ಅಹಮದಾಬಾದ್: ಬೆಂಗಳೂರು ಹುಡುಗ ಪ್ರಸಿದ್ಧ ಕೃಷ್ಣನ ಶಿಸ್ತಿನ ಬೌಲಿಂಗ್ ದಾಳಿಯ ಮುಂದೆ ವೆಸ್ಟ್ ಇಂಡೀಸ್ ತಂಡದ ಬ್ಯಾಟಿಂಗ್ ಪಡೆ ದೂಳೀಪಟವಾಯಿತು.
ಮೋಟೆರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ವಿಂಡೀಸ್ ಎದುರಿನ ಎರಡನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ 44 ರನ್‌ಗಳಿಂದ ಜಯಿಸಿದ ಭಾರತ ತಂಡವು ಮೂರು ಪಂದ್ಯಗಳ ಸರಣಿಯನ್ನು 2–0ಯಿಂದ ಕೈವಶ ಮಾಡಿಕೊಂಡಿತು.
ಟಾಸ್ ಗೆದ್ದ ಪ್ರವಾಸಿ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್ ಕ್ರಮಾಂಕದಲ್ಲಿ ಕೆಲವು ನೂತನ ಪ್ರಯೋಗಗಳನ್ನು ಮಾಡಿದ ಆತಿಥೇಯರು ಆರಂಭದಲ್ಲಿ ಪೆಟ್ಟು ತಿಂದರು. ಆದರೆ, ಕೆ.ಎಲ್. ರಾಹುಲ್ (49; 48ಎ) ಮತ್ತು ಸೂರ್ಯಕುಮಾರ್ ಯಾದವ್ (64; 83ಎ) ಅವರ ಜವಾಬ್ದಾರಿಯುತ ಬ್ಯಾಟಿಂಗ್‌ನಿಂದಾಗಿ ತಂಡವು 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 237 ರನ್ ಗಳಿಸಿತು.
ಅದಕ್ಕುತ್ತರವಾಗಿ 46 ಓವರ್‌ಗಳಲ್ಲಿ 193 ರನ್ ಗಳಿಸಲಷ್ಟೇ ವಿಂಡೀಸ್‌ಗೆ ಸಾಧ್ಯವಾಯಿತು. ಒಂಬತ್ತು ಓವರ್ ಬೌಲಿಂಗ್ ಮಾಡಿದ ಬಲಗೈ ಮಧ್ಯಮವೇಗಿ ಪ್ರಸಿದ್ಧ ನೀಡಿದ್ದು ಕೇವಲ 12 ರನ್‌ಗಳನ್ನು ಮಾತ್ರ. ಮೂರು ಓವರ್‌ಗಳನ್ನು ಮೇಡನ್ ಮಾಡಿದ ಅವರು ನಾಲ್ಕು ವಿಕೆಟ್‌ಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡರು. ಇದು ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪ್ರಸಿದ್ಧಕೃಷ್ಣ ಅವರ ಶ್ರೇಷ್ಠ ಸಾಧನೆಯಾಗಿದೆ.
ವೆಸ್ಟ್ ಇಂಡೀಸ್ ತಂಡದ ಆರಂಭಿಕ ಜೋಡಿ ಶಾಯ್ ಹೋಪ್ ಮತ್ತು ಬ್ರೆಂಡನ್ ಕಿಂಗ್ ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡಿದರು. ರನ್ ಗಳಿಕೆಗೆ ಹೆಚ್ಚು ಅವಸರ ಮಾಡಲಿಲ್ಲ. ಏಳು ಓವರ್‌ಗಳು ಮುಗಿಯುವವರೆಗೂ ಭಾರತಕ್ಕೆ ವಿಕೆಟ್ ಒಲಿದಿರಲಿಲ್ಲ. ಸಿರಾಜ್ ಮತ್ತು ಶಾರ್ದೂಲ್ ಅವರ ಪ್ರಯತ್ನಗಳಿಗೆ ಫಲ ಸಿಗಲಿಲ್ಲ.
ಎಂಟನೇ ಓವರ್‌ನಲ್ಲಿ ಪ್ರಸಿದ್ಧ ಕೃಷ್ಣ ಎಸೆತವನ್ನು ಆಡುವ ಭರದಲ್ಲಿ ಕಿಂಗ್ ಆಘಾತ ಅನುಭವಿಸಿದರು. ಅವರ ಬ್ಯಾಟ್ ಅಂಚು ಸವರಿದ ಚೆಂಡು ವಿಕೆಟ್‌ಕೀಪರ್ ಪಂತ್ ಕೈಸೇರಿತು. 10ನೇ ಓವರ್‌ನಲ್ಲಿ ಪ್ರಸಿದ್ಧ ಇದೇ ಮಾದರಿಯಲ್ಲಿ ಡರೆನ್ ಬ್ರಾವೊ ವಿಕೆಟ್ ಕೂಡ ಗಳಿಸಿದರು. ತುಸು ಪ್ರತಿರೋಧ ಒಡ್ಡಿದ ಶಾಯ್ ಹೋಪ್ ಮತ್ತು ಶಾಮ್ರಾ ಬ್ರೂಕ್ಸ್ (44) ಜೊತೆಯಾಟವನ್ನು ಚಾಹಲ್ ಮುರಿದರು. 17ನೇ ಓವರ್ ನಲ್ಲಿ ಹೋಪ್ ವಿಕೆಟ್ ಪಡೆದ ಸ್ಪಿನ್ನರ್ ಚಾಹಲ್ ಮಿಂಚಿದರು.
ಬ್ರೂಕ್ಸ್ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದರು. ಅವರಿಗೆ ಜೊತೆ ನೀಡಲು ಸಿದ್ಧರಾಗಿದ್ದ ನಿಕೋಲಸ್ ಪೂರನ್ (9) ವಿಕೆಟ್ ಕಬಳಿಸಿದ ಪ್ರಸಿದ್ಧ ದೊಡ್ಡ ಪೆಟ್ಟು ಕೊಟ್ಟರು. ಠಾಕೂರ್, ಸಿರಾಜ್ ಮತ್ತು ವಾಷಿಂಗ್ಟನ್ ಕೂಡ ಉತ್ತಮ ಬೌಲಿಂಗ್ ಮಾಡಿ ತಂಡವನ್ನು ಜಯದತ್ತ ಮುನ್ನಡೆಸಿದರು.
ಬ್ಯಾಟಿಂಗ್ ಕ್ರಮಾಂಕ ಪ್ರಯೋಗ: ಭಾರತ ತಂಡದ ಆರಂಭಿಕ ರೋಹಿತ್ ಶರ್ಮಾ ಅವರೊಂದಿಗೆ ಈ ಪಂದ್ಯದಲ್ಲಿ ವಿಕೆಟ್‌ಕೀಪರ್ ರಿಷಭ್ ಪಂತ್ ಇನಿಂಗ್ಸ್ ಆರಂಭಿಸಿದರು. ಆದರೆ ದೊಡ್ಡ ಇನಿಂಗ್ಸ್ ಕಟ್ಟಲು ಸಾಧ್ಯವಾಗಲಿಲ್ಲ. ಮೂರನೇ ಓವರ್‌ನಲ್ಲಿಯೇ ರೋಹಿತ್ ಔಟಾದರು. ಪಂತ್ ಮತ್ತು ವಿರಾಟ್ ತಲಾ 18 ರನ್ ಗಳಿಸಿ ಔಟಾದರು.
ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಉಪನಾಯಕ ಕೆ.ಎಲ್. ರಾಹುಲ್ ಮತ್ತು ಸೂರ್ಯಕುಮಾರ್ ಯಾದವ್ ನಾಲ್ಕನೇ ವಿಕೆಟ್ ಜೊತೆ ಯಾಟದಲ್ಲಿ 91 ರನ್‌ಗಳನ್ನು ಸೇರಿ ಸಿದರು. ಇದರಿಂದಾಗಿ ದೊಡ್ಡ ಮೊತ್ತ ಗಳಿಸುವ ಭರವಸೆ ಮೂಡಿತು. ಆದರೆ, 30ನೇ ಓವರ್‌ನಲ್ಲಿ ಇಬ್ಬರೂ ಬ್ಯಾಟರ್‌ಗಳ ಹೊಂದಾಣಿಕೆಯ ಕೊರತೆಯಲ್ಲಿ ರಾಹುಲ್ ರನ್‌ಔಟ್ ಆದರು. ಜೊತೆಯಾಟ ಮುರಿದುಬಿತ್ತು. ವಾಷಿಂಗ್ಟನ್ ಸುಂದರ್ ಮತ್ತು ದೀಪಕ್ ಹೂಡಾ ಅಲ್ಪ ಕಾಣಿಕೆ ನೀಡಿದರು. ಇದರಿಂದಾಗಿ ತಂಡವು ಇನ್ನೂರರ ಗಡಿ ದಾಟಲು ಸಾಧ್ಯವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.