ತಿರುವನಂತಪುರ: ನಾಯಕ ಶುಭಮನ್ ಗಿಲ್ ಮತ್ತು ಆಲ್‌ರೌಂಡರ್ ಜಲಜ್ ಸಕ್ಸೇನಾ ಅವರ ಆಕರ್ಷಕ ಆಟದ ಬಲದಿಂದ ಭಾರತ ‘ಎ’ ತಂಡ ದಕ್ಷಿಣ ಆಫ್ರಿಕಾ ‘ಎ’ ಎದುರಿನ ಮೊದಲ ‘ಟೆಸ್ಟ್’ ಪಂದ್ಯದಲ್ಲಿ ಮುನ್ನಡೆ ಪಡೆದಿದೆ.
ಗ್ರೀನ್‌ಫೀಲ್ಡ್ ಮೈದಾನದಲ್ಲಿ 2 ವಿಕೆಟ್‌ಗೆ 129ರನ್‌ಗಳಿಂದ ಮಂಗಳವಾರ ಆಟ ಮುಂದುವರಿಸಿದ ಭಾರತ ‘ಎ’ ಮೊದಲ ಇನಿಂಗ್ಸ್‌ನಲ್ಲಿ 87.5 ಓವರ್‌ಗಳಲ್ಲಿ 303ರನ್ ದಾಖಲಿಸಿತು. ಎರಡನೇ ಇನಿಂಗ್ಸ್ ಆರಂಭಿಸಿರುವ ದಕ್ಷಿಣ ಆಫ್ರಿಕಾ ‘ಎ’ ದಿನದಾಟದ ಅಂತ್ಯಕ್ಕೆ 35 ಓವರ್‌ಗಳಲ್ಲಿ 5 ವಿಕೆಟ್‌ಗೆ 125ರನ್ ಸೇರಿಸಿದೆ.
ಸೋಮವಾರ 66ರನ್ ಗಳಿಸಿ ಕ್ರೀಸ್ ಕಾಯ್ದು ಕೊಂಡಿದ್ದ ನಾಯಕ ಗಿಲ್, ಎರಡನೇ ದಿನದ ಮೊದಲ ಅವಧಿಯಲ್ಲೂ ಕಲಾತ್ಮಕ ಹೊಡೆತಗಳ ಮೂಲಕ ಎದುರಾಳಿ ಬೌಲರ್‌ಗಳ ಆತ್ಮವಿಶ್ವಾಸಕ್ಕೆ ಪೆಟ್ಟು ನೀಡಿದರು. ಆದರೆ ಶತಕದ ಹಾದಿಯಲ್ಲಿ ಎಡವಿದರು. 153 ಎಸೆತಗಳನ್ನು ಆಡಿದ ಅವರು 13 ಬೌಂಡರಿ ಮತ್ತು ಒಂದು ಸಿಕ್ಸರ್ ಸಹಿತ 90ರನ್ ಗಳಿಸಿ ಡೇನ್ ಪಿಯೆಡ್ತ್‌ಗೆ ವಿಕೆಟ್ ಒಪ್ಪಿಸಿದರು.
ಬಳಿಕ ಆತಿಥೇಯರು ಕುಸಿತ ಕಂಡರು. 70ರನ್ ಗಳಿಸುವಷ್ಟರಲ್ಲಿ ಶುಭಮನ್ ಬಳಗವು 5 ವಿಕೆಟ್ ಕಳೆದುಕೊಂಡಿತು. ಹೀಗಾಗಿ ದೊಡ್ಡ ಮೊತ್ತದ ಮುನ್ನಡೆ ಪಡೆಯುವ ಕನಸು ಕೈಗೂಡುವುದು ಕಷ್ಟ ಎನಿಸಿತ್ತು.
ಸಕ್ಸೇನಾ ಮತ್ತು ಶಾರ್ದೂಲ್ ಠಾಕೂರ್ ಮನಮೋಹಕ ಇನಿಂಗ್ಸ್ ಕಟ್ಟಿದರು. ಜಿಗುಟು ಆಟದ ಮೂಲಕ ದಕ್ಷಿಣ ಆಫ್ರಿಕಾ ಬೌಲರ್‌ಗಳನ್ನು ಕಾಡಿದ ಈ ಜೋಡಿ ಎಂಟನೇ ವಿಕೆಟ್ ಪಾಲುದಾರಿಕೆಯಲ್ಲಿ 100ರನ್ ಕಲೆಹಾಕಿತು.
79 ಎಸೆತಗಳಲ್ಲಿ 5 ಬೌಂಡರಿ ಸಹಿತ 34ರನ್ ಗಳಿಸಿದ್ದ ವೇಳೆ ಶಾರ್ದೂಲ್ ಅವರು ಲುಂಗಿ ಗಿಡಿಗೆ ವಿಕೆಟ್ ನೀಡಿದರು. ಬಳಿಕ ಸಕ್ಸೇನಾ ಮಿಂಚಿದರು. ಏಳನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಅವರು ಆರಂಭದಲ್ಲಿ ತಾಳ್ಮೆಯ ಆಟಕ್ಕೆ ಮೊರೆ ಹೋದರು. ಬಳಿಕ ರಟ್ಟೆ ಅರಳಿಸಿ ಆಡಿದರು. 96 ಎಸೆತಗಳನ್ನು ಎದುರಿಸಿದ ಅವರು 11 ಬೌಂಡರಿ ಬಾರಿಸಿದರು. 61 ಗಳಿಸಿ ಅಜೇಯವಾಗುಳಿದರು.
88ನೇ ಓವರ್‌ನ ನಾಲ್ಕು ಮತ್ತು ಐದನೇ ಎಸೆತಗಳಲ್ಲಿ ಕ್ರಮವಾಗಿ ಶಹಬಾಜ್ ನದೀಮ್ (0) ಮತ್ತು ಮೊಹಮ್ಮದ್ ಸಿರಾಜ್ (0) ವಿಕೆಟ್ ಉರುಳಿಸಿದ ಡೇನ್ ಪಿಯೆಡ್ತ್ ಆತಿಥೇಯರ ಇನಿಂಗ್ಸ್‌ಗೆ ತೆರೆ ಎಳೆದರು.
ಲುಂಗಿ ಗಿಡಿ ಮತ್ತು ಪಿಯೆಡ್ತ್, ದಕ್ಷಿಣ ಆಫ್ರಿಕಾ ತಂಡದ ಯಶಸ್ವಿ ಬೌಲರ್‌ಗಳೆನಿಸಿದರು. ಇವರು ತಲಾ ಮೂರು ವಿಕೆಟ್ ಪಡೆದರು.
ಎರಡನೇ ಇನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಕಂಡಿತು.
ಆರನೇ ಓವರ್ ವೇಳೆಗೆ ಆರಂಭಿಕರಾದ ಪೀಟರ್ ಮಲಾನ್ (4) ಮತ್ತು ನಾಯಕ ಏಡನ್ ಮರ್ಕರಮ್ (4) ಪೆವಿಲಿಯನ್ ಸೇರಿದರು.
ಜುಬಯರ್ ಹಮ್ಜಾ (44; 81ಎ, 8ಬೌಂ) ಮತ್ತು ವಿಕೆಟ್ ಕೀಪರ್ ಹೆನ್ರಿಕ್ ಕ್ಲಾಸೆನ್ (ಬ್ಯಾಟಿಂಗ್ 35; 56ಎ, 5ಬೌಂ) ತಂಡಕ್ಕೆ ಆಸರೆಯಾದರು.
ಸಂಕ್ಷಿಪ್ತ ಸ್ಕೋರ್: ದಕ್ಷಿಣ ಆಫ್ರಿಕಾ ‘ಎ’: ಮೊದಲ ಇನಿಂಗ್ಸ್; 51.5 ಓವರ್‌ಗಳಲ್ಲಿ 164 ಮತ್ತು 35 ಓವರ್‌ಗಳಲ್ಲಿ 5 ವಿಕೆಟ್‌ಗೆ 125 (ಜುಬಯರ್ ಹಮ್ಜಾ 44, ಖಾಯಾ ಜೊಂಡೊ 10, ಹೆನ್ರಿಕ್ ಕ್ಲಾಸೆನ್ ಬ್ಯಾಟಿಂಗ್ 35, ವಿಯಾನ್ ಮುಲ್ಡರ್ ಬ್ಯಾಟಿಂಗ್ 12; ಮೊಹಮ್ಮದ್ ಸಿರಾಜ್ 18ಕ್ಕೆ1, ಶಾರ್ದೂಲ್ ಠಾಕೂರ್ 28ಕ್ಕೆ1, ಶಹಬಾಜ್ ನದೀಮ್ 13ಕ್ಕೆ2, ಕೃಷ್ಣಪ್ಪ ಗೌತಮ್ 28ಕ್ಕೆ1).
ಭಾರತ ‘ಎ’: ಪ್ರಥಮ ಇನಿಂಗ್ಸ್; 87.5 ಓವರ್‌ಗಳಲ್ಲಿ 303 (ಶುಭಮನ್ ಗಿಲ್ 90, ಶ್ರೀಕರ್ ಭರತ್ 33, ಜಲಜ್ ಸಕ್ಸೇನಾ ಔಟಾಗದೆ 61, ಶಾರ್ದೂಲ್ ಠಾಕೂರ್ 34; ಲುಂಗಿ ಗಿಡಿ 50ಕ್ಕೆ3, ಲುಥೊ ಸಿಪಾಮ್ಲಾ 46ಕ್ಕೆ2, ಮಾರ್ಕೊ ಜೆನ್ಸನ್ 59ಕ್ಕೆ2, ಡೇನ್ ಪಿಯೆಡ್ತ್ 84ಕ್ಕೆ3).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.