ADVERTISEMENT

IND vs SL | 150ನೇ ಏಕದಿನ ಪಂದ್ಯ; ದಾಖಲೆಗೆ ಸಾಕ್ಷಿಯಾದ ಕೊಲಂಬೊ ಕ್ರೀಡಾಂಗಣ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಆಗಸ್ಟ್ 2024, 9:39 IST
Last Updated 4 ಆಗಸ್ಟ್ 2024, 9:39 IST
<div class="paragraphs"><p>ಆರ್‌. ಪ್ರೇಮದಾಸ ಕ್ರೀಡಾಂಗಣ</p></div>

ಆರ್‌. ಪ್ರೇಮದಾಸ ಕ್ರೀಡಾಂಗಣ

   

ಚಿತ್ರ: X / @devellix

ಕೊಲಂಬೊ: ಶ್ರೀಲಂಕಾ ಹಾಗೂ ಭಾರತ ನಡುವಣ ಏಕದಿನ ಕ್ರಿಕೆಟ್‌ ಸರಣಿಯ 2ನೇ ಪಂದ್ಯಕ್ಕೆ ವೇದಿಕೆಯಾಗಿರುವ ಕೊಲಂಬೊದ ಆರ್‌. ಪ್ರೇಮದಾಸ ಕ್ರೀಡಾಂಗಣ, 150ಕ್ಕಿಂತ ಹೆಚ್ಚು ಏಕದಿನ ಪಂದ್ಯಗಳಿಗೆ ಸಾಕ್ಷಿಯಾದ ಕ್ರೀಡಾಂಗಣಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

ADVERTISEMENT

ಈ ಪೈಕಿ ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವೆಯೇ 40 ಪಂದ್ಯಗಳು ನಡೆದಿವೆ. ಒಂದೇ ತಾಣದಲ್ಲಿ ಎರಡು ತಂಡಗಳ ನಡುವೆ ಇಷ್ಟು ಪಂದ್ಯಗಳು ನಡೆದಿರುವುದೂ ದಾಖಲೆಯಾಗಿದೆ.

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಏಕದಿನ ಮಾದರಿಯ ಅತಿಹೆಚ್ಚು ಪಂದ್ಯಗಳು ನಡೆದಿರುವ ಕ್ರೀಡಾಂಗಣ ಎಂಬ ಶ್ರೇಯ ಯುಎಇಯ ಶಾರ್ಜಾದ್ದು. ಇಲ್ಲಿ ಬರೋಬ್ಬರಿ 249 ಪಂದ್ಯಗಳು ನಡೆದಿವೆ. ಜಿಂಬಾಬ್ವೆಯ ಹರಾರೆ ಸ್ಪೋರ್ಟ್ಸ್‌ ಕ್ಲಬ್‌ ಕ್ರೀಡಾಂಗಣ ನಂತರದ ಸ್ಥಾನದಲ್ಲಿದೆ. 182 ಪಂದ್ಯಗಳಿಗೆ ಈ ಮೈದಾನ ಸಾಕ್ಷಿಯಾಗಿದೆ.

ಆಸ್ಟ್ರೇಲಿಯಾದ ಸಿಡ್ನಿ ಮತ್ತು ಮೆಲ್ಬರ್ನ್‌ ಕ್ರೀಡಾಂಗಣಗಲ್ಲಿ ಕ್ರಮವಾಗಿ 161 ಹಾಗೂ 151 ಪಂದ್ಯಗಳು ನಡೆದಿವೆ. ಹೀಗಾಗಿ ಈ ಮೈದಾನಗಳು ಪಟ್ಟಿಯಲ್ಲಿ 3 ಮತ್ತು 4ನೇ ಸ್ಥಾನಗಳಲ್ಲಿವೆ. ಉಳಿದಂತೆ ಬಾಂಗ್ಲಾದೇಶದ ಢಾಕಾದಲ್ಲಿರುವ ಮೀರ್‌ಪುರ ಕ್ರೀಡಾಂಗಣದಲ್ಲಿ (120) ಮಾತ್ರವೇ 100ಕ್ಕಿಂತ ಹೆಚ್ಚು ಅಂತರರಾಷ್ಟ್ರೀಯ ಏಕದಿನ ಪಂದ್ಯಗಳು ನಡೆದಿವೆ.

ಶ್ರೀಲಂಕಾಗೆ ಆರಂಭಿಕ ಆಘಾತ
ಭಾರತ ವಿರುದ್ಧದ ಮೂರು ಪಂದ್ಯಗಳ ಸರಣಿಯ ಎರಡನೇ ಹಣಾಹಣಿಯಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆರಂಭಿಸಿರುವ ಶ್ರೀಲಂಕಾ ಆರಂಭಿಕ ಆಘಾತ ಅನುಭವಿಸಿದೆ.

ಅವಿಷ್ಕ ಫರ್ನಾಂಡೊ ಜೊತೆ ಕ್ರೀಸ್‌ಗಿಳಿದ ಪಾಥುಮ್‌ ನಿಸ್ಸಾಂಕ (0) ಇನಿಂಗ್ಸ್‌ನ ಮೊದಲ ಎಸೆತದಲ್ಲೇ ಔಟಾಗಿದ್ದಾರೆ. ಅವರು ಮೊಹಮದ್‌ ಸಿರಾಜ್‌ ಬೌಲಿಂಗ್‌ನಲ್ಲಿ ವಿಕೆಟ್‌ ಕೀಪರ್‌ ಕೆ.ಎಲ್‌.ರಾಹುಲ್‌ಗೆ ಕ್ಯಾಚ್‌ ನೀಡಿ ನಿರ್ಗಮಿಸಿದ್ದಾರೆ. ಸದ್ಯ 5 ಓವರ್‌ಗಳ ಆಟ ಮುಕ್ತಾಯವಾಗಿದ್ದು ತಂಡದ ಮೊತ್ತ 1 ವಿಕೆಟ್‌ಗೆ 17 ರನ್‌ ಆಗಿದೆ.

ಶ್ರೀಲಂಕಾದ ಬ್ಯಾಟರ್‌ಗಳು ಭಾರತದ ವಿರುದ್ಧದ ಪಂದ್ಯದ ಇನಿಂಗ್ಸ್‌ನ ಮೊದಲ ಎಸೆತದಲ್ಲೇ ಔಟಾಗಿದ್ದು ಇದು ನಾಲ್ಕನೇ ಸಲ. ಈ ಹಿಂದೆ ಸನತ್‌ ಜಯಸೂರ್ಯ 2002ರಲ್ಲಿ ಜಹೀರ್‌ ಖಾನ್‌ಗೆ ವಿಕೆಟ್‌ ಒಪ್ಪಿಸಿದ್ದರು. ನಂತರ ಉಪುಲ್‌ ತರಂಗ 2009 ಮತ್ತು 2010ರಲ್ಲಿ ಔಟಾಗಿದ್ದರು. ಅವರು ಕ್ರಮವಾಗಿ ಜಹೀರ್‌ ಖಾನ್‌ ಮತ್ತು ಪ್ರವೀಣ್‌ ಕುಮಾರ್‌ ಬೌಲಿಂಗ್‌ನಲ್ಲಿ ಪೆವಿಲಿಯನ್‌ ಸೇರಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.