ಹುಬ್ಬಳ್ಳಿ: ಭಾರತ ‘ಎ’ ಮತ್ತು ಶ್ರೀಲಂಕಾ ‘ಎ’ ತಂಡಗಳ ನಡುವೆ ಇಲ್ಲಿನ ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಗುರುವಾರ(ಜೂನ್ 13) ನಡೆಯಲಿರುವ ನಾಲ್ಕನೇ ಏಕದಿನ ಪಂದ್ಯದ ಮೇಲೆ ಮಳೆಯ ಕಾರ್ಮೋಡ ಕವಿದಿದೆ.
ಐದು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯಲ್ಲಿ ಈಗಾಗಲೇ ಬೆಳಗಾವಿಯಲ್ಲಿ ನಡೆದ ಮೂರು ಪಂದ್ಯಗಳಲ್ಲಿ 2–1 ಮುನ್ನಡೆ ಕಾಯ್ದುಕೊಂಡಿರುವ ಭಾರತೀಯ ಆಟಗಾರರು ನಾಲ್ಕನೇ ಏಕದಿನದ ಪಂದ್ಯವನ್ನು ಜಯಿಸುವ ಮೂಲಕ ಸರಣಿಯನ್ನು ತನ್ನದಾಗಿಸಿಕೊಳ್ಳಲು ಸಜ್ಜಾಗಿದೆ. ಕೋಚ್ ರಾಹುಲ್ ದ್ರಾವಿಡ್ ಸಮ್ಮುಖದಲ್ಲಿ ಬುಧವಾರ ಬೆಳಿಗ್ಗೆ ಆಟಗಾರರು ಒಂದೂವರೆ ತಾಸು ಕಠಿಣ ಅಭ್ಯಾಸ ನಡೆಸಿದರು.
ಮೊದಲ ಎರಡು ಪಂದ್ಯದಲ್ಲಿ ಸೋತಿದ್ದ ಸಿಂಹಳೀಯರು ಮೂರನೇ ಏಕದಿನ ಪಂದ್ಯದಲ್ಲಿ ಗೆಲುವು ಸಾಧಿಸಿದ್ದು, ಆತ್ಮವಿಶ್ವಾಸದಿಂದ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಆಶಾನ್ ಪ್ರಿಯಾಂಜನ್ ನಾಯಕತ್ವದ ತಂಡವು ಸರಣಿಯನ್ನು ಕೊನೆಯ ವರೆಗೂ ಜೀವಂತವಾಗಿಟ್ಟುಕೊಳ್ಳಲು ತಂತ್ರರೂಪಿಸಿದೆ. ಲಂಕನ್ನರು ಅಭ್ಯಾಸಕ್ಕಾಗಿ ಬುಧವಾರ ಮಧ್ಯಾಹ್ನ ಕ್ರೀಡಾಂಗಣಕ್ಕೆ ಬಂದರಾದರೂ ಮಳೆಯಿಂದ ಸಾಧ್ಯವಾಗಲಿಲ್ಲ.
ಇದೇ ಕ್ರೀಡಾಂಗಣದಲ್ಲಿ ಕಳೆದ ವಾರ ನಡೆದ ನಾಲ್ಕು ದಿನಗಳ ‘ಟೆಸ್ಟ್’ ಪಂದ್ಯದಲ್ಲಿ ಗೆಲುವು ಸಾಧಿಸಿದ್ದ ಇಶಾನ್ ಕಿಶಾನ್ ನಾಯಕತ್ವದ ಭಾರತ ತಂಡ ಈ ಪಂದ್ಯವನ್ನು ಜಯಿಸುವ ಮೂಲಕ ಸರಣಿಯನ್ನು ತನ್ನದಾಗಿಸಿಕೊಳ್ಳಲು ಅಣಿಯಾಗಿದೆ.
ಚಂಡಮಾರುತದಿಂದಾಗಿ ಆಗಾಗ ಮಳೆಯಾಗುತ್ತಿರುವುದು ಪಂದ್ಯದ ಮೇಲೆ ಕಾರ್ಮೊಡ ಕವಿದಿದೆ. ಮಳೆ ಬಿಡುವು ನೀಡಿದರೆ ಪಂದ್ಯ ರೋಚಕ ಘಟ್ಟ ತಲುಪುವ ಸಾಧ್ಯತೆ ಇದೆ.
ಪಂದ್ಯದ ಸಮಯ: ಬೆಳಿಗ್ಗೆ 9ಕ್ಕೆ ಆರಂಭ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.