ಅಹಮದಾಬಾದ್: ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದಿರುವ ಭಾರತ ತಂಡ ಬೌಲಿಂಗ್ ಆಯ್ದುಕೊಂಡಿದೆ. ಇದು ಭಾರತ ಕ್ರಿಕೆಟ್ ತಂಡ ಅಂತರರಾಷ್ಟ್ರೀಯ ಮಟ್ಟದಲ್ಲಿ ಆಡುತ್ತಿರುವ 1,000ನೇ ಪಂದ್ಯವಾಗಿದ್ದು,ಮೊಟೇರಾದ ನರೇಂದ್ರ ಮೋದಿ ಕ್ರಿಕೆಟ್ ಅಂಗಳ ಈ ಪಂದ್ಯಕ್ಕೆ ವೇದಿಕೆಯಾಗಿದೆ.
ಈ ಪಂದ್ಯದಲ್ಲಿ ಕಣಕ್ಕಿಳಿಯುವುದರೊಂದಿಗೆ ಭಾರತ ತಂಡವು 1,000 ಏಕದಿನ ಪಂದ್ಯಗಳನ್ನಾಡಿದ ವಿಶ್ವದ ಮೊದಲ ತಂಡ ಎನಿಸಲಿದೆ.958 ಪಂದ್ಯಗಳನ್ನು ಆಡಿರುವ ಆಸ್ಟ್ರೇಲಿಯಾ ಮತ್ತು 936 ಸೆಣಸಾಟ ನಡೆಸಿರುವಪಾಕಿಸ್ತಾನ ಹೆಚ್ಚು ಏಕದಿನ ಪಂದ್ಯಗಳನ್ನಾಡಿದ ರಾಷ್ಟ್ರಗಳ ಪಟ್ಟಿಯಲ್ಲಿ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ.
ಹೀಗಾಗಿ ಈ ಪಂದ್ಯವು ಟೀಂ ಇಂಡಿಯಾ ಪಾಲಿಗೆ ಮಹತ್ವದ್ದೆನಿಸಿದೆ.
ಉಪನಾಯಕ ಹಾಗೂ ಆರಂಭಿಕ ಆಟಗಾರ ಕೆ.ಎಲ್. ರಾಹುಲ್ ಈ ಪಂದ್ಯದಿಂದ ಹೊರಗುಳಿದಿದ್ದು, ನಾಯಕ ರೋಹಿತ್ ಶರ್ಮಾ ಜೊತೆಗೆ ಇಶಾನ್ ಕಿಶನ್ ಇನಿಂಗ್ಸ್ ಆರಂಭಿಸಲಿದ್ದಾರೆ. ಮಾಜಿ ನಾಯಕ ವಿರಾಟ್ ಕೊಹ್ಲಿ ಎಂದಿನಂತೆ ತಮ್ಮ ಮೂರನೇ ಕ್ರಮಾಂಕದಲ್ಲಿ ಆಡಲಿದ್ದು, ರಿಷಭ್ ಪಂತ್, ಸೂರ್ಯಕುಮಾರ್ ಯಾದವ್ ಮತ್ತು ದೀಪಕ್ ಹೂಡಾ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಲಿದ್ದಾರೆ.
ಅನುಭವಿ ವೇಗಿಗಳಾದ ಜಸ್‌ಪ್ರೀತ್ ಬೂಮ್ರಾ ಮತ್ತು ಮೊಹಮ್ಮದ್ ಶಮಿ ಅನುಪಸ್ಥಿತಿಯಲ್ಲಿ ಮೊಹಮ್ಮದ್ ಸಿರಾಜ್ ವೇಗದ ಬೌಲಿಂಗ್ ವಿಭಾಗ ಮುನ್ನಡೆಸಲಿದ್ದಾರೆ. ಅವರಿಗೆಕನ್ನಡಿಗ ಪ್ರಸಿದ್ದ ಕೃಷ್ಣ ಮತ್ತು ಶಾರ್ದೂಲ್ ಠಾಕೂರ್ ಬೆಂಬಲ ನೀಡಲಿದ್ದಾರೆ. ಉಳಿದಂತೆ ವಾಷಿಂಗ್ಟನ್ ಸುಂದರ್ ಮತ್ತು ಯಜುವೇಂದ್ರ ಚಾಹಲ್‌ಸ್ಪಿನ್ ಬಲೆ ಹೆಣೆಯಲಿದ್ದಾರೆ.
ಇದಕ್ಕೆ ತಕ್ಕಂತೆ ಪ್ರವಾಸಿ ಪಡೆಯೂ ಸಜ್ಜಾಗಿದೆ. ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ನಡೆದ ಟಿ20 ಸರಣಿಯಲ್ಲಿ ಅಮೋಘ ಜಯ ಸಾಧಿಸಿರುವ ಕೀರನ್ ಪೊಲಾರ್ಡ್ ಬಳಗ, ಭಾರತದಲ್ಲಿಯೂ ಅದೇ ಲಯವನ್ನು ಮುಂದುವರಿಸುವ ಛಲದಲ್ಲಿದೆ.
ಬ್ರೆಂಡನ್ ಕಿಂಗ್ ಮತ್ತುಶಾಯ್ ಹೋಪ್ಇನಿಂಗ್ಸ್ ಆರಂಭಿಸುವ ಹೊಣೆ ಹೊತ್ತಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಡರೆನ್ ಬ್ರಾವೊ ಆಡಿದರೆ,ಶಾಮ್ರಾ ಬ್ರೂಕ್ಸ್, ನಿಕೊಲಸ್ ಪೂರನ್ ಹಾಗೂ ನಾಯಕಕೀರನ್ ಪೊಲಾರ್ಡ್ ಮಧ್ಯಮ ಕ್ರಮಾಂಕಕ್ಕೆ ಬಲ ತುಂಬಲಿದ್ದಾರೆ. ಜೇಸನ್ ಹೋಲ್ಡರ್, ಫ್ಯಾಬಿಯನ್ ಅಲೆನ್, ಅಲ್ಜರಿ ಜೋಸೆಫ್, ಅಕೀಲ್ ಹುಸೇನ್ ಮತ್ತು ಕೆಮರ್ ರೋಚ್ ವಿಂಡೀಸ್ ಪಾಳಯದ ಬೌಲಿಂಗ್ ಅಸ್ತ್ರಗಳು.
ಸದ್ಯ ಪಂದ್ಯ ಆರಂಭವಾಗಿದ್ದು,8 ಓವರ್‌ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು 13ರನ್ ಗಳಿಸಿದೆ.8ರನ್ ಗಳಿಸಿದ್ದ ಹೋಪ್ ಅವರನ್ನು ಸಿರಾಜ್ ಪೆವಿಲಿಯನ್‌ಗೆ ಅಟ್ಟಿದ್ದಾರೆ. ಸದ್ಯ ಕಿಂಗ್ (8) ಜೊತೆಗೆ ಡರೆನ್ ಬ್ರಾವೊ (11)ಕ್ರೀಸ್‌ನಲ್ಲಿದ್ದಾರೆ.
ಬಲಾಬಲ
ಉಭಯ ತಂಡಗಳು ಈ ಮಾದರಿಯಲ್ಲಿ ಇದುವರೆಗೆ 133 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಅದರಲ್ಲಿ ಭಾರತ 64 ರಲ್ಲಿ ಮತ್ತು ವಿಂಡೀಸ್ 63ರಲ್ಲಿ ಜಯಿಸಿವೆ. ಎರಡು ಪಂದ್ಯ ಟೈ ಆಗಿವೆ. ನಾಲ್ಕರಲ್ಲಿ ಫಲಿತಾಂಶ ಹೊರಹೊಮ್ಮಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.