ಪೋರ್ಟ್ ಆಫ್ ಸ್ಪೇನ್: ಕನ್ನಡಿಗರಾದ ಆಫ್‌ಸ್ಪಿನ್ನರ್ ಕೃಷ್ಣಪ್ಪ ಗೌತಮ್ ಅವರ ಬೌಲಿಂಗ್ ಮತ್ತು ಮಯಂಕ್ ಅಗರವಾಲ್ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಭಾರತ ‘ಎ’ ತಂಡವು ವೆಸ್ಟ್ ಇಂಡೀಸ್ ಎ ಎದುರಿನ ‘ಟೆಸ್ಟ್’ನಲ್ಲಿ ಗೆಲುವಿನತ್ತ ಸಾಗಿದೆ.
ಪಂದ್ಯದ ಮೂರನೇ ದಿನವಾದ ಶನಿವಾರ ಗೌತಮ್ (17ಕ್ಕೆ5) ಅವರ ಮೊನಚಾದ ದಾಳಿಗೆ ತತ್ತರಿಸಿದ ವಿಂಡೀಸ್ ಬಳಗವು ಎರಡನೇ ಇನಿಂಗ್ಸ್‌ನಲ್ಲಿ 149 ರನ್ ಗಳಿಸಿ ಆಲೌಟ್ ಆಯಿತು.ಮೊದಲ ಇನಿಂಗ್ಸ್‌ನಲ್ಲಿ ಆತಿಥೇಯ ತಂಡವು 128 ರನ್‌ಗಳ ಮುನ್ನಡೆ ಗಳಿಸಿತ್ತು. ಆದ್ದರಿಂದ ಭಾರತ ‘ಎ’ ತಂಡವು ಜಯಿಸಲು 278 ರನ್‌ಗಳ ಗುರಿಯನ್ನು ಮುಟ್ಟಬೇಕಿದೆ. ಈ ಹಾದಿಯಲ್ಲಿ ಭಾರತ ಎ ತಂಡವು ದಿನದಾಟದ ಕೊನೆಗೆ 50 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 185 ರನ್ ಗಳಿಸಿದೆ. ಜಯಕ್ಕಾಗಿ ಇನ್ನೂ 93 ರನ್ ಗಳಿಸಬೇಕಿದೆ.
ಪ್ರಿಯಾಂಕ್ ಪಾಂಚಾಲ್ (68; 121ಎಸೆತ, 9ಬೌಂಡರಿ, 1ಸಿಕ್ಸರ್) ಮತ್ತು ಮಯಂಕ್ ಅಗರವಾಲ್ (81; 134ಎಸೆತ, 10ಬೌಂಡರಿ) ಅವರಿಬ್ಬರು ಮೊದಲ ವಿಕೆಟ್ ಜೊತೆಯಾಟದಲ್ಲಿ 150 ರನ್‌ಗಳನ್ನು ಸೇರಿಸಿದರು. ಇದರಿಂದಾಗಿ ತಂಡದಲ್ಲಿ ಜಯದ ಭರವಸೆ ಮೂಡಿದೆ. ಅಭಿಮನ್ಯು ಈಶ್ವರನ್ (ಬ್ಯಾಟಿಂಗ್ 16) ಮತ್ತು ಅನ್ಮೋಲ್ ಪ್ರೀತ್ ಸಿಂಗ್ ಬ್ಯಾಟಿಂಗ್ 4) ಕ್ರೀಸ್‌ನಲ್ಲಿದ್ದಾರೆ. ನಾಯಕ ಹನುಮವಿಹಾರಿ ಕೇವಲ ಒಂದು ರನ್ ಗಳಿಸಿ ಔಟಾದರು. ವೆಸ್ಟ್ ಇಂಡೀಸ್ ಎದುರಿನ ಟೆಸ್ಟ್ ಸರಣಿಗೆ ಆಯ್ಕೆಯಾಗಿರುವ ಮಯಂಕ್ ಮತ್ತೊಮ್ಮೆ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು. ಸಿಕ್ಕ ಅವಕಾಶದಲ್ಲಿ ಉತ್ತಮವಾಗಿ ಆಡಿದರು. ಆದರೆ, ಶತಕದ ಗಡಿ ಮುಟ್ಟುವಲ್ಲಿ ಅವರು ಸಫಲರಾಗಲಿಲ್ಲ.
ಬೆಳಿಗ್ಗೆ ಉತ್ತಮ ಬೌಲಿಂಗ್ ಮಾಡಿದ ಗೌತಮ್ ಗಮನ ಸೆಳೆದರು. ಮಧ್ಯಮವೇಗಿ ಮೊಹಮ್ಮದ್ ಸಿರಾಜ್ ಮತ್ತು ಸಂದೀಪ್ ವಾರಿಯರ್ ಅವರು ತಲಾ ಒಂದು ವಿಕೆಟ್ ಪಡೆದು ವಿಂಡಿಸ್ ಎ ಬಳಗದ ಪತನಕ್ಕೆ ನಾಂದಿ ಹಾಡಿದರು. ಗೌತಮ್ ತಮ್ಮ ಸ್ಪಿನ್ ಮೋಡಿಯಿಂದ ಪ್ರಮುಖ ಐವರು ಬ್ಯಾಟ್ಸ್‌ಮನ್‌ಗಳ ವಿಕೆಟ್ ಗಳಿಸಿ ತಂಡಕ್ಕೆ ಬೇಗನೆ ಎರಡನೇ ಇನಿಂಗ್ಸ್‌ನ ಬ್ಯಾಟಿಂಗ್ ಲಭಿಸುವಂತೆ ನೋಡಿಕೊಂಡರು.
ವಿಂಡೀಸ್ ಎ ತಂಡದ ಸುನಿಲ್ ಆ್ಯಂಬ್ರಿಸ್ (71; 93ಎ, 10ಬೌಂ) ಮತ್ತು ಜರ್ಮೈನ್ ಬ್ಲ್ಯಾಕ್‌ವುಡ್ (31 ರನ್) ಅವರಿಬ್ಬರನ್ನು ಬಿಟ್ಟರೆ ಉಳಿದವರು ರನ್ ಗಳಿಕೆಗೆ ಒತ್ತು ನೀಡಲಿಲ್ಲ.
ಸಂಕ್ಷಿಪ್ತ ಸ್ಕೋರು: ವೆಸ್ಟ್ ಇಂಡೀಸ್ ‘ಎ’: 318 ಮತ್ತು 149 (ಸುನಿಲ್ ಆ್ಯಂಬ್ರಿಸ್ 71, ಬ್ಲ್ಯಾಕ್‌ವುಡ್ 31, ರೆಮೆರಿಯೊ ಶೇಫರ್ಡ್ 16, ಸಂದೀಪ್ ವಾರಿಯರ್ 43ಕ್ಕೆ3, ಕೃಷ್ಣಪ್ಪ ಗೌತಮ್ 17ಕ್ಕೆ5, ಮೊಹಮ್ಮದ್ ಸಿರಾಜ್ 55ಕ್ಕೆ1, ಶಿವಂ ದುಬೆ 18ಕ್ಕೆ1), ಭಾರತ ’ಎ’: 190 ಮತ್ತು 50 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 185 (ಪ್ರಿಯಾಂಕ್ ಪಾಂಚಾಲ್ 68, ಮಯಂಕ್ ಅಗರವಾಲ್ 81, ಅಭಿಮನ್ಯು ಈಶ್ವರನ್ ಬ್ಯಾಟಿಂಗ್ 16, ಅನ್ಮೋಲ್‌ಪ್ರೀತ್ ಸಿಂಗ್ ಬ್ಯಾಟಿಂಗ್ 4, ಶೆಮರ್ ಹೋಲ್ಡರ್ 34ಕ್ಕೆ2, ರೇಮನ್ ರೀಫರ್ 44ಕ್ಕೆ1)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.