ದುಬೈ: ಸ್ಮೃತಿ ಮಂದಾನ (50;38ಎ) ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ (ಔಟಾಗದೇ 52;27ಎ) ಅವರ ಅರ್ಧಶತಕ ಹಾಗೂ ಬೌಲರ್‌ಗಳ ಪರಿಣಾಮಕಾರಿ ದಾಳಿಯ ನೆರವಿನಿಂದ ಭಾರತ ತಂಡ ಭಾರತ ತಂಡ, ಮಹಿಳೆಯರ ಟಿ20 ವಿಶ್ವಕಪ್ ಟೂರ್ನಿಯ ‘ಎ’ ಗುಂಪಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಬುಧವಾರ 82 ರನ್‌ಗಳ ಸುಲಭ ಜಯ ಸಾಧಿಸಿತು.
ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಆಡಲು ನಿರ್ಧರಿಸಿದ ಭಾರತ ತಂಡಕ್ಕೆ ಶಫಾಲಿ ವರ್ಮಾ (43, 40 ಎಸೆತ) ಮತ್ತು ಮಂದಾನ 12.4 ಓವರುಗಳಲ್ಲಿ 98 ರನ್ ಜೊತೆಯಾಟವಾಡಿ ಭದ್ರ ಬುನಾದಿ ಹಾಕಿಕೊಟ್ಟರು.
ಹರ್ಮನ್‌ಪ್ರೀತ್ ಕೂಡ ರಟ್ಟೆಯರಳಿಸಿ ಆಡಿದ್ದರಿಂದ ಭಾರತ 3 ವಿಕೆಟ್‌ಗೆ 172 ರನ್‌ಗಳ ಉತ್ತಮ ಮೊತ್ತ ಗಳಿಸಿತು. ಇದು ಹಾಲಿ ಟೂರ್ನಿಯಲ್ಲಿ ಭಾರತದ ಅತ್ಯಧಿಕ ಮೊತ್ತ ಎನಿಸಿತು.
ಸವಾಲಿನ ಗುರಿಯನ್ನು ಬೆನ್ನತ್ತಿದ ಲಂಕಾ ತಂಡಕ್ಕೆ ರೇಣುಕಾ ಸಿಂಗ್ (16ಕ್ಕೆ 2) ಮತ್ತು ಶ್ರೇಯಾಂಕಾ ಪಾಟೀಲ (15ಕ್ಕೆ 1) ಆರಂಭದಲ್ಲೇ ಪೆಟ್ಟು ನೀಡಿದರು. ತಂಡವು 6 ರನ್ ಗಳಿಸುವಷ್ಟರಲ್ಲಿ ಮೂರು ವಿಕೆಟ್ ಕಳೆದು ಕೊಂಡಿತು. ನಂತರ ಬಂದ ಕವಿಶಾ ದಿಲ್ಹಾರಿ (21) ಮತ್ತು ಅನುಷ್ಕಾ ಸಂಜೀವನಿ (20) ಕೊಂಚ ಪ್ರತಿರೋಧ ತೋರಿದರೆ, ಉಳಿದವರು ನಿರಾಸೆ ಮೂಡಿಸಿದರು. ಅರುಂಧತಿ ರೆಡ್ಡಿ ಮತ್ತು ಆಶಾ ಸೋಭಾನ ತಲಾ ಮೂರು ವಿಕೆಟ್ ಪಡೆದು ಮಿಂಚಿದರು.
ಮೂರು ಪಂದ್ಯಗಳ ಪೈಕಿ ಸತತ ಎರಡರಲ್ಲಿ ಗೆದ್ದು ನಾಲ್ಕು ಅಂಕ ಗಳಿಸಿರುವ ಭಾರತ, ‘ಎ’ ಗುಂಪಿನಲ್ಲಿ ಎರಡನೇ ಸ್ಥಾನದಲ್ಲಿದೆ. ಆಡಿರುವ ಎರಡೂ ಪಂದ್ಯ ಗೆದ್ದಿರುವ ಆಸ್ಟ್ರೇಲಿಯಾ ಅಗ್ರಸ್ಥಾನದಲ್ಲಿದೆ. ಲಂಕಾ ತಂಡ ಮೂರೂ ಪಂದ್ಯಗಳಲ್ಲಿ ಸೋತು ಕೊನೆಯ ಸ್ಥಾನದಲ್ಲಿದೆ.
ಸಂಕ್ಷಿಪ್ತ ಸ್ಕೋರು: ಭಾರತ: 20 ಓವರುಗಳಲ್ಲಿ 3 ವಿಕೆಟ್‌ಗೆ 172 (ಶಫಾಲಿ ವರ್ಮಾ 43, ಸ್ಮೃತಿ ಮಂದಾನ 50, ಹರ್ಮನ್‌ಪ್ರೀತ್ ಕೌರ್ ಔಟಾಗದೇ 52; ಚಮಾರಿ ಆಟಪಟ್ಟು 34ಕ್ಕೆ1, ಅಮಾ ಕಾಂಚನ 29ಕ್ಕೆ1). ಶ್ರೀಲಂಕಾ: 19.5 ಓವರ್‌ಗಳಲ್ಲಿ 90 (ಕವಿಶಾ ದಿಲ್ಹಾರಿ 21, ಅನುಷ್ಕಾ ಸಂಜೀವನಿ 20; ರೇಣುಕಾ ಸಿಂಗ್ 16ಕ್ಕೆ 2, ಅರುಂಧತಿ ರೆಡ್ಡಿ 19ಕ್ಕೆ 3, ಆಶಾ ಶೋಭಾನ 19ಕ್ಕೆ 3). ಫಲಿತಾಂಶ: ಭಾರತಕ್ಕೆ 82 ರನ್‌ಗಳ ಜಯ. ಪಂದ್ಯದ ಆಟಗಾರ್ತಿ: ಹರ್ಮನ್‌ಪ್ರೀತ್ ಕೌರ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.