ADVERTISEMENT

IND vs SA 1st Test: ಎಲ್ಗರ್ ಶತಕ; ದ.ಆಫ್ರಿಕಾ ಹಿಡಿತದಲ್ಲಿ ಟೆಸ್ಟ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಡಿಸೆಂಬರ್ 2023, 16:11 IST
Last Updated 27 ಡಿಸೆಂಬರ್ 2023, 16:11 IST
<div class="paragraphs"><p>ಡೀನ್ ಎಲ್ಗರ್</p></div>

ಡೀನ್ ಎಲ್ಗರ್

   

(ರಾಯಿಟರ್ಸ್ ಚಿತ್ರ)

ಸೆಂಚುರಿಯನ್: ಇಲ್ಲಿನ ಸೂಪರ್ ಸ್ಪೋರ್ಟ್ ಪಾರ್ಕ್‌ನಲ್ಲಿ ಭಾರತ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಹಿಡಿತ ಸಾಧಿಸಿದೆ.

ADVERTISEMENT

ಮೊದಲ ಇನಿಂಗ್ಸ್‌ನಲ್ಲಿ ಭಾರತ ಒಡ್ಡಿದ 245 ರನ್‌ಗಳಿಗೆ ಉತ್ತರವಾಗಿ ದಕ್ಷಿಣ ಆಫ್ರಿಕಾ, ಎರಡನೇ ದಿನದಾಟದ ಅಂತ್ಯಕ್ಕೆ 66 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 256 ರನ್ ಗಳಿಸಿದೆ.

ಆ ಮೂಲಕ ಮೊದಲ ಇನಿಂಗ್ಸ್‌ನಲ್ಲಿ 11 ರನ್‌ಗಳ ಮುನ್ನಡೆ ಗಳಿಸಿದೆ. ಮಂದ ಬೆಳಕಿನಿಂದಾಗಿ ದಿನದ ಆಟವನ್ನು ಬೇಗನೇ ಕೊನೆಗೊಳಿಸಲಾಯಿತು.

ವೃತ್ತಿ ಜೀವನದ ಕೊನೆಯ ಸರಣಿ; ಎಲ್ಗರ್ ಶತಕ...

ವೃತ್ತಿ ಜೀವನದ ಕೊನೆಯ ಟೆಸ್ಟ್ ಸರಣಿ ಆಡುತ್ತಿರುವ ಎಡಗೈ ಆರಂಭಿಕ ಬ್ಯಾಟರ್ ಎಲ್ಗರ್, ಆಕರ್ಷಕ ಶತಕ ಗಳಿಸಿ ಸಂಭ್ರಮಿಸಿದರು. 36 ವರ್ಷದ ಎಲ್ಗರ್, ಟೆಸ್ಟ್ ಕ್ರಿಕೆಟ್‌ನಲ್ಲಿ ಗಳಿಸಿದ 14ನೇ ಶತಕ ಇದಾಗಿದೆ.

140 ಎಸೆತಗಳಲ್ಲಿ ಎಲ್ಗರ್ ಶತಕ ಪೂರ್ಣಗೊಳಿಸಿದರು. ಎಲ್ಗರ್ ವಿಕೆಟ್ ಗಳಿಸಲು ಭಾರತೀಯ ಬೌಲರ್‌ಗಳು ನಡೆಸಿದ ಎಲ್ಲ ಪ್ರಯತ್ನ ವಿಫಲವಾಯಿತು. ಮೂರನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿರುವ ಎಲ್ಗರ್, 211 ಎಸೆತಗಳಲ್ಲಿ 23 ಬೌಂಡರಿಗಳ ನೆರವಿನಿಂದ 140 ರನ್ ಗಳಿಸಿದ್ದಾರೆ.

ಅತಿಥೇಯರಿಗೆ ಆರಂಭದಲ್ಲೇ ಏಡನ್ ಮಾರ್ಕರಮ್ (5) ವಿಕೆಟ್ ನಷ್ಟವಾಯಿತು. ಈ ವಿಕೆಟ್ ಅನ್ನು ಮೊಹಮ್ಮದ್ ಸಿರಾಜ್ ಗಳಿಸಿದರು. ಬಳಿಕ ಟೋನಿ ಡಿ ಜೋರ್ಝಿ (28) ಜೊತೆಗೂಡಿದ ಎಲ್ಗರ್, ಎರಡನೇ ವಿಕೆಟ್‌ಗೆ 93 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು.

ಜೋರ್ಝಿ ಹಾಗೂ ಕೀಗನ್ ಪೀಟರ್ಸನ್ (2) ವಿಕೆಟ್‌ಗಳನ್ನು ಕಬಳಿಸಿದ ಜಸ್‌ಪ್ರೀತ್ ಬೂಮ್ರಾ ಎದುರಾಳಿ ತಂಡಕ್ಕೆ ಆಘಾತ ನೀಡಿದರು.

ಬಳಿಕ ಡೇವಿಡ್‌ ಬೆಡಿಂಗಮ್ (56) ಅವರೊಂದಿಗೂ ಶತಕದ ಜೊತೆಯಾಟ ಕಟ್ಟಿದ ಎಲ್ಗರ್, ಅತಿಥೇಯರಿಗೆ ಇನಿಂಗ್ಸ್ ಮುನ್ನಡೆ ಗಳಿಸಲು ನೆರವಾದರು. 56 ರನ್ ಗಳಿಸಿದ ಬೆಡಿಂಗನ್ ವಿಕೆಟ್ ಅನ್ನು ಸಿರಾಜ್ ಪಡೆದರು.

ಪ್ರಸಿದ್ಧ ಕೃಷ್ಣಗೆ ಚೊಚ್ಚಲ ವಿಕೆಟ್...

ಈ ಪಂದ್ಯದಲ್ಲಿ ಪದಾರ್ಪಣೆ ಮಾಡಿರುವ ಕನ್ನಡಿಗ ಪ್ರಸಿದ್ಧ ಕೃಷ್ಣ, ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದಲ ವಿಕೆಟ್ ಗಳಿಸಿದರು. ಕೈಲ್‌ ವೆರಿಯನ್ (4) ಅವರನ್ನು ಹೊರದಬ್ಬಿದರು.

ರಾಹುಲ್ ಅಮೋಘ ಶತಕ...

ಈ ಮೊದಲು ಕೆ.ಎಲ್. ರಾಹುಲ್ ಗಳಿಸಿದ ಅಮೋಘ ಶತಕದ ನೆರವಿನಿಂದ ಭಾರತ ತಂಡವು ಮೊದಲ ಇನಿಂಗ್ಸ್‌ನಲ್ಲಿ 245 ರನ್‌ ಕಲೆಹಾಕಲು ಸಾಧ್ಯವಾಯಿತು.

ಸೂಪರ್ ಸ್ಪೋರ್ಟ್ ಪಾರ್ಕ್‌ನಲ್ಲಿ ನಡೆಯುತ್ತಿರುವ ಪ್ರಥಮ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ರಾಹುಲ್, 133 ಎಸೆತಗಳಲ್ಲಿ ಶತಕ ಗಳಿಸಿದರು.

ಆ ಮೂಲಕ ಸೆಂಚುರಿಯನ್ ಕ್ರೀಡಾಂಗಣದಲ್ಲಿ ಎರಡು ಶತಕ ಗಳಿಸಿದ ಪ್ರವಾಸಿ ತಂಡದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಭಾಜನರಾದರು. 2021/22ರ ಪ್ರವಾಸದಲ್ಲೂ ಇದೇ ಮೈದಾನದಲ್ಲಿ ರಾಹುಲ್ 123 ರನ್ ಸಾಧನೆ ಮಾಡಿದ್ದರು.

ಸಮಯೋಚಿತ ಇನಿಂಗ್ಸ್ ಕಟ್ಟಿದ ರಾಹುಲ್, 137 ಎಸೆತಗಳಲ್ಲಿ 101 ರನ್ (14 ಬೌಂಡರಿ, ನಾಲ್ಕು ಸಿಕ್ಸರ್‌) ಗಳಿಸಿದರು.

ದಕ್ಷಿಣ ಆಫ್ರಿಕಾದ ಪರ ಕಗಿಸೊ ರಬಾಡ ಐದು ಮತ್ತು ನ್ಯಾಂಡ್ರೆ ಬರ್ಗರ್‌ ಮೂರು ವಿಕೆಟ್ ಗಳಿಸಿ ಮಿಂಚಿದರು.

ಮೊದಲ ದಿನದ ಅಂತ್ಯಕ್ಕೆ ಭಾರತ ಎಂಟು ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿತ್ತು. 238 ರನ್ನಿಗೆ ಭಾರತ ಒಂಬತ್ತನೇ ವಿಕೆಟ್ ಕಳೆದುಕೊಂಡಿತು. ಮೊಹಮ್ಮದ್ ಸಿರಾಜ್ ಐದು ರನ್ ಗಳಿಸಿ ಔಟ್ ಆದರು.

ಈ ವೇಳೆ ಕ್ರೀಸಿಗಿಳಿದ ಚೊಚ್ಚಲ ಪಂದ್ಯ ಆಡುತ್ತಿರುವ ಪ್ರಸಿದ್ಧ ಕೃಷ್ಣ, ರಾಹುಲ್ ಅವರಿಗೆ ಶತಕ ಗಳಿಸಲು ನೆರವಾದರು. ಸಿಕ್ಸರ್ ಬಾರಿಸುವ ಮೂಲಕ ರಾಹುಲ್ ಶತಕವನ್ನು ಪೂರ್ಣಗೊಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.