ADVERTISEMENT

IND vs NZ | ಮತ್ತೆ ಐದು ವಿಕೆಟ್ ಪಡೆದ ಜಡೇಜ: ಭಾರತದ ಗೆಲುವಿಗೆ 147 ರನ್ ಗುರಿ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2024, 4:14 IST
Last Updated 3 ನವೆಂಬರ್ 2024, 4:14 IST
   

ಮುಂಬೈ: ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಅಮೋಘ ಬೌಲಿಂಗ್‌ ಪ್ರದರ್ಶನ ತೋರಿದ ಅನುಭವಿ ಸ್ಪಿನ್ನರ್‌ ರವೀಂದ್ರ ಜಡೇಜ, ಎರಡನೇ ಇನಿಂಗ್ಸ್‌ನಲ್ಲೂ ಐದು ವಿಕೆಟ್‌ ಗೊಂಚಲು ಸಾಧನೆ ಮಾಡಿದರು.

ಜಡೇಜ ಆಟದ ಬಲದಿಂದ, ಭಾರತ ತಂಡವು ಪ್ರವಾಸಿ ಪಡೆಯನ್ನು ಎರಡನೇ ಇನಿಂಗ್ಸ್‌ನಲ್ಲಿ 174 ರನ್‌ಗಳಿಗೆ ಆಲೌಟ್‌ ಮಾಡಿದ್ದು, 147 ರನ್‌ಗಳ ಗೆಲುವಿನ ಗುರಿ ಪಡೆದಿದೆ.

ಪಂದ್ಯವು ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಮೊದಲ ಇನಿಂಗ್ಸ್‌ನಲ್ಲಿ 28 ರನ್‌ಗಳ ಅಲ್ಪ ಹಿನ್ನಡೆಯೊಂದಿಗೆ ಮತ್ತೆ ಬ್ಯಾಟಿಂಗ್‌ ಆರಂಭಿಸಿದ ನ್ಯೂಜಿಲೆಂಡ್‌, ಎರಡನೇ ದಿನದಾಟದ ಅಂತ್ಯಕ್ಕೆ 43.3 ಓವರ್‌ಗಳಲ್ಲಿ 9 ವಿಕೆಟ್‌ಗಳನ್ನು ಕಳೆದುಕೊಂಡು 171 ರನ್‌ ಗಳಿಸಿತ್ತು.

ADVERTISEMENT

ಇಂದು ಕೇವಲ 14 ಎಸೆತಗಳಲ್ಲೇ ನ್ಯೂಜಿಲೆಂಡ್‌ ಇನಿಂಗ್ಸ್‌ಗೆ ತೆರೆ ಬಿದ್ದಿತು. ಉಳಿದಿದ್ದ ಒಂದು ವಿಕೆಟ್‌, ಮೂರು ರನ್‌ ಗಳಿಸುವಷ್ಟರಲ್ಲಿ ಪತನಗೊಂಡಿತು.

ಸದ್ಯ ಗುರಿ ಬೆನ್ನತ್ತಿರುವ ಭಾರತ 3 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 13 ರನ್ ಗಳಿಸಿದೆ. 11 ರನ್‌ ಗಳಿಸಿದ್ದ ರೋಹಿತ್‌ ಶರ್ಮಾ, ಮ್ಯಾಟ್‌ ಹೆನ್ರಿ ಬೌಲಿಂಗ್‌ನಲ್ಲಿ ಔಟಾಗಿದ್ದಾರೆ. ಹೆನ್ರಿ, ಟೀಂ ಇಂಡಿಯಾ ನಾಯಕನಿಗೆ ಮೊದಲ ಇನಿಂಗ್ಸ್‌ನಲ್ಲೂ ಪೆವಿಲಿಯನ್‌ ದಾರಿ ತೋರಿದ್ದರು.

ಜಡೇಜಗೆ ಹತ್ತು ವಿಕೆಟ್‌
ಮೊದಲ ಇನಿಂಗ್ಸ್‌ನಲ್ಲಿ 65 ರನ್‌ ನೀಡಿ ಐದು ವಿಕೆಟ್‌ ಕಬಳಿಸಿದ್ದ ಜಡೇಜ, ಎರಡನೇ ಇನಿಂಗ್ಸ್‌ನಲ್ಲೂ ಅದೇ ಸಾಧನೆಯನ್ನು ಪುನರಾವರ್ತಿಸಿದರು. 55 ರನ್‌ ನೀಡಿ ಐದು ವಿಕೆಟ್‌ ಗೊಂಚಲನ್ನು ಜೇಬಿಗಿಳಿಸಿಕೊಳ್ಳುವ ಮೂಲಕ, ನ್ಯೂಜಿಲೆಂಡ್‌ ಬ್ಯಾಟಿಂಗ್‌ ಬೆನ್ನೆಲುಬು ಮುರಿದರು.

ಇದು (120 ರನ್‌ಗೆ 10 ವಿಕೆಟ್‌) ಟೆಸ್ಟ್‌ ಕ್ರಿಕೆಟ್‌ನಲ್ಲಿ ಜಡೇಜ ಅವರ ಎರಡನೇ ಅತ್ಯುತ್ತಮ ಬೌಲಿಂಗ್‌ ಸಾಧನೆಯಾಗಿದೆ. ಕಳೆದ ವರ್ಷ ಆಸ್ಟ್ರೇಲಿಯಾ ವಿರುದ್ಧ 110 ರನ್‌ ನೀಡಿ 10 ವಿಕೆಟ್‌ ಪಡೆದಿದ್ದರು.

ಆದಾಗ್ಯೂ, ಜಡೇಜ ಟೆಸ್ಟ್ ಪಂದ್ಯವೊಂದರ ಎರಡೂ ಇನಿಂಗ್ಸ್‌ಗಳಲ್ಲಿ ಐದು ವಿಕೆಟ್‌ ಪಡೆದದ್ದು ಇದೇ ಮೊದಲು. ಅದರೊಂದಿಗೆ ಅವರು, ಈ ಸಾಧನೆ ಮಾಡಿದ ಭಾರತದ ಎರಡನೇ ಆಟಗಾರ ಎನಿಸಿದರು. ಇದಕ್ಕೂ ಮೊದಲು, ಆರ್‌.ಅಶ್ವಿನ್‌ ಎರಡು ಸಲ ಈ ಸಾಧನೆ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.