ADVERTISEMENT

Asia Cup Final: ಸಿರಾಜ್ ಬಿರುಗಾಳಿ ಬೌಲಿಂಗ್– ಶ್ರೀಲಂಕಾ 50 ರನ್‌ಗೆ ಆಲೌಟ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಸೆಪ್ಟೆಂಬರ್ 2023, 12:06 IST
Last Updated 17 ಸೆಪ್ಟೆಂಬರ್ 2023, 12:06 IST
   

ಕೊಲಂಬೊ: ಭಾರತದ ವೇಗಿ ಮೊಹಮ್ಮದ್ ಸಿರಾಜ್ ಅವರ ಬಿರುಗಾಳಿ ಬೌಲಿಂಗ್‌ಗೆ ತತ್ತರಿಸಿದ ಶ್ರೀಲಂಕಾ ತಂಡ ಇಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಕೇವಲ 50 ರನ್‌ಗಳಿಗೆ ಆಲೌಟ್ ಆಗಿದೆ.

ಮೊಹಮ್ಮದ್ ಸಿರಾಜ್ ಮಾರಕ ಬೌಲಿಂಗ್ ಎದುರು ತತ್ತರಿಸಿದ ಶ್ರೀಲಂಕಾ ಬ್ಯಾಟರ್‌ಗಳು ತರಗೆಲೆಗಳಂತೆ ಉರುಳಿದರು. 7 ಓವರ್‌ಗಳಲ್ಲಿ 21 ರನ್ ನೀಡಿ 6 ವಿಕೆಟ್ ಕಬಳಿಸಿದ ಸಿರಾಜ್ ಲಂಕನ್ನರನ್ನು ದುಃಸ್ವಪ್ನವಾಗಿ ಕಾಡಿದರು.

ಕುಶಾಲ ಪೆರೆರಾ, ಸದೀರ ಸಮರವಿಕ್ರಮ, ಚರಿತ ಅಸಲಂಕಾ ಅವರನ್ನು ಶೂನ್ಯಕ್ಕೆ ಪೆವಿಲಿಯನ್‌ಗೆ ಅಟ್ಟಿದ ಸಿರಾಜ್ ಜೀವನಶ್ರೇಷ್ಠ ಬೌಲಿಂಗ್ ಪ್ರದರ್ಶನ ನೀಡಿದರು. ಸಿರಾಜ್ ಬಲೆಗೆ ಬಿದ್ದ ಇನ್ನೂ ಮೂವರು ಬ್ಯಾಟರ್‌ಗಳಾದ ಪಥುಮ್ ನಿಸಲಂಕಾ, ಧನಂಜಯ ಡಿಸಿಲ್ವಾ ಮತ್ತು ಕುಶಾಲ ಮೆಂಡೀಸ್ ಕ್ರಮವಾಗಿ 2,4, 17 ರನ್‌ ಗಳಿಸಿದರು.

ADVERTISEMENT

ಸಿರಾಜ್ ದಾಳಿ ಬೆನ್ನಲ್ಲೇ ಬೌಲಿಂಗ್‌ಗಿಳಿದ ಹಾರ್ದಿಕ್ ಪಾಂಡ್ಯ ಕೇವಲ 3 ರನ್‌ಗೆ 3 ವಿಕೆಟ್ ಉರುಳಿಸಿದರು. ಒಂದು ವಿಕೆಟ್ ಜಸ್‌ಪ್ರೀತ್ ಬೂಮ್ರಾ ಪಾಲಾಯಿತು.

ಅಂತಿಮವಾಗಿ ಶ್ರೀಲಂಕಾ 15.2 ಓವರ್‌ಗಳಲ್ಲಿ 50 ರನ್‌ಗೆ ಆಲೌಟ್ ಆಯಿತು.

ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದಿದ್ದ ಶ್ರೀಲಂಕಾದ ಬ್ಯಾಟರ್‌ಗಳು ನಾಯಕನ ನಿರ್ಣಯ ಸಮರ್ಥಿಸುವಂತೆ ಬ್ಯಾಟಿಂಗ್ ಮಾಡುವಲ್ಲಿ ವಿಫಲರಾದರು. ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ಲಂಕನ್ನರು ಕನಿಷ್ಠ ಮೊತ್ತಕ್ಕೆ ಇನಿಂಗ್ಸ್ ಮುಗಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.