ಲಾಡೆರ್‌ಹಿಲ್(ಅಮೆರಿಕ): ಇಲ್ಲಿ ನಡೆದ 5ನೇ ಟಿ–20 ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡವನ್ನು 8 ವಿಕೆಟ್‌ಗಳಿಂದ ಮಣಿಸುವ ಮೂಲಕ ವೆಸ್ಟ್‌ಇಂಡೀಸ್ ತಂಡ 3–2ರಿಂದ ಟಿ–20 ಸರಣಿ ಜಯಿಸಿದೆ. ಈ ಮೂಲಕ ಏಕದಿನ ಮತ್ತು ಟೆಸ್ಟ್ ಸರಣಿ ಸೋಲಿನ ಸೇಡನ್ನು ತೀರಿಸಿಕೊಂಡಿದೆ.
ಮೊದಲ ಎರಡು ಪಂದ್ಯಗಳನ್ನು ವೆಸ್ಟ್ ಇಂಡೀಸ್ ಗೆದ್ದಿತ್ತು. 3 ಮತ್ತು 4ನೇ ಪಂದ್ಯಗಳನ್ನು ಜಯಿಸುವ ಮೂಲಕ ಭಾರತ ಕಮ್‌ಬ್ಯಾಕ್ ಮಾಡಿತ್ತು. ಆದರೆ, 5ನೇ ಪಂದ್ಯದಲ್ಲಿ ಮುಗ್ಗರಿಸುವ ಮೂಲಕ ಸರಣಿ ಕೈಚೆಲ್ಲಿದೆ.
ಭಾರತ ನೀಡಿದ್ದ 166 ರನ್ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ 18 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 171 ರನ್ ಗಳಿಸುವ ಮೂಲಕ ಗೆಲುವಿನ ದಡ ಸೇರಿತು.55 ಎಸೆತಗಳಲ್ಲಿ 5 ಬೌಂಡರಿ, 6 ಸಿಕ್ಸರ್ ಸಹಿತ ಅಜೇಯ 85 ರನ್ ಸಿಡಿಸಿದ ಬ್ರ್ಯಾಂಡನ್ ಕಿಂಗ್, 35 ಎಸೆತಗಳಲ್ಲಿ 47 ರನ್ ಸಿಡಿಸಿದ ನಿಕೋಲಸ್ ಪೂರನ್ ಗೆಲುವಿನ ರೂವಾರಿಗಳಾದರು.
ಬೆಳಗಿದ ಸೂರ್ಯ
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಭಾರತ ತಂಡ ಸೂರ್ಯಕುಮಾರ್ ಯಾದವ್ (61; 45ಎ, 4X4, 6X3) ಅವರ ಅರ್ಧಶತಕದ ಬಲದಿಂದ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 169 ರನ್ ಗಳಿಸಲು ಸಾಧ್ಯವಾಯಿತು.
ಆತಿಥೇಯ ತಂಡದ ಅಕಿಲ್ ಹುಸೇನ್ ಮೊದಲ ಓವರ್‌ನಲ್ಲಿಯೇ ಯಶಸ್ವಿ ಜೈಸ್ವಾಲ್ ವಿಕೆಟ್ ಗಳಿಸಿದರು. ಮೂರನೇ ಓವರ್‌ನಲ್ಲಿ ಅಕಿಲ್ ಬೌಲಿಂಗ್‌ನಲ್ಲಿ ಶುಭಮನ್ ಗಿಲ್ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು.
ಈ ಹಂತದಲ್ಲಿ ಕ್ರೀಸ್‌ನಲ್ಲಿದ್ದ ಸೂರ್ಯ ಅವರೊಂದಿಗೆ ಸೇರಿದ ತಿಲಕ್ ವರ್ಮಾ (27; 18ಎ, 4X3, 6X2) ತಂಡಕ್ಕೆ ತುಸು ಚೇತರಿಕೆ ನೀಡಿದರು.
ರಾಷ್ಟನ್ ಚೇಸ್ ಎಂಟನೇ ಓವರ್‌ನಲ್ಲಿ ವರ್ಮಾ ವಿಕೆಟ್ ಗಳಿಸಿ ಜೊತೆಯಾಟ ಮುರಿದರು. ನಂತರ ಬಂದ ಬ್ಯಾಟರ್‌ಗಳು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಇರಲಿಲ್ಲ. ಆದರೆ ಸೂರ್ಯ ಮಾತ್ರ ಅಬ್ಬರಿಸಿದರು. ನಾಯಕ ಹಾರ್ದಿಕ್ ಪಾಂಡ್ಯ 18 ಎಸೆತಗಳಲ್ಲಿ 14 ರನ್ ಗಳಿಸಿದರು. ಅದರಲ್ಲಿ ಒಂದು ಸಿಕ್ಸರ್ ಸೇರಿತ್ತು.
ಈ ನಡುವೆ ಮಳೆ ಬಂದ ಕಾರಣ ಕೆಲಹೊತ್ತು ಪಂದ್ಯ ಸ್ಥಗಿತವಾಗಿತ್ತು.
ಸಂಕ್ಷಿಪ್ತ ಸ್ಕೋರು:
ಭಾರತ: 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 165 (ಸೂರ್ಯಕುಮಾರ್ ಯಾದವ್ 61, ತಿಲಕ್ ವರ್ಮಾ 27, ಅಕಿಲ್ ಹುಸೇನ್ 24ಕ್ಕೆ2, ಜೇಸನ್ ಹೋಲ್ಡರ್ 36ಕ್ಕೆ2, ರೊಮೆರಿಯೊ ಶೇಫರ್ಡ್ 31ಕ್ಕೆ4)
ವೆಸ್ಟ್ ಇಂಡೀಸ್: 10 ಓವರ್‌ಗೆ 2 ವಿಕೆಟ್ ನಷ್ಟಕ್ಕೆ 171 (ಬ್ರ್ಯಾಂಡನ್ ಕಿಂಗ್ ಅಜೇಯ 85, ನಿಕೋಲಸ್ ಪೂರನ್ 47, ತಿಲಕ್ ವರ್ಮಾ 17/1)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.