ADVERTISEMENT

IND vs SA 3ನೇ ಟಿ20: ತಿಲಕ್ ಚೊಚ್ಚಲ ಶತಕ; ಹರಿಣಗಳ ಗೆಲುವಿಗೆ 220 ರನ್‌ಗಳ ಗುರಿ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2024, 16:55 IST
Last Updated 13 ನವೆಂಬರ್ 2024, 16:55 IST
<div class="paragraphs"><p>ದಕ್ಷಿಣ ಆಫ್ರಿಕಾದ ಸೆಂಚುರಿಯನ್‌ನ ಸೂಪರ್‌ಸ್ಪೋರ್ಟ್‌ ಪಾರ್ಕ್‌ನಲ್ಲಿ ನಡೆಯುತ್ತಿರುವ&nbsp; 3ನೇ ಟಿ20 ಪಂದ್ಯದಲ್ಲಿ ತಿಲಕ್ ವರ್ಮಾ ಅವರ ಬ್ಯಾಟಿಂಗ್ ಶೈಲಿ</p></div>

ದಕ್ಷಿಣ ಆಫ್ರಿಕಾದ ಸೆಂಚುರಿಯನ್‌ನ ಸೂಪರ್‌ಸ್ಪೋರ್ಟ್‌ ಪಾರ್ಕ್‌ನಲ್ಲಿ ನಡೆಯುತ್ತಿರುವ  3ನೇ ಟಿ20 ಪಂದ್ಯದಲ್ಲಿ ತಿಲಕ್ ವರ್ಮಾ ಅವರ ಬ್ಯಾಟಿಂಗ್ ಶೈಲಿ

   

ರಾಯಿಟರ್ಸ್ ಚಿತ್ರ

ಸೆಂಚುರಿಯನ್: ಗುಂಟೂರಿನ ತಿಲಕ್ ವರ್ಮಾ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ತಮ್ಮ ಚೊಚ್ಚಲ ಶತಕ ದಾಖಲಿಸಿದರು. 

ADVERTISEMENT

ಸೂಪರ್‌ಸ್ಪೋರ್ಟ್‌ ಪಾರ್ಕ್‌ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ತಿಲಕ್ ಅಜೇಯ ಶತಕ (107; 56ಎಸೆತ)  ಮತ್ತು ಅಭಿಷೇಕ್ ಶರ್ಮಾ ಅವರ ಅಬ್ಬರದ ಅರ್ಧಶತಕದ ಬಲದಿಂದ ಭಾರತ ತಂಡವು ದಕ್ಷಿಣ  ಆಫ್ರಿಕಾ ಎದುರು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 219 ರನ್  ಗಳಿಸಿತು. 

ಟಾಸ್ ಗೆದ್ದ ಆತಿಥೇಯ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಇನಿಂಗ್ಸ್‌ನ ಎರಡನೇ ಎಸೆತದಲ್ಲಿಯೇ ಮಾರ್ಕೊ ಯಾನ್ಸೆನ್ ಅವರು ಸಂಜು ಸ್ಯಾಮ್ಸನ್‌ ಅವರನ್ನು ಬೌಲ್ಡ್ ಮಾಡಿದರು. ಇದರಿಂದಾಗಿ  ಒತ್ತಡಕ್ಕೊಳಗಾದ ಭಾರತ ತಂಡವನ್ನು ಅಭಿಷೇಕ್ ಮತ್ತು ತಿಲಕ್ ಜೋಡಿಯು ಪಾರು ಮಾಡಿತು. ಸರಣಿಯ ಮೊದಲೆರಡೂ ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದ ಅಭಿಷೇಕ್ ಇಲ್ಲಿ 24 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. 3 ಬೌಂಡರಿ ಮತ್ತು 5 ಸಿಕ್ಸರ್‌ ಎತ್ತಿದರು. ಇಬ್ಬರೂ 2ನೇ ವಿಕೆಟ್ ಜೊತೆಯಾಟದಲ್ಲಿ 107 ರನ್‌ ಸೇರಿಸಿದರು. 9ನೇ ಓವರ್‌ನಲ್ಲಿ ಕೇಶವ್ ಮಹಾರಾಜ್ ಎಸೆತವನ್ನು ಮುನ್ನುಗ್ಗಿ ಹೊಡೆಯಲು ಯತ್ನಿಸಿದ ಎಡಗೈ ಬ್ಯಾಟರ್ ಅಭಿಷೇಕ್ ಅವರನ್ನು ವಿಕೆಟ್‌ಕೀಪರ್ ಕ್ಲಾಸೆನ್ ಸ್ಟಂಪಿಂಗ್ ಮಾಡಿದರು. 

ಆದರೆ ಇನ್ನೊಂದು ಬದಿಯಲ್ಲಿ  ಅಬ್ಬರಿಸುತ್ತಿದ್ದ ತಿಲಕ್ ತಮ್ಮ ಆಟದ ವೇಗವನ್ನು ಮತ್ತಷ್ಟು ಹೆಚ್ಚಿಸಿದರು. 32 ಎಸೆತಗಳಲ್ಲಿ 50 ರನ್ ಗಳಿಸಿದರು. ತಾವೆದುರಿಸಿದ 51ನೇ ಎಸೆತದಲ್ಲಿ ಬೌಂಡರಿ ಹೊಡೆಯುವ ಮೂಲಕ ಶತಕದ ಗಡಿ ಮುಟ್ಟಿದರು. 

ನಾಯಕ ಸೂರ್ಯಕುಮಾರ್ ಯಾದವ್ ಅವರು 1 ರನ್ ಗಳಿಸಿ ಔಟಾದರು. ರಿಂಕು ಸಿಂಗ್ ಕೂಡ ಬೇಗನೆ ನಿರ್ಗಮಿಸಿದರು. ಆದರೆ ತಿಲಕ್ ಅವರಿಗೆ ರಮಣದೀಪ್ ಸಿಂಗ್ (15 ರನ್) ಉತ್ತಮ ಬೆಂಬಲ ನೀಡಿದರು. ಇದರಿಂದಾಗಿ ತಂಡವು ದೊಡ್ಡ ಮೊತ್ತ ಗಳಿಸಿತು. ಕಳೆದ ಪಂದ್ಯದಲ್ಲಿ ಭಾರತ ತಂಡವು ಸಾಧಾರಣ ಮೊತ್ತ ಗಳಿಸಿ ಆಲೌಟ್ ಆಗಿತ್ತು. 

ಸಂಕ್ಷಿಪ್ತ ಸ್ಕೋರು:

20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 219 (ಅಭಿಷೇಕ್ ಶರ್ಮಾ 50, ತಿಲಕ್ ವರ್ಮಾ  ಔಟಾಗದೆ 107, ಹಾರ್ದಿಕ್ ಪಾಂಡ್ಯ 18, ರಮಣದೀಪ್ ಸಿಂಗ್ 15 , ಆ್ಯಂಡಿಲೆ ಸೈಮ್‌ಲೇನ್ 34ಕ್ಕೆ2, ಕೇಶವ್ ಮಹಾರಾಜ್ 36ಕ್ಕೆ2) 

ಸರಣಿಯಲ್ಲಿ ಮೇಲುಗೈ ಸಾಧಿಸುವ ತವಕ

4 ಪಂದ್ಯಗಳ ಸರಣಿಯಲ್ಲಿ ಉಭಯ ತಂಡಗಳು ತಲಾ ಒಂದೊಂದು ಪಂದ್ಯ ಗೆದ್ದು, ಸಮಬಲ ಸಾಧಿಸಿವೆ. ಈ ಪಂದ್ಯ ಗೆದ್ದು ಸರಣಿಯಲ್ಲಿ ಮೇಲುಗೈ ಸಾಧಿಸುವ ತವಕದಲ್ಲಿ ಎರಡೂ ತಂಡಗಳಿವೆ.

2009ರ ನಂತರ ಒಮ್ಮೆ ಮಾತ್ರ ಭಾರತ ಇಲ್ಲಿ ಟಿ20 ಪಂದ್ಯ ಆಡಿದೆ. 2018ರಲ್ಲಿ ನಡೆದ ಆ ಪಂದ್ಯದಲ್ಲಿ ಆರು ವಿಕೆಟ್‌ಗಳಿಂದ ಸೋಲನುಭವಿಸಿತ್ತು. ಈಗ ತಂಡದಲ್ಲಿರುವವರಲ್ಲಿ ಹಾರ್ದಿಕ್ ಪಾಂಡ್ಯ ಮಾತ್ರ ಆ ಪಂದ್ಯ ಆಡಿದ್ದರು. ಮೂರು ಪಂದ್ಯಗಳ ಸರಣಿ ಈಗ 1–1ರಲ್ಲಿ ಸಮನಾಗಿದೆ.

ಪರಿಚಿತವಲ್ಲದ ತಾಣದಲ್ಲಿ ಹೊಂದಿಕೊಳ್ಳುವುದರ ಜೊತೆ ತಂಡಕ್ಕೆ ಸವಾಲಾಗಿರುವ ಇನ್ನೊಂದು ವಿಷಯ ಎಂದರೆ ಬ್ಯಾಟರ್‌ಗಳ ಲಯ ಅಷ್ಟೇನೂ ಉತ್ತಮ ಮಟ್ಟದಲ್ಲಿ ಇಲ್ಲದಿರುವುದು. ಗೆಬೆರ್ಹಾದ ರೀತಿ ಇಲ್ಲಿನ ಪಿಚ್‌ ಕೂಡ ಮೇಲ್ನೋಟಕ್ಕೆ ವೇಗ ಮತ್ತು ಬೌನ್ಸ್‌ಗೆ ನೆರವಾಗುವಂತಿದೆ.

ಎರಡನೇ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ವೇಗದ ಬೌಲರ್‌ಗಳ ಎದುರು ಬ್ಯಾಟರ್‌ಗಳು ಪರದಾಡಿದರು. ಹೀಗಾಗಿ ತಂಡ 6 ವಿಕೆಟ್‌ಗೆ 124 ರನ್‌ಗಳ ಸಾಧಾರಣ ಮೊತ್ತ ಗಳಿಸಿತು. ಸೆಂಚುರಿಯನ್ ಕ್ರೀಡಾಂಗಣ ಕೂಡ ಇಂಥ ಸ್ವರೂಪ ಹೊಂದಿದೆ.

ಭಾರತ ತಂಡ: ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ , ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ಅಕ್ಷರ್ ಪಟೇಲ್, ರಮಣದೀಪ್ ಸಿಂಗ್, ಅರ್ಷದೀಪ್ ಸಿಂಗ್, ರವಿ ಬಿಷ್ಣೋಯಿ, ವರುಣ್ ಚಕ್ರವರ್ತಿ

ದಕ್ಷಿಣ ಆಫ್ರಿಕಾ ತಂಡ: ರಿಯಾನ್ ರಿಕೆಲ್ಟನ್, ರೀಜಾ ಹೆನ್ರಿಕ್ಸ್, ಏಡೆನ್ ಮರ್ಕ್ರಮ್ (ನಾಯಕ), ಟ್ರಿಸ್ಟಾನ್ ಸ್ಟಬ್ಸ್, ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಯಾನ್ಸೆನ್, ಆಂಡಿಲ್ ಸಿಮೆಲೆನ್, ಜೆರಾಲ್ಡ್ ಕೋಟ್ಜಿ, ಕೇಶವ್ ಮಹಾರಾಜ್, ಲುಥೋ ಸಿಪಾಮ್ಲಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.