ADVERTISEMENT

‘ಚುಟುಕು’ ವಿಶ್ವಕಪ್ ಸಿದ್ಧತೆ ಶುರು

ಭಾರತ–ದಕ್ಷಿಣ ಆಫ್ರಿಕಾ ಮೊದಲ ಟ್ವೆಂಟಿ–20 ಇಂದು; ರಾಹುಲ್, ಮನೀಷ್‌ಗೆ ಸತ್ವಪರೀಕ್ಷೆ ಸರಣಿ

ಪಿಟಿಐ
Published 15 ಸೆಪ್ಟೆಂಬರ್ 2019, 2:52 IST
Last Updated 15 ಸೆಪ್ಟೆಂಬರ್ 2019, 2:52 IST
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ   

ಧರ್ಮಶಾಲಾ: ಮುಂದಿನ ವರ್ಷ ನಡೆಯಲಿರುವ ಟ್ವೆಂಟಿ–20 ವಿಶ್ವಕಪ್ ಟೂರ್ನಿಗಾಗಿ ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡವು ಭಾನುವಾರದಿಂದ ತನ್ನ ತಾಲೀಮು ಆರಂಭಿಸಲಿದೆ.

ಹಿಮಾಚಲಪ್ರದೇಶ ಕ್ರಿಕೆಟ್ ಸಂಸ್ಥೆಯ ಸುಂದರವಾದ ಕ್ರಿಕೆಟ್ ಅಂಗಳದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸುವ ಮೂಲಕ ತನ್ನ ಪೂರ್ವಸಿದ್ಧತೆಗೆ ನಾಂದಿ ಹಾಡಲಿದೆ. ಈಚೆಗೆ ಏಕದಿನ ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ನಲ್ಲಿ ನಿರಾಶೆ ಅನುಭವಿಸಿತ್ತು. ಅದರ ನಂತರ ವಿಂಡೀಸ್ ಪ್ರವಾಸಕ್ಕೆ ತೆರಳಿದ್ದ ವಿರಾಟ ಬಳಗವು 3–0ಯಿಂದ ಜಯಭೇರಿ ಬಾರಿಸಿತ್ತು. ಅದರೊಂದಿಗೆ ತಂಡವು ಮತ್ತೆ ಟ್ರ್ಯಾಕ್‌ಗೆ ಮರಳಿತ್ತು.

ಇದೀಗ ದಕ್ಷಿಣ ಆಫ್ರಿಕಾ ಎದುರಿನ ಮೂರು ಪಂದ್ಯಗಳ ಟಿ20 ಸರಣಿ ಆಡಲು ಸಿದ್ಧವಾಗಿದೆ. ಇದರ ನಂತರ ಮುಂದಿನ ತಿಂಗಳು ಫ್ರೀಡಂ ಸೀರಿಸ್ ಟೆಸ್ಟ್‌ ಸರಣಿಯನ್ನೂ ಆಡಲಿದೆ. ಎರಡೂ ತಂಡಗಳು ಯುವ ಆಟಗಾರರೊಂದಿಗೆ ಕಣಕ್ಕಿಳಿಯುತ್ತಿರುವುದು ವಿಶೇಷ. ಭಾರತ ತಂಡದಲ್ಲಿ ಅನುಭವಿ ವಿಕೆಟ್‌ಕೀಪರ್ ಮಹೇಂದ್ರಸಿಂಗ್ ಧೋನಿ ಅವರನ್ನು ಆಯ್ಕೆ ಮಾಡಿಲ್ಲ. ಅವರ ಬದಲಿಗೆ ಯುವಆಟಗಾರ ರಿಷಭ್ ಪಂತ್ ಅವಕಾಶ ಗಿಟ್ಟಿಸಿದ್ದಾರೆ. ಕನ್ನಡಿಗ ಕೆ.ಎಲ್. ರಾಹುಲ್ ಈಗಾಗಲೇ ಟೆಸ್ಟ್ ತಂಡದಿಂದ ಸ್ಥಾನ ಕಳೆದುಕೊಂಡಿದ್ದಾರೆ.

ADVERTISEMENT

ಟ್ವೆಂಟಿ–20 ಮಾದರಿಯಲ್ಲಿ ಸ್ಥಾನ ಉಳಿಯಬೇಕಾದರೆ ತಮಗೆ ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವ ಸಾಮರ್ಥ್ಯ ತೋರಿಸಬೇಕು. ಇದು ಅವರಿಗೆ ಬಹುತೇಕ ಕೊನೆಯ ಅವಕಾಶವಾಗಿದೆ ಎನ್ನುವುದನ್ನು ಆಯ್ಕೆ ಸಮಿತಿ ಈಚೆಗೆ ಸೂಚ್ಯವಾಗಿ ಹೇಳಿತ್ತು. ಕರ್ನಾಟಕದ ಮತ್ತೊಬ್ಬ ಆಟಗಾರ ಮನೀಷ್ ಪಾಂಡೆ ವಿಶ್ವಕಪ್ ಅಡುವ ಕನಸು ನನಸು ಮಾಡಿಕೊಳ್ಳಬೇಕಾದರೆ ರನ್‌ಗಳ ಹೊಳೆ ಹರಿಸುವುದು ಅನಿವಾರ್ಯ. ಜೊತೆಗೆ ತಮ್ಮ ಫೀಲ್ಡಿಂಗ್ ಕೌಶಲ್ಯಕ್ಕೆ ಮತ್ತಷ್ಟು ಸಾಣೆ ಹಿಡಿಯುವ ಸವಾಲೂ ಅವರಿಗೆ ಇದೆ.

ಯುವ ಬೌಲರ್‌ಗಳಾದ ರಾಹುಲ್ ಚಾಹರ್, ಖಲೀಲ್ ಅಹಮದ್, ನವದೀಪ್ ಸೈನಿ, ಕೃಣಾಲ್ ಪಾಂಡ್ಯ ಅವರ ಮೇಲೆ ತಂಡ ಮ್ಯಾನೇಜ್‌ಮೆಂಟ್‌ಗೆ ಬಹಳಷ್ಟು ನಿರೀಕ್ಷೆಗಳಿವೆ. ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ ಅವರಲ್ಲಿ ಯಾರು ಹೆಚ್ಚು ಬೆಳಗುತ್ತಾರೆಂದು ಕಾದು ನೋಡಬೇಕು. ದೆಹಲಿ ಆಟಗಾರ ಶಿಖರ್ ಧವನ್ ಕೂಡ ಲಯ ಕಂಡುಕೊಂಡರೆ ಉತ್ತಮ.

ವಿಂಡೀಸ್‌ನಲ್ಲಿ ಮಿಂಚಿರುವ ಶ್ರೇಯಸ್ ಅಯ್ಯರ್ ಇಲ್ಲಿಯೂ ಇದ್ದಾರೆ. ಅವರಿಗೆ ಹನ್ನೊಂದರ ಬಳಗದಲ್ಲಿ ಹೆಚ್ಚು ಅವಕಾಶ ಪಡೆಯುವ ಸಾಧ್ಯತೆಯೂ ಇದೆ. ನಾಲ್ಕನೇ ಕ್ರಮಾಂಕದ ಬ್ಯಾಟ್ಸ್‌ಮನ್ ಸಮಸ್ಯೆಗೆ ಪರಿಹಾರ ಒದಗಿಸುವ ಸಾಮರ್ಥ್ಯ ಅವರಲ್ಲಿದೆ.

ಪ್ರವಾಸಿ ದಕ್ಷಿಣ ಆಫ್ರಿಕಾ ತಂಡವು ಈಗ ಹೊಸ ಆರಂಭದ ಹಾದಿಯಲ್ಲಿದೆ. ಈ ತಂಡದಲ್ಲಿ ಈಗ ತಾರೆಗಳೇ ಇಲ್ಲದ ಪರಿಸ್ಥಿತಿ. ಕ್ವಿಂಟನ್ ಡಿ ಕಾಕ್ ಮತ್ತು ಡೇವಿಡ್ ಮಿಲ್ಲರ್ ಅವರಿಬ್ಬರು ಮಾತ್ರ ಎಲ್ಲರಿಗಿಂತ ಹೆಚ್ಚು ಅನುಭವಿಯಾಗಿದ್ದಾರೆ. ಯುವ ಆಟಗಾರರಾದ ರಸ್ಸಿ ವ್ಯಾನ್ ಡರ್ ಡ್ಸೆ, ತೆಂಬಾ ಬವುಮಾ, ರೀಜಾ ಹೆನ್ರಿಕ್ಸ್‌, ಬೌಲರ್‌ಗಳಾದ ಕಗಿಸೊ ರಬಾಡ, ಆ್ಯಂಡಿಲೆ ಪಿಶುವಾಯೊ ಅವರ ಮೇಲೆ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅವರು ತಮ್ಮ ನಾಯಕನ ಭರವಸೆಯನ್ನು ಕಾಪಾಡಿಕೊಳ್ಳುವರೇ ಎಂಬ ಕುತೂಹಲ ಈಗ ಗರಿಗೆದರಿದೆ.

ತಂಡಗಳು
ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಕೆ.ಎಲ್. ರಾಹುಲ್, ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ, ರಿಷಭ್ ಪಂತ್ (ವಿಕೆಟ್‌ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ಕೃಣಾಲ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ರಾಹುಲ್ ಚಾಹರ್, ಖಲೀಲ್ ಅಹಮದ್, ದೀಪಕ್ ಚಾಹರ್, ನವದೀಪ್ ಸೈನಿ.

ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್ (ನಾಯಕ), ರಸ್ಸಿ ವ್ಯಾನ್ ಡರ್ ಡಸ್ಸೆ (ಉಪನಾಯಕ), ತೆಂಬಾ ಬವುಮಾ, ಜೂನಿಯರ್ ಡಲಾ, ಜಾರ್ನ್ ಫಾರ್ಚೂನ್, ಬೇರನ್ ಹೆನ್ರಿಕ್ಸ್‌, ರೀಜಾ ಹೆನ್ರಿಕ್ಸ್, ಡೇವಿಡ್ ಮಿಲ್ಲರ್, ಎನ್ರಿಚ್ ನೊರ್ಜೆ, ಆ್ಯಂಡಿಲೆ ಪಿಶುವಾಯೊ, ಡ್ವೇನ್ ಪ್ರಿಟೊರಿಯಸ್, ಕಗಿಸೊ ರಬಾಡ, ತಬ್ರೆಜ್ ಶಂಸಿ, ಜಾರ್ಜ್ ಲಿಂಡ್.

ಪಂದ್ಯ ಆರಂಭ: ಸಂಜೆ 7ರಿಂದ

ಧರ್ಮಶಾಲಾದ ಎಚ್‌ಪಿಸಿಎ ಕ್ರಿಕೆಟ್ ಕ್ರೀಡಾಂಗಣದ ನೋಟ –ಪಿಟಿಐ ಚಿತ್ರ

***
ಮುಖಾಮುಖಿ (ಟಿ20)
ಪಂದ್ಯ: 13
ಭಾರತ ಜಯ: 08
ದ.ಆಫ್ರಿಕಾ ಜಯ:05

* ಪ್ರಮುಖ ಅಂಕಿ ಅಂಶಗಳು

13; ದಕ್ಷಿಣ ಆಫ್ರಿಕಾ ಎದುರು ಭಾರತವು 2006ರಿಂದ ಆಡಿದ ಒಟ್ಟು ಟಿ20 ಪಂದ್ಯಗಳು ಇವು. ಈ ಎಲ್ಲ ಹಣಾಹಣಿಗಳಲ್ಲಿಯೂ ಮಹೇಂದ್ರಸಿಂಗ್ ಧೋನಿ ಆಡಿದ್ದರು. ಇದೇ ಮೊದಲ ಸಲ ಅವರು ಈ ತಂಡದ ವಿರುದ್ಧ ಕಣಕ್ಕಿಳಿಯುತ್ತಿಲ್ಲ.

96: ಭಾರತದ ರೋಹಿತ್ ಶರ್ಮಾ ಅವರು ಇಲ್ಲಿಯವರೆಗೆ ಆಡಿರುವ ಟಿ20 ಪಂದ್ಯಗಳು. ಒಂದೊಮ್ಮೆ ಈ ಸರಣಿಯಲ್ಲಿ ಅವರು ಎಲ್ಲ ಮೂರು ಪಂದ್ಯಗಳನ್ನು ಆಡಿದರೆ, ಅತಿ ಹೆಚ್ಚು ಪಂದ್ಯಗಳನ್ನಾಡಿದ ಆಟಗಾರರಲ್ಲಿ ನಾಲ್ಕನೇ ಸ್ಥಾನ ಪಡೆಯುವರು.

11: ಕ್ವಿಂಟನ್ ಡಿ ಕಾಕ್ ಅವರು ಚುಟುಕು ಕ್ರಿಕೆಟ್ ಮಾದರಿಯಲ್ಲಿ ದಕ್ಷಿಣ ಆಫ್ರಿಕಾ ತಂಡದ ನಾಯಕತ್ವ ವಹಿಸುತ್ತಿರುವ ಹನ್ನೊಂದನೇ ಆಟಗಾರ.

346; ರೋಹಿತ್ ಶರ್ಮಾ ದಕ್ಷಿಣ ಆಫ್ರಿಕಾ ಎದುರು ಗಳಿಸಿರುವ ರನ್‌ಗಳು.

02: ಉಭಯ ತಂಡಗಳು ಭಾರತದ ನೆಲದಲ್ಲಿ ಮುಖಾಮುಖಿಯಾಗಿರುವ ಟಿ20 ಪಂದ್ಯಗಳು. ಎರಡರಲ್ಲಿಯೂ ಭಾರತ ಸೋತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.