ADVERTISEMENT

T20 World Cup: ಮರ್ಕರಂ- ಮಿಲ್ಲರ್ ಆರ್ಭಟ, ಭಾರತದ ವಿರುದ್ಧ ಆಫ್ರಿಕಾಗೆ ಜಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಅಕ್ಟೋಬರ್ 2022, 18:39 IST
Last Updated 30 ಅಕ್ಟೋಬರ್ 2022, 18:39 IST
ಡೇವಿಡ್ ಮಿಲ್ಲರ್
ಡೇವಿಡ್ ಮಿಲ್ಲರ್   

ಪರ್ತ್: ಭಾನುವಾರ ರಾತ್ರಿ ಆಪ್ಟಸ್ ಕ್ರೀಡಾಂಗಣದಲ್ಲಿ ವೇಗದ ಬೌಲರ್‌ಗಳ ಪ್ರಭಾವ ಅನಿರೀಕ್ಷಿತವೇನೂ ಆಗಿರಲಿಲ್ಲ.

ಅತ್ಯಂತ ಉತ್ಕೃಷ್ಟ ದರ್ಜೆಯ ವೇಗದ ಬೌಲಿಂಗ್ ದಾಳಿ ನಡೆಸಿದ ದಕ್ಷಿಣ ಆಫ್ರಿಕಾದ ಬೌಲರ್‌ಗಳು ಹಾಗೂ ಬ್ಯಾಟಿಂಗ್‌ನಲ್ಲಿ ಏಡನ್ ಮರ್ಕರಂ, ಡೇವಿಡ್ ಮಿಲ್ಲರ್ ಅವರ ನಾಲ್ಕನೇ ವಿಕೆಟ್‌ ಜೊತೆಯಾಟವು ಭಾರತದ ಗೆಲುವಿನ ಓಟಕ್ಕೆ ತಡೆಯೊಡ್ಡಿತು. ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12ರ ಎರಡನೆ ಗುಂಪಿನ ಪಂದ್ಯದಲ್ಲಿ 5 ವಿಕೆಟ್‌ಗಳಿಂದ ಗೆದ್ದ ದಕ್ಷಿಣ ಆಫ್ರಿಕಾ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಎದುರಾಳಿ ತಂಡದ ವೇಗಿ ಲುಂಗಿ ಗಿಡಿ ತಮ್ಮ ಮೊದಲ ಸ್ಪೆಲ್‌ನಲ್ಲಿ ಬಲವಾದ ಪೆಟ್ಟುಕೊಟ್ಟರು. ಕೆ.ಎಲ್. ರಾಹುಲ್, ವಿರಾಟ್ ಕೊಹ್ಲಿ ಹಾಗೂ ಹಾರ್ದಿಕ್ ಪಾಂಡ್ಯ ಅವರ ವಿಕೆಟ್‌ಗಳನ್ನು ಮೊದಲ ಮೂರು ಓವರ್‌ಗಳಲ್ಲಿಯೇ ತಮ್ಮ ಬುಟ್ಟಿಗೆ ಹಾಕಿಕೊಂಡರು. ಆದರೆ ಮತ್ತೊಮ್ಮೆ ದಿಟ್ಟ ಆಟವಾಡಿದ ಸೂರ್ಯಕುಮಾರ್ ಯಾದವ್ (68; 40ಎ, 4X6, 6X3) ಅವರಿಂದಾಗಿ ಭಾರತ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 133 ರನ್ ಗಳಿಸಿತು. ವೇಯ್ನ್ ಪಾರ್ನೆಲ್, ಶಿಸ್ತಿನ ದಾಳಿ ನಡೆಸಿದ ಕಗಿಸೊ ರಬಾಡ ಹಾಗೂ ಎನ್ರಿಚ್ ನಾಕಿಯಾ ಬ್ಯಾಟರ್‌ಗಳಿಗೆ ಕಡಿವಾಣ ಹಾಕಿದರು. ಭಾರತವು 49 ರನ್‌ಗಳಿಗೆ 5 ವಿಕೆಟ್‌ ಕಳೆದುಕೊಂಡಿದ್ದ ಸಂದರ್ಭದಲ್ಲಿ ಸೂರ್ಯ ಜೊತೆಗೂಡಿದ ದಿನೇಶ್ ಕಾರ್ತಿಕ್ (6;15ಎ) ತಂಡದ ಮೊತ್ತ ನೂರರ ಗಡಿ ದಾಟಿಸಲು ನೆರವಾದರು. ಕಳೆದ ಪಂದ್ಯದಲ್ಲಿಯೂ ಅರ್ಧಶತಕ ಗಳಿಸಿದ್ದ ಸೂರ್ಯ ಇಲ್ಲಿಯೂ ಸುಂದರ ಬ್ಯಾಟಿಂಗ್ ಮಾಡಿದರು. ಬೌಲರ್‌ಗಳ ಬೌನ್ಸ್, ಸ್ವಿಂಗ್‌ಗಳನ್ನು ಚಾಣಾಕ್ಷತೆಯಿಂದ ಎದುರಿಸಿದರು. ಅವರ ಫುಟ್‌ವರ್ಕ್ ಹಾಗೂ ಅಪರ್ ಕಟ್, ಸ್ಕೂಪ್ ಕೌಶಲಗಳು ಚಿತ್ತಾಪಹಾರಿಯಾಗಿದ್ದವು.ಈ ಪಂದ್ಯದಲ್ಲಿ ಅವಕಾಶ ಗಿಟ್ಟಿಸಿದ್ದ ದೀಪಕ್ ಹೂಡಾ ಖಾತೆ ತೆರೆಯಲಿಲ್ಲ. ಕೆಟ್ಟ ಪಾದಚಲನೆಯ ಆಟಕ್ಕೆ ದಂಡ ತೆತ್ತರು.

ADVERTISEMENT

ಲುಂಗಿ ಭಾರತದ ಎದುರಿನ ಪಂದ್ಯಗಳಲ್ಲಿ ತಮ್ಮ ತಂಡದ ರೂವಾರಿಯಾಗುವುದನ್ನು ಹವ್ಯಾಸ ಮಾಡಿಕೊಂಡಿದ್ದಾರೆ. 2018ರಲ್ಲಿ ಸೆಂಚುರಿಯನ್‌ನಲ್ಲಿ ನಡೆದಿದ್ದ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ಅವರು ಆರು ವಿಕೆಟ್ ಗಳಿಸಿ ದಕ್ಷಿಣ ಆಫ್ರಿಕಾಕ್ಕೆ ಜಯದ ಕಾಣಿಕೆ ನೀಡಿದ್ದರು. ಬೌಲಿಂಗ್ ಜೊತೆಗೆ ಫೀಲ್ಡಿಂಗ್‌ನಲ್ಲಿಯೂ ಮಿಂಚಿದ ರಬಾಡ ಮೂರು ಅಮೋಘ ಕ್ಯಾಚ್‌ಗಳನ್ನು ಪಡೆದರು.

ಈ ಸಾಧಾರಣ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾಕ್ಕೆ ಆರಂಭದಲ್ಲಿಯೇ ಆರ್ಷದೀಪ್ ಸಿಂಗ್ (25ಕ್ಕೆ2) ಪೆಟ್ಟು ಕೊಟ್ಟರು.ಇದರಿಂದಾಗಿ ಭಾರತಕ್ಕೂ ಗೆಲುವಿನತ್ತ ಸಾಗುವ ಅವಕಾಶ ಇತ್ತು. ಆದರೆ, ಫೀಲ್ಡಿಂಗ್‌ನಲ್ಲಿ ನಡೆದ ಲೋಪಗಳು ದುಬಾರಿಯಾದವು. ಅಶ್ವಿನ್ ಬೌಲಿಂಗ್‌ನಲ್ಲಿ ವಿರಾಟ್ ಕೊಹ್ಲಿ ಡೀಪ್‌ ಮಿಡ್‌ ವಿಕೆಟ್‌ನಲ್ಲಿ ಸುಲಭವಾದ ಕ್ಯಾಚ್‌ ಅನ್ನು ಕೈಚೆಲ್ಲಿದ್ದರಿಂದ ಏಡನ್ ಮರ್ಕರಂ ಜೀವದಾನ ಪಡೆದರು. ಆಗ ಅವರು 35 ರನ್ ಗಳಿಸಿ ಆಡುತ್ತಿದ್ದರು.

ಇದಾಗಿ ಸ್ವಲ್ಪ ಹೊತ್ತಿನ ನಂತರ ಮರ್ಕರಂ ಅವರನ್ನು ರನೌಟ್ ಮಾಡುವ ಅವಕಾಶವನ್ನು ನಾಯಕ ರೋಹಿತ್ ಶರ್ಮಾ ಕೈಚೆಲ್ಲಿದರು. ಮುಂಬೈಕರ್ ಕೇವಲ 10 ಅಡಿ ಅಂತರದಲ್ಲಿ ಗುರಿತಪ್ಪಿದರು. ಸಾಧಾರಣ ಮೊತ್ತದ ಗುರಿಯೊಡ್ಡಿ ಆಡುವಾಗ ಇಂತಹ ಲೋಪಗಳು ದುಬಾರಿಯಾಗುತ್ತವೆ.

ಮರ್ಕರಂ ಹಾಗೂ ಮಿಲ್ಲರ್ ಆಫ್‌ಸ್ಪಿನ್ನರ್ ಅಶ್ವಿನ್ ಅವರನ್ನು ದಂಡಿಸಿದರು. ಅವರ ನಾಲ್ಕು ಓವರ್‌ಗಳಲ್ಲಿ 43 ರನ್‌ಗಳನ್ನು ಸೂರೆ ಮಾಡಿದರು. ಇದು ದಕ್ಷಿಣ ಆಫ್ರಿಕಾದ ಜಯದ ಅವಕಾಶವನ್ನು ಮತ್ತಷ್ಟು ಸುಲಭಗೊಳಿಸಿತು. 19.4 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 137 ರನ್‌ ಗಳಿಸಿ ತೆಂಬಾ ಬವುಮಾ ಬಳಗವು ಸಂಭ್ರಮಿಸಿತು.

ಕೀಪಿಂಗ್ ತೊರೆದ ದಿನೇಶ್ : ಭಾರತದ ದಿನೇಶ್ ಕಾರ್ತಿಕ್ ವಿಕೆಟ್‌ಕೀಪಿಂಗ್ ಮಾಡುವಾಗ ಬೆನ್ನುನೋವಿನಿಂದ ಬಳಲಿದರು. ಅದರಿಂದಾಗಿ ಅವರಿಗೆ ವಿಶ್ರಾಂತಿ ನೀಡಲಾಯಿತು. ರಿಷಭ್ ಪಂತ್ ಕೀಪಿಂಗ್ ಹೊಣೆ ನಿಭಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.