ADVERTISEMENT

ICC Womens World Cup: ಭಾರತದ ವಿರುದ್ಧ ನ್ಯೂಜಿಲೆಂಡ್‌ಗೆ ಗೆಲುವು

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2022, 11:19 IST
Last Updated 10 ಮಾರ್ಚ್ 2022, 11:19 IST
ನ್ಯೂಜಿಲೆಂಡ್‌ ತಂಡದ ಸಂಭ್ರಮ
ನ್ಯೂಜಿಲೆಂಡ್‌ ತಂಡದ ಸಂಭ್ರಮ   

ಹ್ಯಾಮಿಲ್ಟನ್ (ಪಿಟಿಐ): ಎಮಿ ಸೆಟರ್ಥ್‌ವೇಟ್ ಅಮೋಘ ಬ್ಯಾಟಿಂಗ್‌ನಿಂದಾಗಿ ಆತಿಥೇಯ ನ್ಯೂಜಿಲೆಂಡ್ ತಂಡವು ಮಹಿಳೆಯರ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಭಾರತದ ಎದುರು ಜಯಭೇರಿ ಬಾರಿಸಿತು.

ಹರ್ಮನ್‌ಪ್ರೀತ್ ಕೌರ್ (71;63ಎ, 4X6, 6X2) ಮತ್ತು ಚೆಂದದ ಬ್ಯಾಟಿಂಗ್ ಮತ್ತು ಪೂಜಾ ವಸ್ತ್ರಕರ್ (34ಕ್ಕೆ4) ಪರಿಣಾಮಕಾರಿ ಬೌಲಿಂಗ್ ಹೊರತಾಗಿಯೂ ಭಾರತಕ್ಕೆ ಗೆಲುವಿನ ಸಂಭ್ರಮ ಆಚರಿಸಲು ಸಾಧ್ಯವಾಗಲಿಲ್ಲ.

ಗುರುವಾರ ಸೆಡಾನ್ ಪಾರ್ಕ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಪೂಜಾ ಮತ್ತು ಕರ್ನಾಟಕದ ರಾಜೇಶ್ವರಿ ಗಾಯಕವಾಡ್ (46ಕ್ಕೆ2) ಅವರಿಬ್ಬರ ಉತ್ತಮ ಬೌಲಿಂಗ್‌ನಿಂದಾಗಿ ಕಿವೀಸ್ ತಂಡವು 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 260 ರನ್ ಗಳಿಸಿತು. ಕಿವೀಸ್ ತಂಡಕ್ಕೆ ಉತ್ತಮ ಆರಂಭ ಸಿಕ್ಕಿರಲಿಲ್ಲ. ಈ ಹಂತದಲ್ಲಿ ಎಮಿ (75; 84ಎ) ಮತ್ತು ಅಮೆಲಿಯಾ ಕೆರ್ (50; 64ಎ) ಅರ್ಧಶತಕ ಗಳಿಸಿದರು. ಇದರಿಂದಾಗಿ ಹೋರಾಟದ ಮೊತ್ತ ಪೇರಿಸಲು ಸಾಧ್ಯವಾಯಿತು.

ADVERTISEMENT

ಅದಕ್ಕುತ್ತರವಾಗಿ ಭಾರತ ತಂಡವು 46.4 ಓವರ್‌ಗಳಲ್ಲಿ 198 ರನ್‌ ಗಳಿಸಿ ಎಲ್ಲ ವಿಕೆಟ್‌ ಕಳೆದುಕೊಂಡಿತು. ಆತಿಥೇಯ ತಂಡದ ಲಿಯಾ ತಹುಹು (17ಕ್ಕೆ3) ಮತ್ತು ಅಮೆಲಿಯಾ ಕೆರ್ (56ಕ್ಕೆ3) ಅವರ ಪರಿಣಾಮಕಾರಿ ದಾಳಿಯ ಮುಂದೆ ಭಾರತದ ಬ್ಯಾಟರ್‌ಗಳು ಕುಸಿದರು. ಆದರೆ, ಅನುಭವಿ ಆಟಗಾರ್ತಿಯರಾದ ಹರ್ಮನ್‌ ಪ್ರೀತ್ ಕೌರ್ ಮತ್ತು ಮಿಥಾಲಿರಾಜ್ ತಂಡದ ಇನಿಂಗ್ಸ್‌ಗೆ ಬಲ ತುಂಬಲು ಪ್ರಯತ್ನಿಸಿದರು.

ಆದರೆ ಉಳಿದ ಬ್ಯಾಟರ್‌ಗಳಿಂದ ಉತ್ತಮ ಬೆಂಬಲ ಲಭಿಸಲಿಲ್ಲ. ವಿಶ್ವಕಪ್ ಟೂರ್ನಿಗೂ ಮುನ್ನ ನಡೆದಿದ್ದ ಏಕದಿನ ಸರಣಿಯಲ್ಲಿಯೂ ಮಿಥಾಲಿ ಬಳಗವು ಕಿವೀಸ್ ಎದುರು ಸೋಲನುಭವಿಸಿತ್ತು.

ಸತತ ವೈಫಲ್ಯ ಅನುಭವಿಸಿರುವ ಶಫಾಲಿ ವರ್ಮಾ ಅವರಿಗೆ ಈ ಪಂದ್ಯದಲ್ಲಿ ಕಣಕ್ಕಿಳಿಯುವ ಅವಕಾಶ ನೀಡಲಿಲ್ಲ. ಯಷ್ಟಿಕಾ ಭಾಟಿಯಾ ಮತ್ತು ಸ್ಮೃತಿ ಮಂದಾನ ಅವರು ಇನಿಂಗ್ಸ್‌ ಆರಂಭಿಸಿದರು. ಆರನೇ ಓವರ್‌ನಲ್ಲಿಯೇ ಮಂದಾನ (6 ರನ್) ಅವರ ವಿಕೆಟ್ ಪಡೆಯುವಲ್ಲಿ ಅಮೆಲಿಯಾ ಕೆರ್ ಯಶಸ್ವಿಯಾದರು.

ಹತ್ತನೇ ಓವರ್‌ನಲ್ಲಿ ದೀಪ್ತಿ ಶರ್ಮಾ ವಿಕೆಟ್ ಗಳಿಸಿದ ತಹುಹು,ತಾಳ್ಮೆಯ ಬ್ಯಾಟಿಂಗ್ ಮಾಡಿದ ಯಷ್ಟಿಕಾ (28; 59ಎ) ಅವರನ್ನೂ 20ನೇ ಓವರ್‌ನಲ್ಲಿ ಪೆವಿಲಿಯನ್‌ಗೆ ಕಳಿಸಿದರು. ಕೇವಲ 50 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡ ತಂಡದ ರನ್‌ ಗಳಿಕೆಯ ವೇಗವೂ ಕುಸಿಯಿತು.

ಈ ಹಂತದಲ್ಲಿ ಮಿಥಾಲಿ ಮತ್ತು ಹರ್ಮನ್‌ಪ್ರೀತ್ ಇನಿಂಗ್ಸ್‌ಗೆ ಬಲ ತುಂಬುವ ಪ್ರಯತ್ನ ನಡೆಸಿದರು. ಆದರೆ 30ನೇ ಓವರ್‌ನಲ್ಲಿ ಮಿಥಾಲಿ ಮತ್ತು ರಿಚಾ ಘೋಷ್ ಅವರಿಬ್ಬರ ವಿಕೆಟ್‌ ಕಬಳಿಸಿದ ಅಮೆಲಿಯಾ ಭಾರತ ತಂಡದ ಗೆಲುವಿನ ಹಾದಿಯನ್ನು ಮತ್ತಷ್ಟು ಕಠಿಣಗೊಳಿಸಿದರು. ಹರ್ಮನ್‌ಪ್ರೀತ್ ಮಾತ್ರ ಏಕಾಂಗಿ ಹೋರಾಟ ನಡೆಸಿದರು.

ಭಾರತ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಎದುರು ಜಯಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.