ADVERTISEMENT

IND vs ZIM 3rd T20I Highlights | 3ನೇ ಪಂದ್ಯದಲ್ಲೂ ಭಾರತ ಮೇಲುಗೈ; 23 ರನ್ ಜಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಜುಲೈ 2024, 10:44 IST
Last Updated 10 ಜುಲೈ 2024, 10:44 IST
<div class="paragraphs"><p>ಋತುರಾಜ್ ಗಾಯಕವಾಡ್, ಶುಭಮನ್ ಗಿಲ್</p></div>

ಋತುರಾಜ್ ಗಾಯಕವಾಡ್, ಶುಭಮನ್ ಗಿಲ್

   

(ಚಿತ್ರ ಕೃಪೆ: ಬಿಸಿಸಿಐ)

ಹರಾರೆ: ಆತಿಥೇಯ ಜಿಂಬಾಬ್ವೆ ವಿರುದ್ಧ ನಡೆದ ಮೂರನೇ ಟ್ವೆಂಟಿ-20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಟೀಮ್ ಇಂಡಿಯಾ 23 ರನ್ ಅಂತರದ ಗೆಲುವು ದಾಖಲಿಸಿದೆ.

ADVERTISEMENT

ಆ ಮೂಲಕ ಐದು ಪಂದ್ಯಗಳ ಟಿ20 ಸರಣಿಯಲ್ಲಿ 2-1ರ ಅಂತರದ ಮುನ್ನಡೆ ಗಳಿಸಿದೆ. ಮೊದಲ ಪಂದ್ಯದಲ್ಲಿ ಭಾರತ ಸೋಲು ಕಂಡಿತ್ತು.

ಹರಾರೆಯ ಸ್ಪೋಟ್ಸ್ ಕ್ಲಬ್ ಮೈದಾನದಲ್ಲಿ ಇಂದು ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಭಾರತ, ನಾಯಕ ಶುಭಮನ್ ಗಿಲ್ ಅರ್ಧಶತಕ (66) ಹಾಗೂ ಋತುರಾಜ್ ಗಾಯಕವಾಡ್ ಆಕರ್ಷಕ ಬ್ಯಾಟಿಂಗ್ ನೆರವಿನಿಂದ (49) ನಿಗದಿತ 20 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿತು.

ಈ ಗುರಿ ಬೆನ್ನಟ್ಟಿದ ಜಿಂಬಾಬ್ವೆ ಯಾವ ಹಂತದಲ್ಲಿಯೂ ಪೈಪೋಟಿ ಒಡ್ಡಲಿಲ್ಲ. ಅಲ್ಲದೆ 20 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 159 ರನ್ ಗಳಿಸಲಷ್ಟೇ ಸಾಧ್ಯವಾಯಿತು.

ಜಿಂಬಾಬ್ವೆಯ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಮಗದೊಮ್ಮೆ ವೈಫಲ್ಯವನ್ನು ಅನುಭವಿಸಿದರು. 39 ರನ್ ಗಳಿಸುವಷ್ಟರಲ್ಲಿ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಈ ನಡುವೆ ದಿಟ್ಟ ಹೋರಾಟ ತೋರಿದ ಡಿಯಾನ್ ಮೆಯರ್ಸ್ ಚೊಚ್ಚಲ ಅರ್ಧಶತಕದ ಸಾಧನೆ ಮಾಡಿದರು. 49 ಎಸೆತಗಳಲ್ಲಿ 65 ರನ್ ಗಳಿಸಿ (7 ಬೌಂಡರಿ, 1 ಸಿಕ್ಸರ್) ಔಟಾಗದೆ ಉಳಿದರು. ವಿಕೆಟ್ ಕೀಪರ್ ಬ್ಯಾಟರ್ ಕ್ಲೈವ್ ಮೆದಾಂದೆ 37 ರನ್ ಗಳಿಸಿದರು.

ಭಾರತದ ಪರ ವಾಷಿಂಗ್ಟನ್ ಸುಂದರ್ 15 ರನ್ ತೆತ್ತು ಮೂರು ವಿಕೆಟ್ ಕಬಳಿಸಿ ಮಿಂಚಿದರು. ಖಲೀಲ್ ಅಹ್ಮದ್ 15ಕ್ಕೆ ಒಂದು ವಿಕೆಟ್ ಹಾಗೂ ಆವೇಶ್ ಖಾನ್ 39ಕ್ಕೆ ಎರಡು ವಿಕೆಟ್ ಗಳಿಸಿದರು.

ಗಿಲ್, ಗಾಯಕವಾಡ್ ಉತ್ತಮ ಆಟ...

ಈ ಮೊದಲು ನಾಯಕ ಶುಭಮನ್ ಗಿಲ್ ಅರ್ಧಶತಕ (66) ಹಾಗೂ ಋತುರಾಜ್ ಗಾಯಕವಾಡ್ ಆಕರ್ಷಕ ಬ್ಯಾಟಿಂಗ್ ನೆರವಿನಿಂದ (49) ಭಾರತ ನಿಗದಿತ 20 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿತು.

ಟಾಸ್ ಗೆದ್ದ ನಾಯಕ ಗಿಲ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಅಲ್ಲದೆ ಯಶಸ್ವಿ ಜೈಸ್ವಾಲ್ ಜೊತೆ ಮೊದಲ ವಿಕೆಟ್‌ಗೆ 67 ರನ್‌ ಪೇರಿಸಿದರು. ಬಿರುಸಿನ ಆಟವಾಡಿದ ಜೈಸ್ವಾಲ್ 27 ಎಸೆತಗಳಲ್ಲಿ 36 ರನ್ (4 ಬೌಂಡರಿ, 2 ಸಿಕ್ಸರ್) ಗಳಿಸಿದರು.

ಕಳೆದ ಪಂದ್ಯದಲ್ಲಿ ಆರಂಭಿಕನಾಗಿ ಕ್ರೀಸಿಗಿಳಿದು ಚೊಚ್ಚಲ ಶತಕ ಗಳಿಸಿದ್ದ ಅಭಿಷೇಕ್ ಶರ್ಮಾ, ಇಂದು ಮೂರನೇ ಕ್ರಮಾಂಕದಲ್ಲಿ ಯಶ ಕಾಣಲಿಲ್ಲ. 10 ರನ್ ಗಳಿಸಿ ಔಟ್ ಆದರು.

ಬಳಿಕ ಋತುರಾಜ್ ಗಾಯಕವಾಡ್ ಅವರೊಂದಿಗೆ ಜೊತೆಗೂಡಿದ ಗಿಲ್ ಮೂರನೇ ವಿಕೆಟ್‌ಗೆ 72 ರನ್‌ಗಳ ಅಮೂಲ್ಯ ಜೊತೆಯಾಟದಲ್ಲಿ ಭಾಗಿಯಾದರು.

ಗಿಲ್ 49 ಎಸೆತಗಳಲ್ಲಿ 66 ರನ್ (7 ಬೌಂಡರಿ, 3 ಸಿಕ್ಸರ್) ಗಳಿಸಿದರು. ಮತ್ತೊಂದೆಡೆ ಋತುರಾಜ್ ಕೇವಲ ಒಂದು ರನ್‌ನಿಂದ ಅರ್ಧಶತಕ ವಂಚಿತರಾದರು. ಅವರು 28 ಎಸೆತಗಳಲ್ಲಿ 49 ರನ್ (3 ಸಿಕ್ಸರ್, 4 ಬೌಂಡರಿ) ಗಳಿಸಿದರು.

ಕೊನೆಯಲ್ಲಿ ಸಂಜು ಸ್ಯಾಮ್ಸನ್ ಅಜೇಯ 12 ರನ್‌ಗಳ ಕಾಣಿಕೆ ನೀಡಿದರು.

ಸಂಜು, ಜೈಸ್ವಾಲ್, ದುಬೆಗೆ ಅವಕಾಶ...

ಈ ಮೊದಲು ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಶುಭಮನ್ ಗಿಲ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಇತ್ತೀಚೆಗಷ್ಟೇ ಟ್ವೆಂಟಿ-20 ವಿಶ್ವಕಪ್ ವಿಜೇತ ಭಾರತ ತಂಡದಲ್ಲಿದ್ದ ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್ ಹಾಗೂ ಶಿವಂ ದುಬೆ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಂಡಿದ್ದಾರೆ.

ಹಾಗೆಯೇ ಮುಕೇಶ್ ಕುಮಾರ್‌ಗೆ ವಿಶ್ರಾಂತಿ ನೀಡಲಾಗಿದ್ದು, ಅವರ ಸ್ಥಾನಕ್ಕೆ ಖಲೀಲ್ ಅಹ್ಮದ್ ಆಯ್ಕೆಯಾಗಿದ್ದಾರೆ.

ಇನ್ನು ಪ್ರಸಕ್ತ ಸಾಗುತ್ತಿರುವ ಸರಣಿಯಲ್ಲಷ್ಟೇ ಪದಾರ್ಪಣೆ ಮಾಡಿರುವ ರಿಯಾನ್ ಪರಾಗ್, ಸಾಯಿ ಸುದರ್ಶನ್ ಹಾಗೂ ಧ್ರುವ್ ಜುರೇಲ್ ಅವಕಾಶ ವಂಚಿತರಾಗಿದ್ದಾರೆ.

ಮೊದಲ ಪಂದ್ಯದಲ್ಲಿ ಸೋಲು ಕಂಡಿದ್ದ ಭಾರತ ತಂಡವು ಎರಡನೇ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಅಮೋಘ ಶತಕದ ಬಲದಿಂದ ಗೆಲುವು ದಾಖಲಿಸಿತ್ತು. ಆ ಮೂಲಕ ಐದು ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ 1-1ರ ಅಂತರದ ಸಮಬಲ ಸಾಧಿಸಿತ್ತು.

ಭಾರತದ ಆಡುವ ಹನ್ನೊಂದರ ಬಳಗ ಇಂತಿದೆ:

ಶುಭಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ಅಭಿಷೇಕ್ ಶರ್ಮಾ, ಋತುರಾಜ್ ಗಾಯಕವಾಡ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ರಿಂಕು ಸಿಂಗ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯಿ, ಆವೇಶ್ ಖಾನ್ ಮತ್ತು ಖಲೀಲ್ ಅಹ್ಮದ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.