ಪೋರ್ಟ್ ಆಫ್ ಸ್ಪೇನ್: ಕನ್ನಡಿಗರಾದ ಕೃಷ್ಣಪ್ಪ ಗೌತಮ್ ಅವರ ಬೌಲಿಂಗ್ ಮತ್ತು ಮಯಂಕ್ ಅಗರವಾಲ್ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಭಾರತ ‘ಎ’ ತಂಡವು ವೆಸ್ಟ್ ಇಂಡೀಸ್ ‘ಎ’ ಎದುರಿನ ಎರಡನೇ ‘ಟೆಸ್ಟ್’ನಲ್ಲಿ 7 ವಿಕೆಟ್‌ಗಳಿಂದ ಜಯಭೇರಿ ಮೊಳಗಿಸಿದೆ.
ಪಂದ್ಯದ ಮೂರನೇ ದಿನವಾದ ಶುಕ್ರವಾರ ಗೌತಮ್ (17ಕ್ಕೆ5) ಅವರ ಮೊನಚಾದ ದಾಳಿಗೆ ತತ್ತರಿಸಿದ ವಿಂಡೀಸ್ ಬಳಗವು ಎರಡನೇ ಇನಿಂಗ್ಸ್‌ನಲ್ಲಿ 149 ರನ್ ಗಳಿಸಿ ಆಲೌಟ್ ಆಯಿತು. ಮೊದಲ ಇನಿಂಗ್ಸ್‌ನಲ್ಲಿ ಆತಿಥೇಯರು 128 ರನ್‌ಗಳ ಮುನ್ನಡೆ ಗಳಿಸಿದ್ದರು.
278 ರನ್‌ಗಳ ಗುರಿಯನ್ನು ಹನುಮ ವಿಹಾರಿ ಬಳಗವು ಶನಿವಾರ 79.1 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಮುಟ್ಟಿತು.
ಪ್ರಿಯಾಂಕ್ ಪಾಂಚಾಲ್ (68; 122 ಎಸೆತ, 9 ಬೌಂಡರಿ, 1 ಸಿಕ್ಸರ್) ಮತ್ತು ಮಯಂಕ್ (81; 133ಎ, 10ಬೌಂ) ಮೊದಲ ವಿಕೆಟ್‌ಗೆ 150 ರನ್‌ಗಳನ್ನು ಸೇರಿಸಿ ಪ್ರವಾಸಿ ಪಡೆಯ ಗೆಲುವಿನ ಹಾದಿ ಸುಲಭ ಮಾಡಿದರು.
ಅಭಿಮನ್ಯು ಈಶ್ವರನ್ (ಔಟಾಗದೆ 62; 132ಎ, 8ಬೌಂ) ಮತ್ತು ಅನ್ಮೋಲ್ ಪ್ರೀತ್ ಸಿಂಗ್ (ಔಟಾಗದೆ 51; 88ಎ, 8ಬೌಂ) ವಿಂಡೀಸ್ ಬೌಲರ್‌ಗಳನ್ನು ಕಾಡಿದರು.
ಇವರು ಮುರಿಯದ ನಾಲ್ಕನೇ ವಿಕೆಟ್ ಪಾಲುದಾರಿಕೆಯಲ್ಲಿ 103ರನ್ ಸೇರಿಸಿ ಹನುಮ ಬಳಗದ ಸಂಭ್ರಮಕ್ಕೆ ಕಾರಣರಾದರು.
ವೆಸ್ಟ್ ಇಂಡೀಸ್ ಎದುರಿನ ಟೆಸ್ಟ್ ಸರಣಿಗೆ ಆಯ್ಕೆಯಾಗಿರುವ ಮಯಂಕ್ ಮತ್ತೊಮ್ಮೆ ತಮ್ಮ ಪ್ರತಿಭೆ ಅನಾವರಣ ಗೊಳಿಸಿದರು. ಸಿಕ್ಕ ಅವಕಾಶದಲ್ಲಿ ಉತ್ತಮವಾಗಿ ಆಡಿದರು. ಆದರೆ, ಶತಕದ ಗಡಿ ಮುಟ್ಟುವಲ್ಲಿ ಸಫಲರಾಗಲಿಲ್ಲ.
ಸಂಕ್ಷಿಪ್ತ ಸ್ಕೋರು: ವೆಸ್ಟ್ ಇಂಡೀಸ್ ‘ಎ’: ಮೊದಲ ಇನಿಂಗ್ಸ್; 113 ಓವರ್‌ಗಳಲ್ಲಿ 318 ಮತ್ತು 39.5 ಓವರ್‌ಗಳಲ್ಲಿ 149 (ಸುನಿಲ್ ಆ್ಯಂಬ್ರಿಸ್ 71, ಜರ್ಮೈನ್ ಬ್ಲ್ಯಾಕ್‌ವುಡ್ 31, ರೊಮೆರಿಯೊ ಶೆಫರ್ಡ್ ಔಟಾಗದೆ 16, ಸಂದೀಪ್ ವಾರಿಯರ್ 43ಕ್ಕೆ3, ಕೃಷ್ಣಪ್ಪ ಗೌತಮ್ 17ಕ್ಕೆ5, ಮೊಹಮ್ಮದ್ ಸಿರಾಜ್ 55ಕ್ಕೆ1, ಶಿವಂ ದುಬೆ 18ಕ್ಕೆ1).
ಭಾರತ ‘ಎ’: ಪ್ರಥಮ ಇನಿಂಗ್ಸ್; 46.5 ಓವರ್‌ಗಳಲ್ಲಿ 190 ಮತ್ತು 79.1 ಓವರ್‌ಗಳಲ್ಲಿ 3 ವಿಕೆಟ್‌ಗೆ 281 (ಪ್ರಿಯಾಂಕ್ ಪಾಂಚಾಲ್ 68, ಮಯಂಕ್ ಅಗರವಾಲ್ 81, ಅಭಿಮನ್ಯು ಈಶ್ವರನ್ ಔಟಾಗದೆ 62, ಅನ್ಮೋಲ್‌ಪ್ರೀತ್ ಸಿಂಗ್ ಔಟಾಗದೆ 51; ಚೆಮರ್ ಹೋಲ್ಡರ್ 51ಕ್ಕೆ2, ರೇಮನ್ ರೀಫರ್ 57ಕ್ಕೆ1).
ಫಲಿತಾಂಶ: ಭಾರತ ‘ಎ’ ತಂಡಕ್ಕೆ 7 ವಿಕೆಟ್ ಗೆಲುವು. 3 ಪಂದ್ಯಗಳ ಸರಣಿಯಲ್ಲಿ 2–0 ಮುನ್ನಡೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.