ADVERTISEMENT

IND vs End: 4ನೇ ಟೆಸ್ಟ್‌ನಲ್ಲಿ 5 ವಿಕೆಟ್ ಜಯ, ಭಾರತಕ್ಕೆ ಸರಣಿ ಕೈವಶ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಫೆಬ್ರುವರಿ 2024, 8:30 IST
Last Updated 26 ಫೆಬ್ರುವರಿ 2024, 8:30 IST
   

ರಾಂಚಿ: ಇಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡ 5 ವಿಕೆಟ್‌ಗಳಿಂದ ಗೆಲುವು ದಾಖಲಿಸಿದೆ.

ಎರಡನೇ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್ ನೀಡಿದ್ದ 192 ರನ್ ಗುರಿ ಬೆನ್ನತ್ತಿದ ಭಾರತ ತಂಡ ರೋಹಿತ್ ಶರ್ಮಾ(55) ಮತ್ತು ಶುಭಮನ್ ಗಿಲ್(ಅಜೇಯ 52) ಅವರ ಅರ್ಧ ಶತಕಗಳ ನೆರವಿನಿಂದ 5 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು.

ಉಳಿದಂತೆ, ಯಶಸ್ವಿ ಜೈಸ್ವಾಲ್ 37, ಅಜೇಯ 39 ರನ್ ಗಳಿಸಿದ ಧ್ರುವ್ ಜುರೇಲ್ ಉಪಯುಕ್ತ ಕಾಣಿಕೆ ನೀಡಿದರು.

ADVERTISEMENT

ಈ ಮೂಲಕ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಭಾರತ ತಂಡ 3–1ರಿಂದ ಕೈವಶ ಮಾಡಿಕೊಂಡಿದೆ.

ಮೊದಲನೇ ಇನಿಂಗ್ಸ್‌ನಲ್ಲಿ 46 ರನ್‌ ಮುನ್ನಡೆ ಪಡೆದಿದ್ದ ಇಂಗ್ಲೆಂಡ್ ತಂಡ, ಎರಡನೇ ಇನಿಂಗ್ಸ್‌ನಲ್ಲಿ ಅಲ್ಪಮೊತ್ತಕ್ಕೆ ಕುಸಿಯಲು ಆರ್‌. ಅಶ್ವಿನ್ (51ಕ್ಕೆ5) ಮತ್ತು ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ (22ಕ್ಕೆ4) ಕಾರಣರಾದರು. ಮೂರನೇ ದಿನವಾದ ಭಾನುವಾರ ಇಂಗ್ಲೆಂಡ್ ತಂಡವು ಭಾರತಕ್ಕೆ 192 ರನ್‌ಗಳ ಗೆಲುವಿನ ಗುರಿ ನೀಡಿತ್ತು. ದಿನದಾಟದ ಅಂತ್ಯಕ್ಕೆ ಆತಿಥೇಯ ತಂಡವು 8 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 40 ರನ್ ಗಳಿಸಿತ್ತು.

ಇಂದು ಬ್ಯಾಟಿಂಗ್ ಮುಂದುವರಿಸಿದ ಭಾರತ ತಂಡವು ಭೋಜನ ವಿರಾಮಕ್ಕೆ 3 ವಿಕೆಟ್ ನಷ್ಟಕ್ಕೆ 118 ರನ್ ಗಳಿಸಿತ್ತು. ಬಳಿಕ, ಮತ್ತೆರಡು ವಿಕೆಟ್ ಉರುಳಿದರೂ ಯುವ ಬ್ಯಾಟರ್‌ಗಳು ಜಯ ಭಾರತದ ಕೈಜಾರದಂತೆ ನೋಡಿಕೊಂಡರು.

ಸಂಕ್ಷಿಪ್ತ ಸ್ಕೋರ್

ಭಾರತ ತಂಡ: 307 & 192/5

ಇಂಗ್ಲೆಂಡ್: 353 & 145

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.