ಹೈದರಾಬಾದ್: ಯುವ ಕ್ರಿಕೆಟಿಗ ವಿಕೆಟ್‌ಕೀಪರ್ ರಿಷಭ್ ಪಂತ್ ಸಾಮರ್ಥ್ಯದ ಮೇಲೆ ತಂಡವು ಭರವಸೆ ಇಟ್ಟಿದೆ. ತಮ್ಮ ಸಾಮರ್ಥ್ಯ ಸಾಬೀತು ಮಾಡಲು ಪಂತ್‌ಗೆ ಬೆಂಬಲ ನೀಡಬೇಕಿರುವುದು ನಮ್ಮ ಕರ್ತವ್ಯ ಎಂದು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಇದನ್ನೂ ಓದಿ:ಟ್ವಿಂಟಿ–20 ಕ್ರಿಕೆಟ್: ರಿಷಭ್ ಪಂತ್ ಮೇಲೆ ಒತ್ತಡ
ನಿಗದಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಹಿರಿಯ ಆಟಗಾರ ಮಹೇಂದ್ರ ಸಿಂಗ್ ದೋನಿ ಬದಲು ಸ್ಥಾನ ಗಿಟ್ಟಿಸಿಕೊಂಡಿರುವ ಪಂತ್, ವಿಕೆಟ್ ಕೀಪಿಂಗ್ ಹಾಗೂ ಬ್ಯಾಟಿಂಗ್‌ಗೆ ಸಂಬಂಧಿಸಿದಂತೆ ಸಾಕಷ್ಟು ಬಾರಿ ಟೀಕೆಗೊಳಗಾಗಿದ್ದಾರೆ.ಇತ್ತೀಚೆಗೆ ಮುಕ್ತಾಯವಾದ ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ತೀರ್ಪು ಮರುಪರಿಶೀಲನೆ ಪದ್ದತಿ (ಡಿಆರ್‌ಎಸ್) ಮನವಿ ಸಂಬಂಧ ಸಮರ್ಥ ನಿರ್ಧಾರ ಕೈಗೊಳ್ಳುವಲ್ಲಿ ವಿಫಲವಾದ ಕಾರಣಕ್ಕೆ ಹಾಗೂನಿಧಾನಗತಿ ಬ್ಯಾಟಿಂಗ್ ಮಾಡಿದ್ದಕ್ಕೆ ಧೋನಿ ಅಭಿಮಾನಿಗಳು ಟೀಕಾಸ್ತ್ರ ಪ್ರಯೋಗಿಸಿದ್ದರು.
ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿರಿಷಭ್ ಪಂತ್ ಕುರಿತುಮಾತನಾಡಿದ ಕೊಹ್ಲಿ,‘ಖಂಡಿತವಾಗಿಯೂ ನಾವು ರಿಷಭ್ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟಿದ್ದೇವೆ. ನೀವು ಹೇಳುವ ಹಾಗೆ, ಚೆನ್ನಾಗಿ ಆಡುವುದು ಆಟಗಾರನ ಕರ್ತವ್ಯ. ಆದರೆ, ಆತನಿಗೆ ಸಾಮರ್ಥ್ಯ ಸಾಬೀತು ಮಾಡಲು ಸೂಕ್ತ ಅವಕಾಶ ಮತ್ತು ಬೆಂಬಲ ನೀಡುವುದು ನಮ್ಮ ಕರ್ತವ್ಯ. ಒಂದು ವೇಳೆ ನೀವು ಬೆಂಬಲ ನೀಡದಿದ್ದರೆ ಆತನನ್ನು ಅವಮಾನಿಸಿದಂತೆ’ ಎಂದಿದ್ದಾರೆ.
‘ರಿಷಭ್ ಪಂತ್‌ರನ್ನು ಅವರ ಪಾಡಿಗೆ ಬಿಟ್ಟುಬಿಡಿ ಎಂದು ಇತ್ತೀಚೆಗೆ ರೋಹಿತ್ ಶರ್ಮಾ ಹೇಳಿದ್ದರು. ಪಂತ್ ಪಂದ್ಯ ಗೆದ್ದುಕೊಡಬಲ್ಲ ಆಟಗಾರ. ಒಂದು ಸಾರಿ ಆತ ಉತ್ತಮ ಆಟಕ್ಕೆ ಕುದುರಿಕೊಂಡರೆ, ನೀವು ಆತನಿಂತ ಬೇರೆಯದೇ ರೀತಿಯ ಆಟವನ್ನು ನೋಡಬಹುದು’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಡಿಸೆಂಬರ್ 6ರಿಂದ ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವೆ ಮೂರು ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ. ಮೊದಲ ಪಂದ್ಯ ಹೈದರಾಬಾದ್‌ನಲ್ಲಿ ನಡೆಯಲಿದ್ದು, ಆಟಗಾರರು ಅಭ್ಯಾಸ ನಿರತರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.