ರಾಜ್‌ಕೋಟ್: ಸೂರ್ಯಕುಮಾರ್ ಯಾದವ್ ಅವರ ಮತ್ತೊಂದು ಅಮೋಘ ಮತ್ತು ವೈಶಿಷ್ಟ್ಯಪೂರ್ಣ ಬ್ಯಾಟಿಂಗ್ ಇಲ್ಲಿಯ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಅಂಗಳದಲ್ಲಿ ದಾಖಲಾಯಿತು.
ಇದರಿಂದಾಗಿ ಭಾರತ ತಂಡವು ಶನಿವಾರ ನಡೆದ ಶ್ರೀಲಂಕಾ ಎದುರಿನ ಮೂರನೇ ಮತ್ತು ಕೊನೆಯ ಪಂದ್ಯದಲ್ಲಿ 91 ರನ್‌ಗಳಿಂದ ಜಯಿಸಿತು. ಸರಣಿಯಲ್ಲಿ 2–1ರಿಂದ ಗೆಲುವು ಸಾಧಿಸಿತು.
ಸೂರ್ಯಕುಮಾರ್ ಬೀಸಾಟಕ್ಕೆ ಚೆಂಡು ಸಿಗದಂತೆ ಎಸೆತಗಳನ್ನು ಹಾಕುವ ಬೌಲರ್‌ಗಳ ಯತ್ನಗಳೆಲ್ಲವೂ ವಿಫಲವಾದವು. ಕ್ರೀಸ್‌ನೊಳಗೆ ಮತ್ತು ಹೊರಗೆ ಎದ್ದು, ಬಿದ್ದು ಮತ್ತು ಹೊರಳಾಡಿ ಬ್ಯಾಟ್ ಮಾಡಿದ ‘ಮಿಸ್ಟರ್ 360 ಡಿಗ್ರಿ’ ಸೂರ್ಯ ಅಜೇಯ ಶತಕ ದಾಖಲಿಸಿದರು. 51 ಎಸೆತಗಳಲ್ಲಿ 112 ರನ್ ಗಳಿಸಿದ ಅವರ ಬ್ಯಾಟಿಂಗ್‌ನಿಂದಾಗಿ ಭಾರತ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 228 ರನ್ ಗಳಿಸಿತು. ಇದರಿಂದಾಗಿ ಆತಿಥೇಯ ಬೌಲರ್‌ಗಳು ತುಂಬು ಆತ್ಮವಿಶ್ವಾಸದಿಂದ ಆಡಿದರು. ಶ್ರೀಲಂಕಾ ತಂಡವು 16.4 ಓವರ್‌ಗಳಲ್ಲಿ 137 ರನ್ ಗಳಿಸಲಷ್ಟೇ ಶಕ್ತವಾಯಿತು.
ಮೈದಾನದ ಮೂಲೆಮೂಲೆಗೂ ಚೆಂಡನ್ನು ಅಟ್ಟಿದರು. ಅವರು ಸಿಡಿಸಿದ ಒಂಬತ್ತು ಸಿಕ್ಸರ್ ಮತ್ತು ಏಳು ಬೌಂಡರಿಗಳನ್ನು ಕ್ರೀಡಾಂಗಣದಲ್ಲಿ ಸೇರಿದ್ದ 28 ಸಾವಿರ ಜನ ಕಣ್ತುಂಬಿಕೊಂಡರು. ಹರ್ಷದಿಂದ ಕುಣಿದಾಡಿದರು.
ಟಾಸ್ ಗೆದ್ದ ಭಾರತ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ ಮೊದಲ ಓವರ್‌ನಲ್ಲಿಯೇ ಇಶಾನ್ ಕಿಶನ್ ಕೇವಲ ಒಂದು ರನ್ ಗಳಿಸಿ ದಿಲ್ಶಾನ್ ಮಧುಶಂಕಾ ಎಸೆತದಲ್ಲಿ ಧನಂಜಯಗೆ ಕ್ಯಾಚಿತ್ತು ನಿರ್ಗಮಿಸಿದರು.
ಶುಭಮನ್ ಗಿಲ್ ಜೊತೆಗೂಡಿದ ರಾಹುಲ್ ತ್ರಿಪಾಠಿ ಇನಿಂಗ್ಸ್‌ಗೆ ಚೇತರಿಕೆ ನೀಡಿದರು. ಎರಡನೇ ಅಂತರರಾಷ್ಟ್ರೀಯ ಟಿ20 ಪಂದ್ಯವಾಡಿದ ತ್ರಿಪಾಠಿ 16 ಎಸೆತಗಳಲ್ಲಿ 35 ರನ್ ಗಳಿಸಿದರು. ಅದರಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್ ಗಳಿಸಿದರು. ಶುಭಮನ್ (46;36) ಶಾಂತಚಿತ್ತರಾಗಿ ಬ್ಯಾಟಿಂಗ್ ಮಾಡಿದರು. ಇಬ್ಬರೂ ಸೇರಿ ಎರಡನೇ ವಿಕೆಟ್‌ಗೆ 49 ರನ್ ಸೇರಿಸಿದರು. ಆರನೇ ಓವರ್‌ನಲ್ಲಿ ತ್ರಿಪಾಠಿ ಔಟಾದಾಗ ಶ್ರೀಲಂಕಾ ಆಟಗಾರರು ಸಂಭ್ರಮಿಸಿದರು. ಈ ಸಂತಸ ಹೆಚ್ಚು ಹೊತ್ತು ಇರಲಿಲ್ಲ!
ಸೂರ್ಯ ಕ್ರೀಸ್‌ಗೆ ಕಾಲಿಟ್ಟ ಮೇಲೆ ಅವರದ್ದೇ ಆಟ. ಇನ್ನೊಂದು ಬದಿಯಲ್ಲಿ ಶುಭಮನ್ ಕೂಡ ಪ್ರೇಕ್ಷಕರಂತೆ ಇದ್ದುಬಿಟ್ಟರು. ಇವರಿಬ್ಬರ ಜೊತೆಯಾಟದಲ್ಲಿ 111 ರನ್ ಸೇರಿದವು. ಅದರಲ್ಲಿ ಶುಭಮನ್ ಕಾಣಿಕೆ 32 ರನ್‌ಗಳು ಮಾತ್ರ. ಉಳಿದ್ದದ್ದು ಸೂರ್ಯಪ್ರತಾಪ!
ಮುಂಬೈಕರ್ 26 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ನಂತರ 19 ಎಸೆತಗಳಲ್ಲಿ ಶತಕದ ಗಡಿ ಮುಟ್ಟಿದರು.
ಸಂಕ್ಷಿಪ್ತ ಸ್ಕೋರು: ಭಾರತ: 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 228 (ಶುಭಮನ್ ಗಿಲ್ 46, ರಾಹುಲ್ ತ್ರಿಪಾಠಿ 35, ಸೂರ್ಯಕುಮಾರ್ ಯಾದವ್ ಔಟಾಗದೆ 112, ಅಕ್ಷರ್ ಪಟೇಲ್ ಔಟಾಗದೇ 21, ದಿಲ್ಶಾನ್ ಮಧುಶಂಕಾ 55ಕ್ಕೆ2, ರಜಿತಾ 35ಕ್ಕೆ1, ಚಮಿಕಾ ಕರುಣಾರತ್ನೆ 52ಕ್ಕೆ1, ವಣಿಂದು ಹಸರಂಗಾ 36ಕ್ಕೆ1)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.