ಮೊಹಾಲಿ: ಯುವ ವಿಕೆಟ್‌ಕೀಪರ್ ರಿಷಭ್ ಪಂತ್ ಮುಂದಿನ ವರ್ಷದ ಟ್ವೆಂಟಿ–20 ವಿಶ್ವಕಪ್ ಟೂರ್ನಿಯಲ್ಲಿ ಆಡುವರೇ?
ದಕ್ಷಿಣ ಆಫ್ರಿಕಾ ಎದುರಿನ ಟ್ವೆಂಟಿ–20 ಸರಣಿಯಲ್ಲಿ ಅವರು ಉತ್ತಮವಾಗಿ ಸಾಧನೆ ಮಾಡಿದರೆ ‘ವಿಶ್ವಕಪ್’ ಅವಕಾಶ ಪಡೆಯಬಹುದು. ಆದಕ್ಕಾಗಿಯೇ ಬುಧವಾರ ಪಂಜಾಬ್ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ಸರಣಿಯ ಎದುರಿನ ಎರಡನೇ ಪಂದ್ಯವು ಅವರಿಗೆ ಮಹತ್ವದ್ದಾಗಿದೆ.
ಹೋದ ಭಾನುವಾರ ಧರ್ಮಶಾಲಾದಲ್ಲಿ ಆಯೋಜನೆಯಾಗಿದ್ದ ಸರಣಿಯ ಮೊದಲ ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು. ಆ ಸಂದರ್ಭದಲ್ಲಿ ಮಾತನಾಡಿದ್ದ ನಾಯಕ ವಿರಾಟ್ ಕೊಹ್ಲಿ, ‘ವಿಶ್ವಕಪ್ ಟೂರ್ನಿಗೆ ಇನ್ನೊಂದು ವರ್ಷ ಬಾಕಿಯಿದೆ. ಅದಕ್ಕೂ ಮುನ್ನ ಹೆಚ್ಚೆಂದರೆ ನಾವು 30 ಟಿ20 ಪಂದ್ಯಗಳನ್ನು ಆಡುತ್ತೇವೆ. ಆದ್ದರಿಂದ ಯುವ ಆಟಗಾರರಿಗೆ ತಮ್ಮ ಪ್ರತಿಭೆ ಸಾಬೀತುಪಡಿಸಲು ಕೇವಲ 4–5 ಅವಕಾಶಗಳಷ್ಟೇ ಸಿಗಬಹುದು’ ಎಂದು ಹೇಳಿದ್ದರು.
ಇದು ಇದೀಗ ತಂಡಕ್ಕೆ ಕಾಲಿಟ್ಟಿರುವ ಹೊಸ ಹುಡುಗರಿಗೆ ಸ್ಪಷ್ಟ ಸೂಚನೆಯಾಗಿದೆ. ಅದರಲ್ಲಿ ಪ್ರಮುಖವಾಗಿ ರಿಷಭ್ ಇದ್ದಾರೆ. 2017ರಲ್ಲಿಯೇ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ರಿಷಭ್ ಆರಂಭದಲ್ಲಿ ಚೆನ್ನಾಗಿ ಆಡಿದ್ದರು.
ಅನುಭವಿ ವಿಕೆಟ್‌ಕೀಪರ್ ಮಹೇಂದ್ರಸಿಂಗ್ ಧೋನಿ ಅವರ ಸ್ಥಾನ ತುಂಬುವ ಭರವಸೆ ಮೂಡಿಸಿದ್ದರು. ಆದರೆ, ಏಕದಿನ ವಿಶ್ವಕಪ್ ಟೂರ್ನಿ ಸೇರಿದಂತೆ ಕಳೆದ ಕೆಲವು ಪಂದ್ಯಗಳಲ್ಲಿ ಅವರು ನಿರೀಕ್ಷೆಗೆ ತಕ್ಕಂತೆ ಆಡಿಲ್ಲ. ಆದ್ದರಿಂದ 21 ವರ್ಷದ ರಿಷಭ್ ತಮ್ಮ ಕಾಲೂರಲು ಈಗ ಪ್ರಯತ್ನಿಸಬೇಕಿದೆ. ಇಲ್ಲದಿದ್ದರೆ ನಿಗದಿಯ ಓವರ್‌ಗಳಲ್ಲಿ ಮತ್ತೆ ಧೋನಿಯನ್ನೇ ಮರಳಿ ಕರೆತರುವ ಚಿಂತನೆಯೂ ಬಿಸಿಸಿಐ ಪಡಸಾಲೆಯಲ್ಲಿ ನಡೆದಿದೆ ಎನ್ನಲಾಗಿದೆ.
‘ಧೋನಿ ನಿವೃತ್ತಿ ಘೋಷಿಸಿಲ್ಲ. ಅದರ ಬಗ್ಗೆ ಅವರು ಇನ್ನೂ ಏನೂ ಹೇಳಿಲ್ಲ. ಅವರು ವಿದಾಯ ಹೇಳಲಿ ಎಂದು ನಾನೂ ಬಯಸುವುದಿಲ್ಲ’ ಎಂದು ವಿರಾಟ್ ಕೂಡ ಹೇಳಿದ್ದರು.
ರಿಷಭ್ ಅಲ್ಲದೇ, ಲೆಗ್‌ಸ್ಪಿನ್ನರ್ ರಾಹುಲ್ ಚಾಹರ್ ಮತ್ತು ಆಫ್‌ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಅವರೂ ಕೂಡ ತಮ್ಮ ಸಾಮರ್ಥ್ಯವನ್ನು ತೋರಿಸುವ ಅನಿವಾರ್ಯತೆ ಇದೆ. ಕುಲದೀಪ್ ಯಾದವ್ ಮತ್ತು ಯಜುವೇಂದ್ರ ಚಾಹಲ್ ಅವರಿಗೆ ವಿಶ್ರಾಂತಿ ಕೊಟ್ಟು, ಇವರಿಬ್ಬರಿಗೆ ಅವಕಾಶ ನೀಡಲಾಗಿದೆ. ಆದ್ದರಿಂದ ಸಹಜವಾಗಿಯೇ ಸುಂದರ್ ಮತ್ತು ರಾಹುಲ್ ಮೇಲೆ ಹೆಚ್ಚಿನ ನಿರೀಕ್ಷೆಗಳು ಇವೆ. ಕೆಳಕ್ರಮಾಂಕದಲ್ಲಿ ಬೌಲರ್‌ಗಳು ಬ್ಯಾಟಿಂಗ್‌ನಲ್ಲಿ ಮಿಂಚಬೇಕು. ರನ್‌ಗಳನ್ನು ಗಳಿಸಬೇಕು ಎಂಬುದೂ ಈಗ ಅಪೇಕ್ಷಣೀಯ.
ಮಧ್ಯಮಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಮತ್ತು ಮನೀಷ್ ಪಾಂಡೆ ಕೂಡ ತಮ್ಮ ರನ್ ಗಳಿಕೆಯ ಶಕ್ತಿಯನ್ನು ಪ್ರದರ್ಶಿಸಲೇಬೇಕು. ಸದ್ಯ ಭಾರತದ ಬ್ಯಾಟಿಂಗ್ ಪಡೆ ಉತ್ತಮವಾಗಿದೆ.
ಅದನ್ನು ಕಟ್ಟಿಹಾಕಲು ದಕ್ಷಿಣ ಆಫ್ರಿಕಾದ ವೇಗಿ ಕಗಿಸೊ ರಬಾಡ ಸಾರಥ್ಯದ ಬೌಲಿಂಗ್ ಪಡೆಯುವ ವಿಶೇಷ ಯೋಜನೆ ಹೆಣೆಯಬೇಕಿದೆ. ಮೊಹಾಲಿಯಲ್ಲಿ ಇದೇ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾ ತಂಡವು ಆಡಲಿದೆ. ಭಾರತ ಇಲ್ಲಿ ಇದುವರೆಗೆ ಆಡಿರುವ ಎರಡು ಟಿ20 ಪಂದ್ಯಗಳಲ್ಲಿ ಗೆದ್ದಿದೆ. 2016ರಲ್ಲಿ ಕೊನೆಯ ಸಲ ಇಲ್ಲಿ ಚುಟುಕು ಹಣಾಹಣಿ ನಡೆದಿತ್ತು. ವಿಶ್ವ ಟಿ20 ಟೂರ್ನಿಯ ಸೂಪರ್ ಟೆನ್ ಪಂದ್ಯ ಅದಾಗಿತ್ತು. ಆಗ ಧೋನಿ ನಾಯಕತ್ವದ ಬಳಗವು ಆಸ್ಟ್ರೇಲಿಯಾ ತಂಡದ ವಿರುದ್ಧ ಜಯಿಸಿತ್ತು. ಅದರಲ್ಲಿ ವಿರಾಟ್ 82 ರನ್ ಬಾರಿಸಿದ್ದರು.
ತಂಡಗಳು:ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಕೆ.ಎಲ್. ರಾಹುಲ್, ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ, ರಿಷಭ್ ಪಂತ್ (ವಿಕೆಟ್‌ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ಕೃಣಾಲ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ರಾಹುಲ್ ಚಾಹರ್, ಖಲೀಲ್ ಅಹಮದ್, ದೀಪಕ್ ಚಾಹರ್, ನವದೀಪ್ ಸೈನಿ.
ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್ (ನಾಯಕ), ರಸ್ಸಿ ವ್ಯಾನ್ ಡರ್ ಡಸ್ಸೆ (ಉಪನಾಯಕ), ತೆಂಬಾ ಬವುಮಾ, ಜೂನಿಯರ್ ಡಲಾ, ಜಾರ್ನ್ ಫಾರ್ಚೂನ್, ಬೇರನ್ ಹೆನ್ರಿಕ್ಸ್, ರೀಜಾ ಹೆನ್ರಿಕ್ಸ್, ಡೇವಿಡ್ ಮಿಲ್ಲರ್, ಎನ್ರಿಚ್ ನೊರ್ಜೆ, ಆ್ಯಂಡಿಲೆ ಪಿಶುವಾಯೊ, ಡ್ವೇನ್ ಪ್ರಿಟೊರಿಯಸ್, ಕಗಿಸೊ ರಬಾಡ, ತಬ್ರೆಜ್ ಶಂಸಿ, ಜಾರ್ಜ್ ಲಿಂಡ್.
ಪಂದ್ಯ ಆರಂಭ: ಸಂಜೆ 7ರಿಂದ
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.