ADVERTISEMENT

ಲೆಜೆಂಡ್ಸ್ ಕ್ರಿಕೆಟ್: ಫೈನಲ್‌ನಲ್ಲಿ ಪಾಕಿಸ್ತಾನ ಎದುರು ಗೆದ್ದು ಬೀಗಿದ ಭಾರತ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಜುಲೈ 2024, 2:16 IST
Last Updated 14 ಜುಲೈ 2024, 2:16 IST
<div class="paragraphs"><p>ಭಾರತ ತಂಡದ ನಾಯಕ ಯುವರಾಜ್ ಸಿಂಗ್‌ ಹಾಗೂ ಪಾಕಿಸ್ತಾದ ಶಾಹಿದ್‌ ಅಫ್ರಿದಿ</p></div>

ಭಾರತ ತಂಡದ ನಾಯಕ ಯುವರಾಜ್ ಸಿಂಗ್‌ ಹಾಗೂ ಪಾಕಿಸ್ತಾದ ಶಾಹಿದ್‌ ಅಫ್ರಿದಿ

   

ಚಿತ್ರಕೃಪೆ: X / @StarSportsIndia

ಬರ್ಮಿಂಗ್‌ಹ್ಯಾಮ್: 'ವರ್ಲ್ಡ್ ಚಾಂಪಿಯನ್‌ಷಿಪ್ ಆಫ್ ಲೆಜೆಂಡ್ಸ್ 2024' ಟಿ20 ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು 5 ವಿಕೆಟ್‌ ಅಂತರದಿಂದ ಮಣಿಸಿದ ಭಾರತ ಪ್ರಶಸ್ತಿ ಮುಡಿಗೇರಿಸಿಕೊಂಡಿತು.

ADVERTISEMENT

ಇಲ್ಲಿನ ಎಜ್‌ಬಾಸ್ಟನ್‌ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಚಾಂಪಿಯನ್ಸ್‌, ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 156 ರನ್ ಗಳಿಸಿತು. ಈ ಗುರಿಯನ್ನು ಭಾರತ 19.1 ಓವರ್‌ಗಳಲ್ಲಿ ತಲುಪಿತು.

ಯುವರಾಜ್ ಸಿಂಗ್‌ ನಾಯಕತ್ವದ ಟೀಂ ಇಂಡಿಯಾಗೆ ಆರಂಭಿಕ ಆಘಾತ ಎದುರಾಗಿತ್ತು. ಅಂಬಟಿ ರಾಯುಡು ಜೊತೆ ಇನಿಂಗ್ಸ್‌ ಆರಂಭಿಸಿದ ರಾಬಿನ್‌ ಉತ್ತಪ್ಪ (10) ಹಾಗೂ ಮೂರನೇ ಕ್ರಮಾಂಕದ ಬ್ಯಾಟರ್‌ ಸುರೇಶ್‌ ರೈನಾ (4) ಹೆಚ್ಚು ರನ್ ಗಳಿಸದೆ ಪೆವಿಲಿಯನ್‌ ಸೇರಿಕೊಂಡರು. ಈ ಹಂತದಲ್ಲಿ ರಾಯುಡುಗೆ ಜೊತೆಯಾದ ಗುರುಕೀರತ್‌ ಸಿಂಗ್‌ ಮಾನ್‌ (33 ಎಸೆತಗಳಲ್ಲಿ 34 ರನ್‌) ರಕ್ಷಣಾತ್ಮಕ ಆಟವಾಡಿದರು. ಇವರಿಬ್ಬರು ಮೂರನೇ ವಿಕೆಟ್‌ ಪಾಲುದಾರಿಕೆಯಲ್ಲಿ 60 ರನ್‌ ಸೇರಿಸಿದರು.

ರಾಯುಡು ಕೇವಲ 30 ಎಸೆತಗಳಲ್ಲಿ 50 ರನ್‌ ಗಳಿಸಿ ಜಯದ ಕಾಣಿಕೆ ನೀಡಿದರು. ಕೊನೆಯಲ್ಲಿ ಯೂಸುಫ್‌ ಪಠಾಣ್‌ (16 ಎಸೆತಗಳಲ್ಲಿ 30 ರನ್‌) ಬೀಸಾಟದ ಮೂಲಕ ನೆರವಾದರು. ನಾಯಕ ಯುವರಾಜ್‌ ಸಿಂಗ್ (15) ಮತ್ತು ಇರ್ಫಾನ್‌ ಪಠಾಣ್‌ (5) ಅಜೇಯವಾಗಿ ಉಳಿದು ಗೆಲುವಿನ ಲೆಕ್ಕಾಚಾರ ಪೂರ್ಣಗೊಳಿಸಿದರು.

ಭಾರತದ ಸಂಘಟಿತ ಬೌಲಿಂಗ್‌
ಟಾಸ್‌ ಗೆದ್ದು ಬ್ಯಾಟಿಂಗ್‌ ಮಾಡಿದ ಪಾಕಿಸ್ತಾನ ಪರ ಬ್ಯಾಟರ್‌ಗಳಿಂದ ಉತ್ತಮ ಪ್ರದರ್ಶನ ಮೂಡಿಬರಲಿಲ್ಲ. ಶೋಯಬ್‌ ಮಲಿಕ್ 36 ಎಸೆತಗಳಲ್ಲಿ 41 ರನ್‌ ಗಳಿಸಿದ್ದು ಬಿಟ್ಟರೆ, ಉಳಿದವರು ಸಾಮರ್ಥ್ಯಕ್ಕೆ ತಕ್ಕ ಆಟವಾಡುವಲ್ಲಿ ವಿಫಲರಾದರು. ಯಾವ ಹಂತದಲ್ಲೂ ಉತ್ತಮ ಜೊತೆಯಾಟ ಬಾರದೇ ಹೋದದ್ದು ಪಾಕ್‌ ಪಡೆಗೆ ಹಿನ್ನಡೆಯಾಯಿತು.

ಸಂಘಟಿತ ಪ್ರದರ್ಶನ ತೋರಿದ ಟೀಂ ಇಂಡಿಯಾ ಬೌಲರ್‌ಗಳು, ಎದುರಾಳಿಯನ್ನು ಸಾಧಾರಣ ಮೊತ್ತಕ್ಕೆ ನಿಯಂತ್ರಿಸಿದರು.

ಅನುರೀತ್‌ ಸಿಂಗ್‌ 4 ಓವರ್‌ಗಳಲ್ಲಿ 43 ರನ್‌ ನೀಡಿದರೂ ಮೂರು ವಿಕೆಟ್‌ ಪಡೆದು ಮಿಂಚಿದರು. ಅವರಿಗೆ ಸಹಕಾರ ನೀಡಿದ ವಿನಯ್‌ ಕುಮಾರ್‌, ಪವನ್‌ ನೇಗಿ ಹಾಗೂ ಇರ್ಫಾನ್‌ ಪಠಾಣ್‌ ತಲಾ ಒಂದೊಂದು ವಿಕೆಟ್‌ ಹಂಚಿಕೊಂಡರು.

ಚೊಚ್ಚಲ ಆವೃತ್ತಿ
ವಿವಿಧ ದೇಶಗಳ ನಿವೃತ್ತ ಆಟಗಾರರ ತಂಡಗಳು ಪಾಲ್ಗೊಂಡ ಟಿ20 ಟೂರ್ನಿಯ ಚೊಚ್ಚಲ ಆವೃತ್ತಿ (ವರ್ಲ್ಡ್ ಚಾಂಪಿಯನ್‌ಷಿಪ್ ಆಫ್ ಲೆಜೆಂಡ್ಸ್ 2024) ಇದಾಗಿದೆ. ಜುಲೈ 3ರಂದು ಆರಂಭವಾದ ಈ ಟೂರ್ನಿಯಲ್ಲಿ ಭಾರತ, ಇಂಗ್ಲೆಂಡ್, ಪಾಕಿಸ್ತಾನ, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾದ 'ಚಾಂಪಿಯನ್ಸ್' ತಂಡಗಳು ಕಣಕ್ಕಿಳಿದಿದ್ದವು.

ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ಎದುರು ಭಾರತ, ವೆಸ್ಟ್ ಇಂಡೀಸ್ ಎದುರು ಪಾಕಿಸ್ತಾನ ಜಯ ಸಾಧಿಸಿ ಫೈನಲ್‌ಗೆ ಲಗ್ಗೆ ಇಟ್ಟಿದ್ದವು.

ಫೈನಲ್‌ ಪಂದ್ಯದ 'ಹನ್ನೊಂದರ ಬಳಗ'
ಭಾರತ: ಯುವರಾಜ್‌ ಸಿಂಗ್ (ನಾಯಕ), 
ರಾಬಿನ್‌ ಉತ್ತಪ್ಪ, ಅಂಬಟಿ ರಾಯುಡು, ಸುರೇಶ್‌ ರೈನಾ, ಯೂಸುಫ್‌ ಪಠಾಣ್‌, ಇರ್ಫಾನ್‌ ಪಠಾಣ್‌, ಪವನ್‌ ನೇಗಿ, ವಿನಯ್‌ ಕುಮಾರ್‌, ಹರ್ಭಜನ್‌ ಸಿಂಗ್, ರಾಹುಲ್‌ ಶುಕ್ಲಾ, ಅನುರೀತ್‌ ಸಿಂಗ್‌

ಪಾಕಿಸ್ತಾನ: ಯೂನಿಸ್‌ ಖಾನ್‌ (ನಾಯಕ), ಕಮ್ರಾನ್‌ ಅಕ್ಮಲ್‌, ಶಾರ್ಜೀಲ್‌ ಖಾನ್‌, ಶೋಹೈಬ್‌ ಮಕ್ಸೂದ್‌, ಶೋಯಬ್‌ ಮಲಿಕ್, ಶಾಹಿದ್‌ ಅಫ್ರಿದಿ, ಮಿಶ್ಭಾ–ಉಲ್‌–ಹಕ್‌, ಆಮೆರ್ ಯಾಮಿನ್‌, ಸೊಹೈಲ್‌ ತನ್ವೀರ್‌, ವಹಾಬ್‌ ರಿಯಾಜ್‌, ಸೊಹೈಲ್‌ ಖಾನ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.