ADVERTISEMENT

IND v NZ Test|ಬಿಸಿಲ ಝಳದಲ್ಲಿ ಬೆಳಗಿದ ಜಡೇಜ; ಮತ್ತೆ ಎಡವಿದ ಭಾರತದ ಬ್ಯಾಟರ್‌ಗಳು

ವಿಲ್ ಯಂಗ್, ಡ್ಯಾರಿಲ್ ಮಿಚೆಲ್ ಅರ್ಧಶತಕ; ವಾಷಿಂಗ್ಟನ್‌ಗೆ 4 ವಿಕೆಟ್

ರೋಶನ್‌ ತ್ಯಾಗರಾಜನ್‌
Published 1 ನವೆಂಬರ್ 2024, 23:30 IST
Last Updated 1 ನವೆಂಬರ್ 2024, 23:30 IST
<div class="paragraphs"><p>ವಿಕೆಟ್ ಗಳಿಸಿದ ಭಾರತದ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಅವರನ್ನು ರವೀಂದ್ರ ಜಡೇಜ ಮತ್ತು ವಿರಾಟ್ ಕೊಹ್ಲಿ ಅಭಿನಂದಿಸಿದರು&nbsp; &nbsp;</p></div>

ವಿಕೆಟ್ ಗಳಿಸಿದ ಭಾರತದ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಅವರನ್ನು ರವೀಂದ್ರ ಜಡೇಜ ಮತ್ತು ವಿರಾಟ್ ಕೊಹ್ಲಿ ಅಭಿನಂದಿಸಿದರು   

   

–ಪಿಟಿಐ ಚಿತ್ರ

ಮುಂಬೈ: ಧರಿಸಿದ್ದ ಪೋಷಾಕುಗಳು ತೊಯ್ದು ತೊಪ್ಪೆಯಾಗಿದ್ದವು. ಚೆಂಡು ತೇವವಾಗಿತ್ತು, ಹೆಲ್ಮೆಟ್‌ಗಳಿಂದಲೂ ಬೆವರಿನ ಹನಿಗಳು ಉರುಳುತ್ತಿದ್ದವು. ಅಪರೂಪಕ್ಕೊಮ್ಮೆ ತಂಗಾಳಿಯು ಹೀಗೆ ಬಂದು ಹಾಗೆ ಹೋಗುತ್ತಿತ್ತು...

ADVERTISEMENT

ಇದು, ಶುಕ್ರವಾರ ವಾಂಖೆಡೆ ಕ್ರೀಡಾಂಗಣದಲ್ಲಿ ‘ಬೆವರಿನ ಹಬ್ಬ’ದ ಝಲಕ್. ಆಡುತ್ತಿದ್ದವರು ಮತ್ತು ನೋಡುತ್ತಿದ್ದವರೆಲ್ಲರೂ ಬೆವರಿನ ಮುದ್ದೆಯಾಗಿದ್ದರು. ಅದರಲ್ಲೂ ನ್ಯೂಜಿಲೆಂಡ್ ತಂಡದವರಿಗೆ ಈ ಪ್ರವಾಸದಲ್ಲಿ ಇಂತಹ ಅನುಭವವಾಗಿದ್ದು ಇದೇ ಮೊದಲು. ಭಾರತ ಮತ್ತು ನ್ಯೂಜಿಲೆಂಡ್ ನಡುವಣ ಸರಣಿಯ ಮೊದಲ ಪಂದ್ಯ ನಡೆದಿದ್ದ ಬೆಂಗಳೂರು ಮತ್ತು ಎರಡನೇ ಪಂದ್ಯವಾಗಿದ್ದ ಪುಣೆ ನಗರಗಳ ವಾತಾವರಣಕ್ಕಿಂತ ಇದು ಭಿನ್ನ. 

ಮುಂಬೈನ ಬಿಸಿಲ ಬೇಗೆಯನ್ನು ನಿಭಾಯಿಸಲು ನ್ಯೂಜಿಲೆಂಡ್ ಆಟಗಾರರು ಹಲವು ರೀತಿಯಲ್ಲಿ ಪ್ರಯತ್ನಿಸಿದರು. ಐಸ್‌ ಪ್ಯಾಕ್‌ ಬಳಸುತ್ತಿದ್ದರು. ದೇಹದಲ್ಲಿ ನೀರಿನ ಅಂಶ ನಿರ್ವಹಿಸುವ ಮಾತ್ರೆಗಳನ್ನು ಸೇವಿಸಿದರು. ಪಾನೀಯ ವಿರಾಮದ ಸಂದರ್ಭದಲ್ಲಿ ಛತ್ರಿ ಮತ್ತು ಕುರ್ಚಿಗಳನ್ನು ಆಟಗಾರರು ಬಳಸಿದರು. ಭಾರತದ ಆಟಗಾರರಿಗೂ ‘ಬಿಸಿ’ ತಟ್ಟಿತ್ತು. ಆದರೆ ಅವರು ಚೆಂಡು ಕೈ ಜಾರಿಹೋಗದಂತೆ ನಿರ್ವಹಿಸಿದರು.

ಈ ವಾತಾವರಣದ ನಡುವೆಯೂ ಆ ಮೂವರು ಮಾತ್ರ ಗಟ್ಟಿಯಾಗಿ ನಿಂತರು. ಗಮನ ಸೆಳೆಯುವ ಆಟವಾಡಿದರು. ನ್ಯೂಜಿಲೆಂಡ್‌ ತಂಡದ ಬ್ಯಾಟರ್‌ಗಳಾದ  ವಿಲ್ ಯಂಗ್ (71; 138ಎ),  ಡ್ಯಾರಿಲ್ ಮಿಚೆಲ್ (82; 129ಎ) ಹಾಗೂ ಆತಿಥೇಯ ತಂಡದ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ (65ಕ್ಕೆ5)  ಅವರೇ ಆ ಆಟಗಾರರು. ಜಡೇಜ ಅವರಿಗೆ ವಾಷಿಂಗ್ಟನ್ ಸುಂದರ್ (81ಕ್ಕೆ4) ಉತ್ತಮ ಜೊತೆ ನೀಡಿದರು. ಇದರಿಂದಾಗಿ  ಪ್ರವಾಸಿ ತಂಡವನ್ನು ಮೊದಲ ಇನಿಂಗ್ಸ್‌ನಲ್ಲಿ 235 ರನ್‌ಗಳಿಗೆ ಕಟ್ಟಿಹಾಕಲು ಸಾಧ್ಯವಾಯಿತು. ಜಡೇಜ ತಮ್ಮ ಒಂದೇ ಸ್ಪೆಲ್‌ನಲ್ಲಿ 22 ಓವರ್‌ಗಳನ್ನು ಬೌಲಿಂಗ್ ಮಾಡಿದರು. ಇನಿಂಗ್ಸ್‌ನ ಮೊದಲ ವಿಕೆಟ್ ಒಂದೇ ವೇಗಿ ಆಕಾಶ್ ದೀಪ್ ಅವರ ಪಾಲಾಯಿತು. ಮತ್ತೊಬ್ಬ ವೇಗಿ ಸಿರಾಜ್ ಮತ್ತು ಅನುಭವಿ ಸ್ಪಿನ್ನರ್ ಆರ್. ಅಶ್ವಿನ್ ಅವರಿಗೆ ವಿಕೆಟ್ ಒಲಿಯಲಿಲ್ಲ. 

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನ್ಯೂಜಿಲೆಂಡ್ ತಂಡವು ಸಾಧಾರಣ ಮೊತ್ತಕ್ಕೆ ಆಲೌಟ್ ಆಯಿತು. ಆದರೆ ಇದರ ಲಾಭ ಪಡೆಯುವಲ್ಲಿ ಭಾರತ ಮತ್ತೆ ಎಡವಿದೆ. ಇನಿಂಗ್ಸ್ ಆರಂಭಿಸಿದ ಆತಿಥೇಯ ತಂಡವು ದಿನದಾಟದ ಮುಕ್ತಾಯಕ್ಕೆ 19 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 86 ರನ್ ಗಳಿಸಿದೆ. ಶುಭಮನ್ ಗಿಲ್ (ಬ್ಯಾಟಿಂಗ್ 31) ಮತ್ತು ರಿಷಭ್ ಪಂತ್ (ಬ್ಯಾಟಿಂಗ್ 1) ಕ್ರೀಸ್‌ನಲ್ಲಿದ್ದಾರೆ. 

ಯಶಸ್ವಿ ಜೈಸ್ವಾಲ್ (30; 52ಎ) ಮತ್ತು ನಾಯಕ ರೋಹಿತ್ ಶರ್ಮಾ (18; 18ಎ) ಉತ್ತಮ ಆರಂಭ ನೀಡುವ ಪ್ರಯತ್ನ ಮಾಡಿದರು. ಆದರೆ ಮ್ಯಾಟ್ ಹೆನ್ರಿ ಎಸೆತವನ್ನು ಆಡುವ ಭರದಲ್ಲಿ ರೋಹಿತ್  ಅವರು ಟಾಮ್‌ ಲೇಥಮ್‌ಗೆ ಕ್ಯಾಚ್ ಕೊಟ್ಟಾಗ ತಂಡದ ಮೊತ್ತ 25 ರನ್‌ಗಳಾಗಿತ್ತು. ಯಶಸ್ವಿ ಮತ್ತು ಗಿಲ್ ಅವರು ಎರಡನೇ ವಿಕೆಟ್ ಜೊತೆಯಾಟದಲ್ಲಿ  53 ರನ್ ಸೇರಿಸಿದರು. ಇದರಿಂದಾಗಿ ಇನಿಂಗ್ಸ್‌ ಸ್ಥಿರಗೊಂಡಂತೆ ಕಂಡಿತ್ತು. ಆದರೆ ಸ್ಪಿನ್ನರ್ ಎಜಾಜ್ ಪಟೇಲ್ ತಮ್ಮ ಒಂದೇ ಓವರ್‌ನಲ್ಲಿ ಯಶಸ್ವಿ ಜೈಸ್ವಾಲ್ ಅವರನ್ನು ಬೌಲ್ಡ್ ಮಾಡಿದರು. ರಾತ್ರಿ ಕಾವಲುಗಾರನಾಗಿ ಬಂದ ಮೊಹಮ್ಮದ್ ಸಿರಾಜ್ ಅವರನ್ನೂ ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದರು. 

ಬೌಂಡರಿ ಗಳಿಸಿ ತಮ್ಮ ರನ್ ಖಾತೆ ತೆರೆದ ವಿರಾಟ್ ರನೌಟ್ ಆದರು. ರಿಷಭ್ ಕ್ರೀಸ್‌ಗೆ ಬಂದರು. 

12 ವರ್ಷದ ಸಾಧನೆ ಅಮೋಘವಾದದ್ದು: ಜಡೇಜ

‘ನಾನು ಆಡುವವರೆಗೂ ಭಾರತ ತಂಡವು ಒಂದೂ ಟೆಸ್ಟ್ ಸರಣಿ ಸೋಲುವುದಿಲ್ಲ ಎಂದುಕೊಂಡಿದ್ದೆ. ಈಗ ಸೋತಿದ್ದೇವೆ. ನಾನು  ಏನೇ ಯೋಚಿಸಿದರೂ ಅದು ಹೇಗೋ ಆಗಿಬಿಟ್ಟಿರುತ್ತದೆ’ ಎಂದು ಭಾರತ ತಂಡದ ಸ್ಪಿನ್ನರ್ ರವಿಂದ್ರ ಜಡೇಜ ನಕ್ಕರು. 

ಶುಕ್ರವಾರ ದಿನದಾಟದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಜನರು ನಮ್ಮ ಮೇಲೆ ಅಗಾಧವಾದ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇಷ್ಟು ವರ್ಷ ನಾವು ಮಾಡಿರುವ ಸಾಧನೆಯಿಂದಾಗಿ ಸಹಜವಾಗಿಯೇ ಅವರ ನಿರೀಕ್ಷೆ ಉತ್ತುಂಗದಲ್ಲಿರುವುದು ಸಹಜ. ಕಳೆದ 12 ವರ್ಷಗಳಲ್ಲಿ ನಾವು ಕೇವಲ 5 ಟೆಸ್ಟ್ ಪಂದ್ಯಗಳನ್ನು ಮಾತ್ರ ಸೋತಿದ್ದೆವು. ತಂಡದ ಪಾಲಿಗೆ ಇದು ಬಹಳ ಉತ್ತಮವಾದ ಸಾಧನೆ. ಯಾವಾಗ ನಿರೀಕ್ಷೆಗಳು ಅಪಾರವಾಗಿರುತ್ತವೋ ಆಗ ಸೋಲುಗಳನ್ನು ಅರಗಿಸಿಕೊಳ್ಳುವುದು ಕಷ್ಟ. ಇದೆಲ್ಲವೂ ಆಟದಲ್ಲಿ ನಡೆಯುತ್ತದೆ. ಇದನ್ನು ಪಾಠವಾಗಿ ನಮ್ಮ ತಂಡವು ತೆಗೆದುಕೊಂಡಿದೆ’ ಎಂದರು.  ‘ಈ ರೀತಿ  ನಡೆಯುವುದು ಸಾಮಾನ್ಯ. ಅದಕ್ಕಾಗಿ ನಾವು ಯಾರನ್ನೂ ದೂಷಿಸುವಂತಿಲ್ಲ. ಎಲ್ಲರೂ ಸಣ್ಣಪುಟ್ಟ ತಪ್ಪುಗಳನ್ನು ಮಾಡುತ್ತಾರೆ. ಆದರೆ ನಮ್ಮ ಬ್ಯಾಟರ್‌ಗಳು ಜೊತೆಯಾಟಗಳನ್ನು ಬೆಳೆಸಬೇಕು. ಈ ಹಂತದಲ್ಲಿ ನಮ್ಮ ನಿಯಂತ್ರಣದಲ್ಲಿರುವುದೂ ಅಷ್ಟೇ‘ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.