ಅಹಮದಾಬಾದ್: ಮುಂದಿನ ವರ್ಷ ನಡೆಯಲಿರುವ ಮಹಿಳೆಯರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಆಡಲು ಭಾರತದ ವನಿತೆಯರ ತಂಡವು ಸಿದ್ಧತೆ ಆರಂಭಿಸಲಿದೆ. ನ್ಯೂಜಿಲೆಂಡ್ ವಿರುದ್ಧ ಆಯೋಜನೆಗೊಂಡಿರುವ ಮೂರು ಪಂದ್ಯಗಳ ಸರಣಿಯ ಮೊದಲ ಹಣಾಹಣಿಯು ಗುರುವಾರ ನಡೆಯಲಿದೆ.
ಹರ್ಮನ್‌ಪ್ರೀತ್ ಕೌರ್ ಅವರ ನೇತೃತ್ವದ ತಂಡವು ಈಚೆಗೆ ಟಿ20 ವಿಶ್ವಕಪ್ ಟೂರ್ನಿಯ ಲೀಗ್ ಹಂತದಲ್ಲಿಯೇ ನಿರ್ಗಮಿಸಿತ್ತು. ಸೋಫಿ ಡಿವೈನ್ ನಾಯಕತ್ವದ ನ್ಯೂಜಿಲೆಂಡ್ ತಂಡವು ಚಾಂಪಿಯನ್ ಆಗಿತ್ತು. ಆ ಟೂರ್ನಿಯ ಮೊದಲ ಲೀಗ್ ಪಂದ್ಯದಲ್ಲಿ ಇದೇ ನ್ಯೂಜಿಲೆಂಡ್ ತಂಡವು ಹರ್ಮನ್ ಬಳಗಕ್ಕೆ ಸೋಲುಣಿಸಿತ್ತು.
ಇದೀಗ ಹರ್ಮನ್ ಅವರಿಗೆ ತಮ್ಮ ನಾಯಕತ್ವ ಉಳಿಸಿಕೊಳ್ಳಲು ಕೂಡ ಈ ಟೂರ್ನಿಯು ಮಹತ್ವದ್ದಾಗಲಿದೆ. ಅಲ್ಲದೇ ತಂಡದ ಕೆಲವು ಆಟಗಾರ್ತಿಯರಿಗೆ ತಮ್ಮ ಲಯ ಕಂಡುಕೊಳ್ಳಲು ಕೂಡ ಇಲ್ಲಿ ಉತ್ತಮವಾಗಿ ಆಡಬೇಕಾದ ಅವಶ್ಯಕತೆ ಇದೆ.
ಅದರಲ್ಲೂ ಆರಂಭಿಕ ಜೋಡಿ ಸ್ಮೃತಿ ಮಂದಾನ, ಶಫಾಲಿ ವರ್ಮಾ ಅವರ ಮೇಲೆ ಎಲ್ಲರ ಕಣ್ಣಿದೆ. ಹೇಮಲತಾ ದಯಾಳನ್, ಯಷ್ಟಿಕಾ ಭಾಟಿಯಾ, ಜೆಮಿಮಾ ರಾಡ್ರಿಗಸ್ ಅವರೂ ಲಯಕ್ಕೆ ಮರಳಬೇಕಿದೆ.
ಮಧ್ಯಮವೇಗಿ ರೇಣುಕಾ ಠಾಕೂರ್ ಸಿಂಗ್, ದೀಪ್ತಿ ಶರ್ಮಾ, ಕನ್ನಡತಿ ಶ್ರೇಯಾಂಕಾ ಪಾಟೀಲ ಅವರು ಬೌಲಿಂಗ್ ವಿಭಾಗದ ಪ್ರಮುಖರಾಗಿದ್ದಾರೆ. ನ್ಯೂಜಿಲೆಂಡ್ ಬ್ಯಾಟರ್‌ಗಳನ್ನು ಕಟ್ಟಿಹಾಕುವ ಸವಾಲು ಇವರ ಮುಂದಿದೆ.
ಪಂದ್ಯ ಆರಂಭ: ಮಧ್ಯಾಹ್ನ 1.30
ನೇರಪ್ರಸಾರ: ಸ್ಪೋರ್ಟ್ಸ್ 18, ಜಿಯೊ ಸಿನಿಮಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.