ಗೆಬೆಹಾ (ದಕ್ಷಿಣ ಆಫ್ರಿಕಾ): ಈಗಷ್ಟೇ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿರುವ ಸಾಯಿ ಸುದರ್ಶನ್ ಹಾಗೂ ನಾಯಕ ಕೆ.ಎಲ್.ರಾಹುಲ್ ಗಳಿಸಿದ ಅರ್ಧಶತಕಗಳ ಬಲದಿಂದ ಭಾರತ ಕ್ರಿಕೆಟ್ ತಂಡವು ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಕ್ರಿಕೆಟ್ ಪಂದ್ಯದಲ್ಲಿ 211 ರನ್ ಗಳಿಸಿದೆ.
ಇಲ್ಲಿನ ಕ್ರೀಡಾಂಗಣದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಸುದರ್ಶನ್ ಜೊತೆ ಇನಿಂಗ್ಸ್ ಆರಂಭಿಸಿದ ಋತುರಾಜ ಗಾಯಕವಾಡ್ (4) ಹಾಗೂ ತಿಲಕ್ ವರ್ಮಾ (10) ಬೇಗನೆ ಔಟಾದರು.
ಈ ಹಂತದಲ್ಲಿ ಕ್ರೀಸ್‌ಗಿಳಿದ ರಾಹುಲ್, ಪದಾರ್ಪಣೆ ಸರಣಿ ಆಡುತ್ತಿರುವ ಯುವ ಬ್ಯಾಟರ್ ಸುದರ್ಶನ್ ಅವರೊಂದಿಗೆ ಅರ್ಧಶತಕದ ಜೊತೆಯಾಟವಾಡಿದರು.
83 ಎಸೆತಗಳನ್ನು ಎದುರಿಸಿದ ಸಾಯಿ, 7 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 62 ರನ್ ಗಳಿಸಿದರು. ಮೊದಲ ಪಂದ್ಯದಲ್ಲಿಯೂ ಅವರು ಅರ್ಧಶತಕ ಸಿಡಿಸಿದ್ದರು. ರಾಹುಲ್ ಕೂಡ ಅರ್ಧಶತಕ (64 ಎಸೆತಗಳಿಂದ 56 ರನ್) ಪೂರೈಸಿದರು.
ಇವರಿಬ್ಬರನ್ನು ಹೊರತುಪಡಿಸಿದರೆ ಉಳಿದ ಯಾವ ಬ್ಯಾಟರ್ ಸಹ ತಮ್ಮ ಸಾಮರ್ಥ್ಯಕ್ಕೆ ತಕ್ಕ ಆಟವಾಡಲಿಲ್ಲ. ಹೀಗಾಗಿ ಟಿಂ ಇಂಡಿಯಾ ಸಾಧಾರಣ ಮೊತ್ತಕ್ಕೆ ಆಲೌಟ್ ಆಯಿತು.
ಆಫ್ರಿಕಾ ತಂಡದ ಪರ ನಂದ್ರೆ ಬರ್ಗರ್ ಮೂರು ವಿಕೆಟ್ ಪಡೆದರೆ, ಬಿಯರಾನ್ ಹೆಂಡ್ರಿಕ್ಸ್, ಕೇಶವ್ ಮಹಾರಾಜ್ ತಲಾ ಎರಡು ವಿಕೆಟ್ ಕಿತ್ತರು. ಇನ್ನೆರಡು ವಿಕೆಟ್‌ಗಳನ್ನು ಲಿಜಾಡ್ ವಿಲಿಯಮ್ಸ್ ಹಾಗೂ ಏಡಿನ್ ಮರ್ಕ್ರಂ ಹಂಚಿಕೊಂಡರು.
ಸಮಬಲಕ್ಕೆ ಆಫ್ರಿಕಾ ಹೋರಾಟ
ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಹೀನಾಯವಾಗಿ ಸೋಲು ಅನುಭವಿಸಿರುವ ಆತಿಥೇಯ ತಂಡ, ಈ ಪಂದ್ಯವನ್ನು ಗೆದ್ದು ಸರಣಿ ಗೆಲುವಿನ ಆಸೆ ಜೀವಂತವಾಗಿ ಉಳಿಸಿಕೊಳ್ಳುವ ಲೆಕ್ಕಾಚಾರದಲ್ಲಿ ಆಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.