ಜಿಕೆಬೆರಾ: ಆತಿಥೇಯ ದಕ್ಷಿಣ ಆಫ್ರಿಕಾ ಬೌಲರ್‌ಗಳ ಸಂಘಟಿತ ದಾಳಿಯ ಮುಂದೆ ಭಾರತ ಕ್ರಿಕೆಟ್ ತಂಡವು ಅಲ್ಪಮೊತ್ತಕ್ಕೆ ಕುಸಿಯಿತು.
ಸೇಂಟ್ ಜಾರ್ಜ್ ಪಾರ್ಕ್‌ನಲ್ಲಿ ಭಾನುವಾರ ನಡೆದ ಎರಡನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 124 ರನ್ ಗಳಿಸಿತು.
ಟಾಸ್ ಗೆದ್ದ ಆತಿಥೇಯ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅದಕ್ಕೆ ತಕ್ಕಂತೆ ಬೌಲರ್‌ಗಳು ದಾಳಿ ನಡೆಸಿದರು. ಆತಿಥೇಯ ಬಳಗದ ಐವರು ಬೌಲರ್‌ಗಳು ತಲಾ ಒಂದು ವಿಕೆಟ್ ಗಳಿಸಿದರು. ಆದರೆ ಬೌಲಿಂಗ್ ಮಾಡಿದ ಆರು ಬೌಲರ್‌ಗಳೂ ಕೂಡ ರನ್‌ಗಳಿಗೆ ಕಡಿವಾಣ ಹಾಕಿದರು.
ಸರಣಿಯ ಮೊದಲ ಪಂದ್ಯದಲ್ಲಿ ಅಬ್ಬರದ ಶತಕ ಬಾರಿಸಿದ್ದ ಸಂಜು ಸ್ಯಾಮ್ಸನ್ ಅವರನ್ನು ಮೊದಲ ಓವರ್‌ನಲ್ಲಿಯೇ ಮಾರ್ಕೊ ಯಾನ್ಸೆನ್ ಕ್ಲೀನ್‌ಬೌಲ್ಡ್ ಮಾಡಿದರು. ಇದರಿಂದಾಗಿ ಸಂಜು ಸೊನ್ನೆ ಸುತ್ತಿದರು. ಅಭಿಷೇಕ್ ಶರ್ಮಾ, ನಾಯಕ ಸೂರ್ಯಕುಮಾರ್ ಯಾದವ್ ತಲಾ 4 ರನ್ ಗಳಿಸಿ ನಿರ್ಗಮಿಸಿದರು. ಇದರಿಂದಾಗಿ ತಂಡವು 15 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತು. ಆಗಿನ್ನೂ ಪವರ್‌ಪ್ಲೇನಲ್ಲಿ ಎರಡು ಓವರ್‌ಗಳು ಬಾಕಿಯಿದ್ದವು.
ತಿಲಕ್ ವರ್ಮಾ (20; 20ಎ) ಮತ್ತು ಅಕ್ಷರ್ ಪಟೇಲ್ (27; 21ಎ) ಚೇತರಿಕೆ ನೀಡುವ ಪ್ರಯತ್ನ ಮಾಡಿದರು. ಆದರೆ ಈ ಜೊತೆಯಾಟವು ಹೆಚ್ಚು ಬೆಳೆಯದಂತೆ ಬೌಲರ್‌ಗಳು ನೋಡಿಕೊಂಡರು.
ತಿಲಕ್ ಔಟಾದ ನಂತರ ಕ್ರೀಸ್‌ಗೆ ಬಂದ ಹಾರ್ದಿಕ್ ಪಾಂಡ್ಯ ಏಕಾಗ್ರತೆಯಿಂದ ಆಡಿದರು. ಆದರೆ ಅವರು ಎಂದಿನ ಬೀಸಾಟವಾಡದೇ ಎಚ್ಚರಿಕೆ ವಹಿಸಿದರು. 45ಎಸೆತಗಳಲ್ಲಿ ಅಜೇಯ 39 ರನ್ ಗಳಿಸಿದರು. ಅದರಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಇದ್ದವು. ಕೊನೆಯ ಹಂತದಲ್ಲಿ ರಿಂಕು ಸಿಂಗ್ ಮತ್ತು ಅರ್ಷದೀಪ್ ಸಿಂಗ್ ಅವರು ಕ್ರಮವಾಗಿ 9 ಮತ್ತು 7 ರನ್ ಗಳಿಸಿದರು.
ಸಂಕ್ಷಿಪ್ತ ಸ್ಕೋರು:
ಭಾರತ: 20 ಓವರ್‌ಗಳಲ್ಲಿ 6ಕ್ಕೆ124 (ತಿಲಕ್ ವರ್ಮಾ 20, ಅಕ್ಷರ್ ಪಟೇಲ್ 27, ಹಾರ್ದಿಕ್ ಪಾಂಡ್ಯ ಔಟಾಗದೆ 39, ಮಾರ್ಕೊ ಯಾನ್ಸೆನ್ 25ಕ್ಕೆ1, ಗೆರಾಲ್ಡ್ ಕೋಜಿ 25ಕ್ಕೆ1, ಸೈಮಲೇನ್ 20ಕ್ಕೆ1, ಏಡನ್ ಮರ್ಕರಂ 4ಕ್ಕೆ1, ಪೀಟರ್ 20ಕ್ಕೆ1)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.