ಹರಾರೆ: ಯಶಸ್ವಿ ಜೈಸ್ವಾಲ್ ಮತ್ತು ಶುಭಮನ್ ಗಿಲ್ ಅವರ ಅಜೇಯ ಜೊತೆಯಾಟದಿಂದಾಗಿ ಭಾರತ ತಂಡವು ಜಿಂಬಾಬ್ವೆ ಎದುರಿನ ನಾಲ್ಕನೇ ಟಿ20 ಪಂದ್ಯವನ್ನು ಸುಲಭವಾಗಿ ಜಯಿಸಿತು.
ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ 10 ವಿಕೆಟ್‌ಗಳಿಂದ ಗೆದ್ದ ಭಾರತ ತಂಡವು ಐದು ಪಂದ್ಯಗಳ ಸರಣಿಯನ್ನು 3–1ರಿಂದ ಕೈವಶ ಮಾಡಿಕೊಂಡಿತು.
ಟಾಸ್ ಗೆದ್ದ ಭಾರತ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಎಡಗೈ ವೇಗಿ ಖಲೀಲ್ ಅಹಮದ್ (32ಕ್ಕೆ2) ಮತ್ತು ಬೌಲರ್‌ಗಳ ಮೊನಚಾದ ದಾಳಿಯ ಮುಂದೆ ಜಿಂಬಾಬ್ವೆ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 152 ರನ್ ಗಳಿಸಿತು. ಆತಿಥೇಯರ ಇನಿಂಗ್ಸ್‌ಗೆ ಮದಾವೆರೆ (25; 24ಎ) ಮತ್ತು ಮರುಮನಿ (32; 31ಎ) ಅವರಿಬ್ಬರೂ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್ ಜೊತೆಯಾಟದಲ್ಲಿ 63 ರನ್ ಸೇರಿಸಿದರು.
ಆಧರೆ 9ನೇ ಓವರ್‌ನಲ್ಲಿ ಮರುಮನಿ ವಿಕೆಟ್ ಗಳಿಸಿದ ಶಿವಂ ದುಬೆ ಜೊತೆಯಾಟವನ್ನು ಮುರಿದರು. ಮಧ್ಯಮ ಕ್ರಮಾಂಕದಲ್ಲಿ ನಾಯಕ ರಝಾ (46; 28ಎ) ಅವರ ಹೋರಾಟದಿಂದಾಗಿ ತಂಡದ ಮೊತ್ತವು ಸ್ವಲ್ಪ ಹೆಚ್ಚಿತು.
ಈ ಮೊತ್ತವನ್ನು ಬೆನ್ನಟ್ಟಿದ ಭಾರತ ತಂಡವು 15.2 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 156 ರನ್ ಗಳಿಸಿ ಜಯಿಸಿತು.
ಯಶಸ್ವಿ ಜೈಸ್ವಾಲ್ (ಔಟಾಗದೆ 93; 53ಎ, 4X13, 6X2) ಮತ್ತು ಗಿಲ್ (ಔಟಾಗದೆ 58, 39ಎ, 4X6, 6X2) ಅವರಿಬ್ಬರೇ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಇನಿಂಗ್ಸ್‌ನಲ್ಲಿ ಇನ್ನೂ 28 ಎಸೆತಗಳು ಬಾಕಿಯಿದ್ದವು.
ಭಾರತ ತಂಡವು ಇದೇ ಸ್ಥಳದಲ್ಲಿ ಜಿಂಬಾಬ್ವೆ ತಂಡವನ್ನು 10 ವಿಕೆಟ್‌ಗಳಿಂದ ಸೋಲಿಸುತ್ತಿರುವುದು ಇದು ಎರಡನೇ ಬಾರಿ. 2016ರಲ್ಲಿಯೂ ಇದೇ ರೀತಿ ಗೆಲುವು ಸಾಧಿಸಿತ್ತು.
ಮುಂಬೈನ ಎಡಗೈ ಬ್ಯಾಟರ್ ಜೈಸ್ವಾಲ್ ಅವರು ಈಚೆಗೆ ನಡೆದಿದ್ದ ಟಿ20 ವಿಶ್ವಕಪ್ ಟೂರ್ನಿಯಲ್ಲಿ 11ರ ಬಳಗದಲ್ಲಿ ಸ್ಥಾನ ಪಡೆದಿರಲಿಲ್ಲ. ಈ ಪಂದ್ಯದಲ್ಲಿ ಲಭಿಸಿದ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡರು.
ಆತಿಥೇಯ ತಂಡದ ನಾಯಕ ಸಿಕಂದರ್ ರಝಾ ಅವರ ಎಸೆತವನ್ನು ಬ್ಯಾಕ್ ಡ್ರೈವ್ ಮಾಡಿದ ಜೈಸ್ವಾಲ್ ಚುರುಕುತನ ಮೆರೆದರು. ರಿಚರ್ಡ್ ನಗೇರವಾ ಅವರ ಎಸೆತವನ್ನು ಪುಲ್ ಮಾಡಿ ಸಿಕ್ಸರ್‌ಗೆ ಎತ್ತಿದರು. ಜಿಂಬಾಬ್ವೆ ಬೌಲರ್‌ಗಳ ಎಸೆತಗಳ ವೇಗ ಕಡಿಮೆಯಿತ್ತು.
ಸಂಕ್ಷಿಪ್ತ ಸ್ಕೋರು:
ಜಿಂಬಾಬ್ವೆ: 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 152 (ಮದೆವೆರೆ 25, ಟೆಡಿವಾನ್ಷೆ ಮರುಮನಿ 32, ಸಿಕಂದರ್ ರಝಾ 46, ಖಲೀಲ್ ಅಹಮದ್ 32ಕ್ಕೆ2)
ಭಾರತ: 15.2 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 156 (ಯಶಸ್ವಿ ಜೈಸ್ವಾಲ್ ಔಟಾಗದೆ 93, ಶುಭಮನ್ ಗಿಲ್ ಔಟಾಗದೆ 58)
ಫಲಿತಾಂಶ:ಭಾರತಕ್ಕೆ 10 ವಿಕೆಟ್‌ಗಳ ಜಯ. ಸರಣಿಯಲ್ಲಿ 3–1ರಿಂದ ಮುನ್ನಡೆ.
ತುಷಾರ್ ಪದಾರ್ಪಣೆ, ಭಾರತ ಫೀಲ್ಡಿಂಗ್...
ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಶುಭಮನ್ ಗಿಲ್ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ಭಾರತ ತಂಡದ ಪರ ತುಷಾರ್ ದೇಶಪಾಂಡೆ ಪದಾರ್ಪಣೆ ಮಾಡಿದರು. ಇವರಿಗಾಗಿ ಆವೇಶ್ ಖಾನ್ ತಮ್ಮ ಸ್ಥಾನ ಬಿಟ್ಟುಕೊಟ್ಟರು.
ಐದು ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ ಭಾರತ 2-1ರ ಅಂತರದ ಮುನ್ನಡೆ ಗಳಿಸಿದೆ. ಮೊದಲ ಪಂದ್ಯದಲ್ಲಿ ಸೋಲು ಕಂಡಿದ್ದ ಭಾರತ ಬಳಿಕದ ಎರಡೂ ಪಂದ್ಯಗಳಲ್ಲಿ ಜಯಿಸಿತ್ತು.
ಈಗ ಈ ಪಂದ್ಯವನ್ನು ಗೆದ್ದು ಸರಣಿ ವಶಪಡಿಸಿಕೊಳ್ಳುವ ಗುರಿ ಹೊಂದಿದೆ.
ಭಾರತದ ಆಡುವ ಹನ್ನೊಂದರ ಬಳಗ ಇಂತಿದೆ:
ಶುಭಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ಅಭಿಷೇಕ್ ಶರ್ಮಾ, ಋತುರಾಜ್ ಗಾಯಕವಾಡ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರಿಂಕು ಸಿಂಗ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯಿ, ತುಷಾರ್ ದೇಶಪಾಂಡೆ, ಖಲೀಲ್ ಅಹ್ಮದ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.