ADVERTISEMENT

IND vs SA 4th T20: ತಿಲಕ್, ಸಂಜು ಸಿಡಿಲಬ್ಬರಕ್ಕೆ ಬೆಚ್ಚಿಬಿದ್ದ ದ.ಆಫ್ರಿಕಾ

ವಾಂಡರರ್ಸ್‌ನಲ್ಲಿ ಬೃಹತ್ ಮೊತ್ತ ಪೇರಿಸಿದ ಭಾರತ

ಪಿಟಿಐ
Published 15 ನವೆಂಬರ್ 2024, 17:41 IST
Last Updated 15 ನವೆಂಬರ್ 2024, 17:41 IST
ಭಾರತದ ತಿಲಕ್ ವರ್ಮಾ ಶತಕ ಸಂಭ್ರಮ 
ಭಾರತದ ತಿಲಕ್ ವರ್ಮಾ ಶತಕ ಸಂಭ್ರಮ    

ಜೋಹನ್ಸ್‌ಬರ್ಗ್ : ಜೋಡಿ ಸಿಡಿಲುಮರಿಗಳಂತೆ ಅಬ್ಬರಿಸಿದ ಸಂಜು ಸ್ಯಾಮ್ಸನ್ ಮತ್ತು ತಿಲಕ್ ವರ್ಮಾ ಅವರ ಬ್ಯಾಟಿಂಗ್‌ಗೆ ಆತಿಥೇಯ ದಕ್ಷಿಣ ಆಫ್ರಿಕಾದ ಆಟಗಾರರು ಬೆಚ್ಚಿಬಿದ್ದರು. ಇಬ್ಬರೂ ತಲಾ ಒಂದು ಶತಕ ಹೊಡೆದು ಬೃಹತ್ ಮೊತ್ತ ಗಳಿಸಲು ಕಾರಣರಾದರು. 

ಶುಕ್ರವಾರ ರಾತ್ರಿ ವಾಂಡರರ್ಸ್ ಕ್ರೀಡಾಂಗಣದಲ್ಲಿ ಆರಂಭಿಕ ಬ್ಯಾಟರ್ ಸಂಜು ಸ್ಯಾಮ್ಸನ್ (ಅಜೇಯ 109; 56ಎ, 4X6, 6X9)  ಮತ್ತು ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ವರ್ಮಾ (ಅಜೇಯ 120; 47ಎ, 4X9, 6X10) ಅವರು ತಮ್ಮಲ್ಲಿಯೇ ಪೈಪೋಟಿಗೆ ಬಿದ್ದವರಂತೆ ಬ್ಯಾಟ್ ಬೀಸಿದರು. ಅದರಲ್ಲೂ ಗುಂಟೂರಿನ ವರ್ಮಾ ಅವರ ಬ್ಯಾಟಿಂಗ್ ಅಬ್ಬರ ಜೋರಾಗಿತ್ತು. 

ಅಭಿಷೇಕ್ ಶರ್ಮಾ ಔಟಾಗಿ ನಿರ್ಗಮಿಸಿದಾಗ ಸಂಜು 17 ಎಸೆತಗಳಲ್ಲಿ 28 ರನ್ ಗಳಿಸಿ ಆಡುತ್ತಿದ್ದರು. ಆಗ ಕ್ರೀಸ್‌ಗೆ ಬಂದ ತಿಲಕ್ ವರ್ಮಾ ಸಂಜು 93 ರನ್‌ ಗಳಿಸುವಷ್ಟರಲ್ಲಿ ತಾವೂ ಅಷ್ಟೇ ರನ್ ಗಳಿಸಿ ಸಮಬಲ ಸಾಧಿಸಿದರು. ಸಂಜು ಶತಕ ಪೂರೈಸಿದ ಮೂರು ಎಸೆತಗಳ ನಂತರ ತಾವೂ ನೂರರ ಗಡಿ ಮುಟ್ಟಿ ಸಂಭ್ರಮಿಸಿದರು.

ADVERTISEMENT

ಈ ಸರಣಿಯಲ್ಲಿ ಸಂಜುಗೆ ಇದು ಎರಡನೇ ಶತಕ. ಅವರು ಮೊದಲ ಪಂದ್ಯದಲ್ಲಿ ಶತಕ ಬಾರಿಸಿದ್ದರು. ತಿಲಕ್ ಅವರಿಗೆ ಸತತ ಎರಡನೇ ಮೂರಂಕಿ ಮೊತ್ತ ಸಾಧನೆ ಇದಾಗಿದೆ. ಕಳೆದ ಪಂದ್ಯದಲ್ಲಿಯೂ ಅವರು ಅಬ್ಬರದ ಶತಕ ಬಾರಿಸಿದ್ದರು. ಮುರಿಯದ  ಎರಡನೇ ವಿಕೆಟ್ ಜೊತೆಯಾಟದಲ್ಲಿ ಇವರಿಬ್ಬರೂ ಸೇರಿಸಿದ 210 ರನ್‌ಗಳಿಂದಾಗಿ ತಂಡವು 20 ಓವರ್‌ಗಳಲ್ಲಿ 1 ವಿಕೆಟ್‌ಗೆ 283 ರನ್‌ಗಳ ಮೊತ್ತ ಗಳಿಸಿತು.  

ಟಾಸ್ ಗೆದ್ದ ಭಾರತ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಸಂಜು ಮತ್ತು ಅಭಿಷೇಕ್ ಅವರು ಉತ್ತಮ ನೀಡಿದರು. ಪವರ್‌ಪ್ಲೇನಲ್ಲಿ 73 ರನ್‌ಗಳು ಹರಿದುಬಂದವು. 6ನೇ ಓವರ್‌ನಲ್ಲಿ ಅಭಿಷೇಕ್ ಅವರು ಸಿಪಾಮ್ಲಾ ಬೌಲಿಂಗ್‌ನಲ್ಲಿ ಕ್ಲಾಸನ್ ಗೆ ಕ್ಯಾಚಿತ್ತರು. ಇಲ್ಲಿಂದ ತಿಲಕ್ ಮತ್ತು ಸಂಜು ಅವರ ಅಬ್ಬರದ ಆಟ ರಂಗೇರಿತು. 

ತಿಲಕ್ ಅವರು 255ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದರು. ಸಂಜು ಶತಕದಂಚಿನಲ್ಲಿ ಒಂಚೂರು ವೇಗ ತಗ್ಗಿಸಿದರು. ಅದರಿಂದಾಗಿ 194ರ ಸ್ಟ್ರೈಕ್‌ರೇಟ್ ಅವರದ್ದಾಯಿತು.  ಆತಿಥೇಯ ತಂಡದ ಮಾರ್ಕೊ ಯಾನ್ಸೆನ್ ಬಿಟ್ಟರೆ ಉಳಿದೆಲ್ಲ ಬೌಲರ್‌ಗಳೂ ಭಾರಿ ದುಬಾರಿಯಾದರು.  ಒತ್ತಡಕ್ಕೊಳಗಾದ ಫೀಲ್ಡರ್‌ಗಳೂ ವರ್ಮಾ ಅವರ 3 ಕ್ಯಾಚ್‌ಗಳನ್ನು ಕೈಚೆಲ್ಲಿದರು.

ಸಂಕ್ಷಿಪ್ತ ಸ್ಕೋರು: ಭಾರತ: 20 ಓವರ್‌ಗಳಲ್ಲಿ 1 ವಿಕೆಟ್‌ಗೆ 283  (ಸಂಜು ಸ್ಯಾಮ್ಸನ್ ಔಟಾಗದೆ 109, ಅಭಿಷೇಕ್ ಶರ್ಮಾ 36, ತಿಲಕ್ ವರ್ಮಾ ಔಟಾಗದೆ 120, ಲುಥೊ ಸಿಪಾಮ್ಲಾ 58ಕ್ಕೆ1)

ಭಾರತದ ಸಂಜು ಸ್ಯಾಮ್ಸನ್ ಬ್ಯಾಟಿಂಗ್ ವೈಖರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.