ADVERTISEMENT

IND vs NZ Test: ಬೆಂಗಳೂರಿನಲ್ಲಿ ಕ್ರಿಕೆಟ್‌ ಅಭಿಮಾನದ ‘ಮಳೆ’

ಗಿರೀಶ ದೊಡ್ಡಮನಿ
Published 16 ಅಕ್ಟೋಬರ್ 2024, 5:25 IST
Last Updated 16 ಅಕ್ಟೋಬರ್ 2024, 5:25 IST
<div class="paragraphs"><p>ಚಿನ್ನಸ್ವಾಮಿ ಮೈದಾನದ ಹೊರಗೆ ಸರತಿ ಸಾಲು</p></div>

ಚಿನ್ನಸ್ವಾಮಿ ಮೈದಾನದ ಹೊರಗೆ ಸರತಿ ಸಾಲು

   

– ‍ಪ್ರಜಾವಾಣಿ ಚಿತ್ರ

ಬೆಂಗಳೂರು: ಕಳೆದ ಎರಡು ದಿನಗಳಿಂದ ನಗರದಲ್ಲಿ ಮಳೆಯ ಆರ್ಭಟ ಜೋರಾಗಿದೆ. ಇನ್ನೂ ಎರಡ್ಮೂರು ದಿನ ಹೀಗೆ ಎನ್ನಲಾಗುವ ವರದಿಗಳೂ ಇವೆ. ಆದರೆ ಉದ್ಯಾನನಗರಿಯ ಕ್ರಿಕೆಟ್‌ ಪ್ರಿಯರನ್ನು ಮಾತ್ರ ಈ ಮಳೆಗೆ ತಡೆಯಲು ಆಗಿಲ್ಲ.

ADVERTISEMENT

ಬುಧವಾರದಿಂದ ಇಲ್ಲಿ ಆಯೋಜನೆಗೊಂಡಿರುವ ಭಾರತ–ನ್ಯೂಜಿಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯ ಇದಕ್ಕೆ ಸಾಕ್ಷಿ. ಧೋ ಎಂದು ಮಳೆ ಸುರಿಯುತ್ತಿದ್ದರೂ ಬೆಳಿಗ್ಗೆ 8.30ಕ್ಕೇ ಬಂದು ಗೇಟ್‌ಗಳ ಮುಂದೆ ಜನರು ಸಾಲುಗಟ್ಟಿದ್ದರು.

ಸತತವಾಗಿ ಸುರಿಯುತ್ತಿರುವ ಮಳೆಗೂ ಜಗ್ಗದ ಜನರು ‘ನಮ್ಮನ್ನು ಒಳಗೆ ಬಿಡಿ, ಕುಳಿತುಕೊಳ್ಳುತ್ತೇವೆ’ ಎಂದು ಭದ್ರತಾ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸುತ್ತಿದ್ದರು.

ಕ್ರೀಡಾಂಗಣದ ಮುಖ್ಯದ್ವಾರದ ಬಳಿ ಪ್ರೇಕ್ಷಕರೊಬ್ಬರು, ‘ದುಡ್ಡು ಕೊಟ್ಟು ಟಿಕೆಟ್ ಖರೀದಿಸಿದ್ದೇವೆ. ನಾವು ಮಳೆಯಲ್ಲಿ ನಿಂತಿರಬೇಕಾ. ಒಳಗೆ ಬಿಡಿ. ಆಟ ಶುರುವಾಗುವವರೆಗೂ ಕುಳಿತಿರುತ್ತೇವೆ. ನಮ್ಮನ್ನು ಒಳಗೆ ಬಿಟ್ಟರೆ ನಿಮಗೇನು ಕಷ್ಟ’ ಎಂದು ಭದ್ರತಾ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದರು.

'10.30ಕ್ಕೆ ಒಳಗೆ ಬಿಡುತ್ತೇವೆ. ಇನ್ನೂ ಪಂದ್ಯ ಆರಂಭವಾಗಿಲ್ಲ’ ಎಂದು ಪೊಲೀಸರು ಉತ್ತರಿಸುತ್ತಿದ್ದರು.

ಮಳೆ ಜೋರಾಗಿಯೇ ಇದ್ದ ಕಾರಣ ಉಭಯ ತಂಡಗಳ ಆಟಗಾರರೂ ಕ್ರೀಡಾಂಗಣಕ್ಕೆ ನಿಗದಿಯ ವೇಳೆಗೆ ಬರಲಿಲ್ಲ. ಭಾರತ ತಂಡದ ಬ್ಯಾಟರ್ ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್ ಮತ್ತು ನೆರವು ಸಿಬ್ಬಂದಿಯ ಕೆಲವರು ಕಾರುಗಳಲ್ಲಿ 9.25ರ ಸುಮಾರಿಗೆ ಕ್ರೀಡಾಂಗಣಕ್ಕೆ ಬಂದರು. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ)ಗೆ ತೆರಳಿ ತಾಲೀಮು ನಡೆಸಿದರು.

‘ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಯಾವುದೇ ಕ್ರಿಕೆಟ್ ಪಂದ್ಯ ನಡೆದರೂ ಜನರು ಸೇರುತ್ತಿದ್ದಾರೆ. ನಾವು ಐಪಿಎಲ್ ಅಷ್ಟೇ ಅಲ್ಲ. ಯಾವುದೇ ಪಂದ್ಯಕ್ಕಾದರೂ ಬರುತ್ತೇವೆ. ಎರಡು ವರ್ಷದ ನಂತರ ಇಲ್ಲಿ ಟೆಸ್ಟ್ ನಡೆಯುತ್ತಿದೆ. ಅದಕ್ಕಾಗಿ ಟಿಕೆಟ್ ಖರೀದಿಸಿದ್ದೇವೆ. ಮಳೆ ನಿಂತರೆ ಪಂದ್ಯ ನಡೆದೇ ನಡೆಯುತ್ತದೆ ಎನ್ನುವ ವಿಶ್ವಾಸವಿದೆ’ ಎಂದು 19ನೇ ಗೇಟ್ ಮುಂದಿದ್ದ ಪ್ರೇಕ್ಷಕರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.