ಧರ್ಮಶಾಲಾ: ನಾಲ್ಕು ವರ್ಷಗಳ ಹಿಂದೆ ತಾವು ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಮೈದಾನದಲ್ಲಿಯೇ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತೆ ’ಕಮ್‌ಬ್ಯಾಕ್’ ಮಾಡುತ್ತಿದ್ದಾರೆ.
ಹಿಮಾಚಲಪ್ರದೇಶ ಕ್ರಿಕೆಟ್ ಸಂಸ್ಥೆ (ಎಚ್‌ಪಿಸಿಎ) ಕ್ರೀಡಾಂಗಣದಲ್ಲಿ ಗುರುವಾರ ನಡೆಯಲಿರುವ ದಕ್ಷಿಣ ಆಫ್ರಿಕಾ ಎದುರಿನ ಮೊದಲ ಪಂದ್ಯದಲ್ಲಿ ಅವರು ಆಡಲಿದ್ದಾರೆ. ಬೆನ್ನಿನ ಶಸ್ತ್ರಚಿಕಿತ್ಸೆಯಿಂದಾಗಿ ಹೋದ ಏಳು ತಿಂಗಳುಗಳಿಂದ ಹಾರ್ದಿಕ್ ಭಾರತ ತಂಡದಿಂದ ದೂರ ಉಳಿದಿದ್ದಾರೆ.
ಹೋದ ವರ್ಷ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್‌ನಲ್ಲಿ ಆಡಿದ್ದು ಕೊನೆಯ ಪಂದ್ಯ. ಇದೀಗ ಅವರು ಮರಳಿರುವುದರಿಂದ ತಂಡದ ಬಲ ಹೆಚ್ಚಿದೆ. ಈಚೆಗೆ ಡಿ.ವೈ. ಪಾಟೀಲ್ ಕಾರ್ಪೊರೇಟ್‌ಕಪ್ ಟೂರ್ನಿಯಲ್ಲಿ ಅಬ್ಬರದ ಬ್ಯಾಟಿಂಗ್ ಮತ್ತು ಉತ್ತಮ ಬೌಲಿಂಗ್ ಮೂಲಕ ಗಮನ ಸೆಳೆದಿದ್ದರು. ಅದರೊಂದಿಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಳಿಸಿದರು.
ಈಚೆಗೆ ನ್ಯೂಜಿಲೆಂಡ್ ಪ್ರವಾಸದಲ್ಲಿ ಏಕದಿನ ಮತ್ತು ಟೆಸ್ಟ್ ಸರಣಿಗಳಲ್ಲಿ ಮುಖಭಂಗ ಅನುಭವಿಸಿರುವ ವಿರಾಟ್ ಕೊಹ್ಲಿ ಬಳಗವು ತವರಿನಂಗಳದಲ್ಲಿ ನಡೆಯಲಿರುವ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಜಯಗಳಿಸುವ ಛಲದಲ್ಲಿದೆ. ಮರಳಿ ಫಾರ್ಮ್‌ಗೆ ಮರಳುವ ಸವಾಲು ಕೂಡ ವಿರಾಟ್ ಎದುರಿಗೆ ಇದೆ. ಕಿವೀಸ್ ಪ್ರವಾಸದಲ್ಲಿ ಅವರು ಕೇವಲ 75 ರನ್‌ಗಳನ್ನು ಮಾತ್ರ ಗಳಿಸಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ಮುನ್ನ ಭಾರತದಲ್ಲಿ ನಡೆಯಲಿರುವ ಕೊನೆಯ ಟೂರ್ನಿ ಇದಾಗಿದೆ.
ಗಾಯದಿಂದ ಚೇತರಿಸಿಕೊಂಡಿರುವ ಶಿಖರ್ ಧವನ್, ಮಧ್ಯಮವೇಗಿ ಭುವನೇಶ್ವರ್ ಕುಮಾರ್ ಕೂಡ ತಂಡಕ್ಕೆ ಮರಳಿರುವುದರಿಂದ ಬಲ ಹೆಚ್ಚಿದೆ. ರೋಹಿತ್ ಶರ್ಮಾ ವಿಶ್ರಾಂತಿಯಲ್ಲಿ ಇರುವುದರಿಂದ ಪೃಥ್ವಿ ಶಾ ಮತ್ತು ಶಿಖರ್ ಧವನ್ ಇನಿಂಗ್ಸ್ ಆರಂಭಿಸುವುದು ಬಹುತೇಕ ಖಚಿತ. ಕೆ.ಎಲ್. ರಾಹುಲ್ ಕೀಪಿಂಗ್ ಹೊಣೆ ನಿರ್ವಹಿಸಬಹುದು. ಇದರಿಂದಾಗಿ ರಿಷಭ್ ಪಂತ್ ಮತ್ತೆ ಬೆಂಚ್ ಕಾಯಬೇಕಾಗಬಹುದು. ಕೇದಾರ್ ಜಾಧವ್ ಅವರನ್ನು ಈ ಬಾರಿ ಆಯ್ಕೆ ಮಾಡಿಲ್ಲ. ಆದ್ದರಿಂದ ಆರನೇ ಕ್ರಮಾಂಕದಲ್ಲಿ ಕರ್ನಾಟಕದ ಮನೀಷ್ ಪಾಂಡೆ ಕಣಕ್ಕಿಳಿಯುವುದು ಖಚಿತ.
ವೇಗದ ಬೌಲಿಂಗ್‌ಗೆ ನೆರವು ನೀಡುವ ಪಿಚ್‌ನಲ್ಲಿ ಮೂವರು ಮಧ್ಯಮವೇಗಿಗಳಾದ ಜಸ್‌ಪ್ರೀತ್ ಬೂಮ್ರಾ, ಭುವಿ ಮತ್ತು ಸೈನಿ ಅವರೊಂದಿಗೆ ಹಾರ್ದಿಕ್ ಆಡಲಿದ್ದಾರೆ. ಅದರಿಂದಾಗಿ ಆಲ್‌ರೌಂಡರ್ ರವೀಂದ್ರ ಜಡೇಜ ಒಬ್ಬರೇ ಸ್ಪಿನ್ ವಿಭಾಗದ ಹೊಣೆ ನಿಭಾಯಿಸಬಹುದು.
ದಕ್ಷಿಣ ಆಫ್ರಿಕಾ ತಂಡವು ಇದೇ ಮೊದಲ ಸಲ ಧರ್ಮಶಾಲಾದಲ್ಲಿ ಏಕದಿನ ಪಂದ್ಯ ಆಡಲಿದೆ. ಆದರೆ, ಭಾರತವು ಇಲ್ಲಿ ಆಡಿರುವ ನಾಲ್ಕು ಪಂದ್ಯಗಳಲ್ಲಿ ಎರಡು ಗೆದ್ದು, ಎರಡರಲ್ಲಿ ಸೋತಿದೆ. ನಾಯಕ ಕ್ವಿಂಟನ್ ಡಿ ಕಾಕ್, ಫಾಫ್ ಡುಪ್ಲೆಸಿ ಮತ್ತು ಡೇವಿಡ್ ಮಿಲ್ಲರ್ ಅವರು ಪ್ರವಾಸಿ ತಂಡದ ಬ್ಯಾಟಿಂಗ್ ಬೆನ್ನೆಲುಬಾಗಿದ್ದಾರೆ. ಜೇನ್ಮನ್ ಮಲಾನ್ ಇದೇ ಮೊದಲ ಸಲ ಭಾರತಕ್ಕೆ ಬರುತ್ತಿದ್ದಾರೆ.
ಕೇಶವ್ ಮಹಾರಾಜ್ ಮತ್ತು ಆ್ಯಂಡಿಲೆ ಪಿಶುವಾಯೊ ತಂಡದ ಪ್ರಮುಖ ಬೌಲರ್‌ಗಳಾಗಿದ್ದಾರೆ.
ಸರಣಿಯ ಇನ್ನೆರಡು ಪಂದ್ಯಗಳು ಲಖನೌ (ಮಾ.15) ಮತ್ತು ಕೋಲ್ಕತ್ತ (ಮಾ.18)ದಲ್ಲಿ ನಡೆಯಲಿವೆ.
ತಂಡಗಳು:ಭಾರತ: ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ಪೃಥ್ವಿ ಶಾ, ಕೆ.ಎಲ್. ರಾಹುಲ್, ಮನೀಷ್ ಪಾಂಡೆ, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ಭುವನೇಶ್ವರ್ ಕುಮಾರ್, ಯಜುವೇಂದ್ರ ಚಾಹಲ್, ಜಸ್‌ಪ್ರೀತ್ ಬೂಮ್ರಾ, ನವದೀಪ್ ಸೈನಿ, ಕುಲದೀಪ್ ಯಾದವ್, ಶುಭಮನ್ ಗಿಲ್.
ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್ (ನಾಯಕ), ತೆಂಬಾ ಬವುಮಾ, ರಾಸಿ ವ್ಯಾನ್ ಡರ್ ಡಸ್ಸೆ, ಫಾಫ್ ಡು ಪ್ಲೆಸಿ, ಕೈಲ್ ವೆರ್ರೇನ್, ಹೆನ್ರಿಚ್ ಕ್ಲಾಸೆನ್, ಜೇನ್ಮನ್ ಮಲಾನ್, ಡೇವಿಡ್ ಮಿಲ್ಲರ್, ಜಾನ್ ಜಾನ್ ಸ್ಮಟ್ಸ್, ಆ್ಯಂಡಿಲ್ ಪಿಶುವಾಯೊ, ಲುಂಗಿ ಗಿಡಿ, ಲುಥೊ ಸಿಪಾಮ್ಲಾ, ಬೇರನ್ ಹೆನ್ರಿಕ್ಸ್, ಎನ್ರಿಚ್ ನೊರ್ಟೆ, ಜಾರ್ಜ್ ಲಿಂಡ್, ಕೇಶವ್ ಮಹಾರಾಜ್.
ಪಂದ್ಯ ಆರಂಭ: ಮಧ್ಯಾಹ್ನ 1.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್
ಕೊರೊನಾ: ಟಿಕೆಟ್ ಮಾರಾಟ ಇಳಿಮುಖ
***
‘ಹೊರಗಿನ ತಿಂಡಿ ತಿನ್ನಬೇಡಿ; ಪರರ ಫೋನ್ ಬಳಸದಿರಿ’
ಧರ್ಮಶಾಲಾ (ಪಿಟಿಐ): ‘ಹೊರಗಡೆ ತಿಂಡಿಯನ್ನು ತಿನ್ನಬೇಡಿ, ಸೆಲ್ಫಿ ತೆಗೆದುಕೊಳ್ಳಲು ಬೇರೆಯವರ ಮೊಬೈಲ್ ಫೋನ್‌ಗಳನ್ನು ಮುಟ್ಟಬೇಡಿ, ಅಪರಿಚಿತರೊಂದಿಗೆ ಸಾಮೀಪ್ಯ ಬೇಡ..’
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ವೈದ್ಯಕೀಯ ತಂಡವು ಕೊರೊನಾ ವೈರಸ್ ಸೋಂಕಿನ ಭೀತಿಯ ಹಿನ್ನೆಲೆಯಲ್ಲಿ ತಂಡದ ಆಟಗಾರರಿಗೆ ಈ ರೀತಿಯ ಸೂಚನೆಗಳನ್ನು ನೀಡಿದೆ.
ಚೆಂಡು ಹೊಳಪಿಗೆ ಎಂಜಲು ಬಳಕೆಯಿಲ್ಲ!
ಬಿಳಿಚೆಂಡಿನ ಹೊಳಪು ಹೆಚ್ಚಿಸಲು ಬೌಲರ್‌ಗಳು ತಮ್ಮ ಎಂಜಲು ಬಳಸುವುದು ಮೊದಲಿನಿಂದಲೂ ರೂಢಿಯಲ್ಲಿದೆ. ಆದರೆ ಇದೀಗ ಕೊರೊನಾ ವೈರಸ್ ಪರಿಣಾಮ ಈ ಹಳೆಯ ಪದ್ಧತಿಯನ್ನು ಕೈಬಿಡಲು ಭಾರತ ತಂಡವು ಹೆಜ್ಜೆ ಇಟ್ಟಿದೆ.
‘ಎಂಜಲು ಬಳಸದಿರಲು ಯೋಚಿಸಿದ್ದೇವೆ. ಆದರೆ, ಅದಿಲ್ಲದೇ ಚೆಂಡಿನ ಹೊಳಪು ಹೆಚ್ಚಿಸುವುದು ಹೇಗೆ? ಹಾಗೊಮ್ಮೆ ಮಾಡದಿದ್ದರೆ ಬ್ಯಾಟ್ಸ್‌ಮನ್‌ಗಳು ನಮ್ಮನ್ನು ದಂಡಿಸುವುದು ಖಚಿತ. ಆಗ ನಾವು ಚೆನ್ನಾಗಿ ಬೌಲಿಂಗ್ ಮಾಡಿಲ್ಲವೆಂದು ನೀವೇ ಟೀಕಿಸುತ್ತೀರಿ. ತಂಡದ ಸಭೆಯಲ್ಲಿ ಈ ಕುರಿತು ನಿರ್ಧರಿಸುತ್ತೇವೆ’ ಎಂದು ಭಾರತದ ಮಧ್ಯಮವೇಗಿ ಭುವನೇಶ್ವರ್ ಕುಮಾರ್ ತಿಳಿಸಿದ್ದಾರೆ.
ಕೊರೊನಾ: ಟಿಕೆಟ್ ಮಾರಾಟ ಇಳಿಮುಖ
ಕೊರೊನಾ ವೈರಸ್ ಭೀತಿಯು ಗುರುವಾರ ಇಲ್ಲಿ ನಡೆಯಲಿರುವ ಪಂದ್ಯದ ಟಿಕೆಟ್ ಮಾರಾಟದ ಮೇಲೆಯೂ ಪರಿಣಾಮ ಬೀರಿದೆ.
ಏಕದಿನ ಅಥವಾ ಟ20 ಪಂದ್ಯಗಳ ಟಿಕೆಟ್‌ಗಳಿಗಾಗಿ ಜನರು ಮುಗಿಬೀಳುತ್ತಾರೆ. ಆದರೆ ಈ ಬಾರಿ ಇಲ್ಲಿ ಮಾರಾಟಕ್ಕಿದ್ದ 22 ಸಾವಿರ ಟಿಕೆಟ್‌ಗಳಲ್ಲಿ ಇದುವರೆಗೆ ಕೇವಲ 16 ಸಾವಿರ ಮಾತ್ರ
ಬಿಕರಿಯಾಗಿವೆ.
‘ಸುಮಾರು ಒಂದು ಸಾವಿರ ವಿದೇಶಿ ಅಭಿಮಾನಿಗಳು ಇಲ್ಲಿಗೆ ಬರುವುದನ್ನು ರದ್ದುಗೊಳಿಸಿದ್ದಾರೆ. ಸ್ಥಳೀಯರು ಮತ್ತು ನೆರೆಯ ಪಂಜಾಬ್, ಹರಿಯಾಣ, ಮತ್ತು ದೆಹಲಿಯ ಅಭಿಮಾನಿಗಳೂ ಈ ಬಾರಿ ಕ್ರೀಡಾಂಗಣದತ್ತ ಹೆಚ್ಚು ಬಂದಿಲ್ಲ. ಪೇಟಿಎಂ ಮೂಲಕ ಆನ್‌ಲೈನ್ ಟಿಕೆಟ್ ಪಡೆಯಲು ಅವಕಾಶ ಇದೆ. ಪ್ರತಿ ಬಾರಿ ಪಂದ್ಯ ನಡೆದಾಗಲೂ ಟಿಕೆಟ್‌ಗಳು ವೇಗವಾಗಿ ಖರ್ಚಾಗುತ್ತಿದ್ದವು. ಆದರೆ, ಈ ಬಾರಿ ನಿರಾಶಾದಾಯಕವಾಗಿದೆ’ ಎಂದು ಎಚ್‌ಪಿಸಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದಕ್ಷಿಣ ಆಫ್ರಿಕಾದಿಂದ ಈ ಬಾರಿ ಕ್ರೀಡಾ ಪತ್ರಕರ್ತರು ಪಂದ್ಯದ ವರದಿಗೆ ಬಂದಿಲ್ಲ. ಈ ರೀತಿಯಾಗುತ್ತಿರುವುದು ಇದೇ ಮೊದಲ ಸಲ ಎನ್ನಲಾಗಿದೆ.
‘ಕೊರೊನಾ ವೈರಸ್ ಮುಂಜಾಗ್ರತೆ ಕ್ರಮಗಳ ಜಾಗೃತಿಗಾಗಿ ಎಲ್ಲ ಕಡೆಯೂ ಮಾಹಿತಿಗಳ ಫಲಕಗಳನ್ನು, ಭಿತ್ತಿಚಿತ್ರಗಳನ್ನು ಹಾಕಲಾಗಿದೆ. ಎಲ್ಲ ರೀತಿಯ ಕ್ರಮಗಳನ್ನೂ ಕೈಗೊಳ್ಳಲಾಗಿದೆ’ ಎಂದು ಮೂಲಗಳು ತಿಳಿಸಿವೆ.
‘ಮಳೆ ಬರುವ ಸಾಧ್ಯತೆಗಳೂ ಇವೆ. ಚಳಿಗಾಳಿಯ ವಾತಾವರಣವೂ ಇದೆ. ಆದ್ದರಿಂದಲೂ ಕೆಲವರು ಪಂದ್ಯದ ಟಿಕೆಟ್ ಖರೀದಿಗೆ ಆಸಕ್ತಿ ತೋರುತ್ತಿಲ್ಲ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.