ಗೆಬೆಹಾ (ದಕ್ಷಿಣ ಆಫ್ರಿಕಾ): ಸಪ್ಪೆ ಆಟವಾಡಿದ ದಕ್ಷಿಣ ಆಫ್ರಿಕಾ ವಿರುದ್ಧ ಮಂಗಳವಾರ ನಡೆಯಲಿರುವ ಎರಡನೇ ಏಕದಿನ (ಇದು ಹಗಲು–ರಾತ್ರಿ) ಪಂದ್ಯವನ್ನೂ ಗೆದ್ದು ಭಾರತ ತಂಡ ಸರಣಿ ಕೈವಶ ಮಾಡಿಕೊಳ್ಳುವ ಉತ್ಸಾಹದಲ್ಲಿದೆ. ಪ್ರತಿಭಾನ್ವಿತ ಬ್ಯಾಟರ್ ರಜತ್ ಪಾಟೀದಾರ ಮತ್ತು ‘ಫಿನಿಷರ್’ ಖ್ಯಾತಿಯ ರಿಂಕು ಸಿಂಗ್ ಅವರು ತಂಡದಲ್ಲಿರುವ ಒಂದು ಬ್ಯಾಟಿಂಗ್ ಸ್ಥಾನಕ್ಕಾಗಿ ಸ್ಪರ್ಧೆಯಲ್ಲಿದ್ದಾರೆ.
ಯುವ ಬೌಲರ್‌ಗಳಾದ ಅರ್ಷದೀಪ್ ಸಿಂಗ್ ಮತ್ತು ಆವೇಶ್ ಖಾನ್ ಅವರ ಅಚ್ಚುಕಟ್ಟಾದ ಬೌಲಿಂಗ್ ಪ್ರದರ್ಶನದ ನೆರವಿನಿಂದ ಭಾರತ ಮೊದಲ ಪಂದ್ಯವನ್ನು ಎಂಟು ವಿಕೆಟ್‌ಗಳಿಂದ ಜಯಿಸಿತ್ತು. ಈಗ ಕೆ.ಎಲ್.ರಾಹುಲ್ ಬಳಗ ಇದೇ ವೇಗದಲ್ಲಿ ಸಾಗಲು ಸಜ್ಜಾಗಿದೆ. 2022ರಲ್ಲಿ ಭಾರತ ತಂಡ ಇಲ್ಲಿ ಪ್ರವಾಸ ಮಾಡಿದ್ದಾಗ 0–3 ಅಂತರದಲ್ಲಿ ಸರಣಿ ಸೋತಿತ್ತು. ಆಗಲೂ ನಾಯಕರಾಗಿದ್ದ ರಾಹುಲ್ ಇದನ್ನು ಮರೆತಿರಲಿಕ್ಕಿಲ್ಲ.
ಶ್ರೇಯಸ್ ಅಯ್ಯರ್ ಅವರು ಭಾನುವಾರದ ನಂತರ ಟೆಸ್ಟ್ ತಂಡದ ಜೊತೆ ಸೇರುವುದರಿಂದ ಸರಣಿಯ ಉಳಿದ ಪಂದ್ಯಗಳಲ್ಲಿ ಆಡುತ್ತಿಲ್ಲ. ಹೀಗಾಗಿ ಮೀಸಲು ಆಟಗಾರರಲ್ಲಿ ಒಬ್ಬರಿಗೆ ಅವಕಾಶ ದೊರೆಯಲಿದೆ. ಟೆಸ್ಟ್ ಸರಣಿ ‘ಬಾಕ್ಸಿಂಗ್ ಡೇ’ (ಡಿ. 26) ದಿನ ಆರಂಭವಾಗಲಿದೆ.
ಎಡಗೈ ಬ್ಯಾಟರ್ ರಿಂಕು ಸಿಂಗ್ ಅವರು ಟಿ20 ಸರಣಿಯಲ್ಲಿ ತಾವು ದಕ್ಷಿಣ ಆಫ್ರಿಕಾದ ಪಿಚ್‌ಗೂ ಸೈ ಎಂಬುದನ್ನು ತೋರಿಸಿದ್ದು, ಇಲ್ಲಿ ಏಕದಿನ ಸರಣಿಗೆ ಪದಾರ್ಪಣೆ ಮಾಡುವರೇ ಎಂಬ ಕುತೂಹಲವಿದೆ. ಆದರೆ ಇಂದೋರ್‌ನ ಬಲಗೈ ಬ್ಯಾಟರ್ ರಜತ್ ಪಾಟೀದಾರ್ ಅವರೂ ತಂಡಕ್ಕೆ ಮರಳುವ ಗುರಿಯಲ್ಲಿದ್ದಾರೆ. ತಂಡದ ಚಿಂತಕರ ಚಾವಡಿಯೂ ಆಟಗಾರರಿಗೆ ನಿರ್ದಿಷ್ಟ ಪಾತ್ರ ವಹಿಸಲು ಕಾತರವಾಗಿದೆ. ಪಾಟೀದಾರ್ ನಾಲ್ಕನೇ ಕ್ರಮಾಂಕದಲ್ಲಿ ಪರಿಣತ ಆಟಗಾರ. ಮಧ್ಯಪ್ರದೇಶ ತಂಡಕ್ಕೂ ಅವರು ಇದೇ ಕ್ರಮಾಂಕದಲ್ಲಿ ಆಡುವವರು. ಫಿನಿಷರ್ ಪಾತ್ರ ವಹಿಸುವ ರಿಂಕು ಆರನೇ ಕ್ರಮಾಂಕದಲ್ಲಿ ಆಡುತ್ತಿದ್ದಾರೆ. 2022ರಲ್ಲೇ ಅವರು ಭಾರತ ತಂಡಕ್ಕೆ ಆಡಿದ್ದರೂ ನಂತರ ಗಾಯಾಳಾಗಿ, ಹಿಮ್ಮಡಿ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು. ಹೀಗಾಗಿ ಅಯ್ಯರ್ ತೆರವು ಮಾಡುತ್ತಿರುವ ಸ್ಥಾನಕ್ಕೆ ಸೂಕ್ತ ಪರ್ಯಾಯವೆಂಬಂತೆ ಕಾಣುತ್ತಿದ್ದಾರೆ.
ಈಗ ಆರನೇ ಕ್ರಮಾಂಕದಲ್ಲಿ ಸಂಜು ಸ್ಯಾಮ್ಸನ್ ಅವರು ಆಡುತ್ತಿದ್ದಾರೆ. ಆದರೆ ಕೀಪರ್ ಆಗಿದ್ದರೂ, ರಾಹುಲ್ ಆ ಹೊಣೆ ವಹಿಸುವ ಕಾರಣ ಸ್ಯಾಮ್ಸನ್ ಪರಿಣತ ಬ್ಯಾಟರ್ ಪಾತ್ರ ವಹಿಸಬಹುದು . ಅನುಭವಿ ಆಗಿರುವ ಕಾರಣ ಅವರಿಗೆ ಮತ್ತೆ ಕೆಲವು ಅವಕಾಶ ನೀಡುವ ಕಾರಣ ರಿಂಕು ಅಲ್ಲಿ ಹೊಂದುವುದು ಕಷ್ಟ.
ಆರಂಭ ಆಟಗಾರ ಸಾಯಿ ಸುದರ್ಶನ್, ಆಕರ್ಷಕ ಅರ್ಧ ಶತಕದೊಂದಿಗೆ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ದಕ್ಷಿಣ ಆಫ್ರಿಕಾ ಇನ್ನೊಂದೆಡೆ ಪರದಾಡುತ್ತಿದೆ. ಸಲೀಸಾಗಿ ಆಡುತ್ತಿದ್ದ ಕ್ವಿಂಟನ್ ಡಿ ಕಾಕ್ ಅವರ ಅನುಪಸ್ಥಿತಿ ಕಾಡುತ್ತಿದೆ. ಭಾರತದ ವೇಗಿಗಳು ಮೊದಲ ಪಂದ್ಯದಲ್ಲಿ ಆತಿಥೇಯ ಬ್ಯಾಟರ್‌ಗಳನ್ನು ಕಾಡಿದರು. ಎರಡನೇ ಪಂದ್ಯದಲ್ಲಿ ಸುಧಾರಿತ ಪ್ರದರ್ಶನ ನೀಡಬೇಕಾದ ಒತ್ತಡದಲ್ಲಿ ಈಗ ದಕ್ಷಿಣ ಆಫ್ರಿಕಾ ತಂಡವಿದೆ.
ಮೊದಲ ಪಂದ್ಯದಲ್ಲಿ ಯಶಸ್ಸು ಕಂಡ ಕಾರಣ ಭಾರತ ಬೌಲಿಂಗ್ ವಿಭಾಗದಲ್ಲಿ ಬದಲಾವಣೆಯ ಸಾಧ್ಯತೆ ಕಡಿಮೆ.
ಪಂದ್ಯ ಆರಂಭ: ಸಂಜೆ 4.30ರಿಂದ
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.