲಕ ಪರಿಶೀಲಿಸಿದರೂ, ಅವು ಅಸ್ಪಷ್ಟವಾಗಿದ್ದವು. ಆದರೆ ಮೂರನೇ ಅಂಪೈರ್‌ ರೈಫೆಲ್ ಕೊನೆಗೂ, ಔಟ್ ತೀರ್ಪು ನೀಡಲು ನಿರ್ದೇಶಿಸಿದರು.

ಡಬ್ಲ್ಯುಟಿಸಿ ಫೈನಲ್‌: ಭಾರತಕ್ಕೆ ಹೆಚ್ಚಿದ ಆತಂಕ

ದುಬೈ: ಭಾರತ ತಂಡವು 0-3ರಿಂದ ನ್ಯೂಜಿಲೆಂಡ್ ವಿರುದ್ಧ ಸರಣಿ ಸೋತ ನಂತರ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನ ಕಳೆದುಕೊಂಡು, ಎರಡನೇ ಸ್ಥಾನಕ್ಕೆ ಸರಿದಿದೆ.

ಹಾಲಿ ಡಬ್ಲ್ಯುಟಿಸಿ ವರ್ಷದಲ್ಲಿ ಭಾರತಕ್ಕೆ ಇದು ಐದನೇ ಸೋಲು. ಕಿವೀಸ್‌ ವಿರುದ್ಧ ಕೊನೆಯ ಪಂದ್ಯದ ಸೋಲಿನ ಬಳಿಕ ಪಿಸಿಟಿ ಪ್ರಮಾಣ ಶೇ 62.82ರಿಂದ 58.33ಕ್ಕೆ ಇಳಿಸಿದೆ. ಎರಡನೇ ಸ್ಥಾನದಲ್ಲಿದ್ದ ಹಾಲಿ ಚಾಂಪಿಯನ್‌ ಆಸ್ಟ್ರೇಲಿಯಾ (62.50) ಅಗ್ರಸ್ಥಾನಕ್ಕೆ ಏರಿದೆ.

ಸತತ ಮೂರನೇ ಬಾರಿಗೆ ವಿಶ್ವ ಟೆಸ್ಟ್‌ ಚಾಂಪಿಯನ್‌ಪಿಪ್‌ ಫೈನಲ್‌ ತಲುಪುವ ಪ್ರಯತ್ನದಲ್ಲಿದ್ದ ಭಾರತ ತಂಡಕ್ಕೆ ನ್ಯೂಜಿಲೆಂಡ್‌ ತಂಡವು ಹ್ಯಾಟ್ರಿಕ್‌ ಸೋಲಿನ ಆಘಾತ ನೀಡಿದೆ.

ಹಾಲಿ ಡಬ್ಲ್ಯುಟಿಸಿ ವರ್ಷದಲ್ಲಿ ಭಾರತಕ್ಕೆ ಇನ್ನು ಉಳಿದಿರುವುದು ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಐದು ಪಂದ್ಯಗಳು ಮಾತ್ರ. ಫೈನಲ್‌ಗೆ ನೇರ ಅರ್ಹತೆ ಪಡೆಯಲು ಈ ಐದು ಪಂದ್ಯಗಳ ಪೈಕಿ ಕನಿಷ್ಠ ನಾಲ್ಕನ್ನು ಗೆಲ್ಲಲೇಬೇಕಾದ ಒತ್ತಡವಿದೆ. ನ್ಯೂಜಿಲೆಂಡ್‌ ಸರಣಿಗೆ ಮೊದಲು ಭಾರತ ತಂಡವು ಡಬ್ಲ್ಯುಟಿಸಿ ಫೈನಲ್ ತಲುಪುವ ನೆಚ್ಚಿನ ತಂಡವಾಗಿತ್ತು.

ಅಗಾಧ ಸಾಧನೆ: ಲೇಥಮ್

ಮುಂಬೈ: ‘ಈ ಸರಣಿ ನಮ್ಮ‍ಪಾಲಿಗೆ ಅವಿಸ್ಮರಣೀಯ. ಇದೊಂದು ಅಗಾಧ ಸಾಧನೆ. ಮೊದಲ ಟೆಸ್ಟ್‌ ಗೆಲುವು ವಿಶೇಷವಾಗಿತ್ತು. ಎರಡನೇ ಟೆಸ್ಟ್ ಹಾಗೂ ಸರಣಿ ಗೆಲುವು ಅದಕ್ಕಿಂತ ಹೆಚ್ಚು ವಿಶೇಷವಾದುದು’ ಎಂದು ನ್ಯೂಜಿಲೆಂಡ್ ನಾಯಕ ಟಾಮ್ ಲೇಥಮ್ ಸಂತಸ ವ್ಯಕ್ತಪಡಿಸಿದರು.

‘ಈ ಸರಣಿ ಗೆಲುವಿನ ನೈಜ ಖುಷಿಯನ್ನು ತವರಿಗೆ ಮರಳಿದ ನಂತರ ಅನುಭವಿಸುತ್ತೇವೆ. ಇದು ನ್ಯೂಜಿಲೆಂಡ್ ಕ್ರಿಕೆಟ್‌ಗೆ ಮಹತ್ವಪೂರ್ಣ ಗಳಿಗೆ. ನ್ಯೂಜಿಲೆಂಡ್ ಕ್ರಿಕೆಟ್ ಗಳಿಸಿದ ಅತಿ ಶ್ರೇಷ್ಠ ಸರಣಿ ಗೆಲುವು’ ಎಂದು ಅವರು ಬಣ್ಣಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.