ADVERTISEMENT

ಎಂಟು ದಿನ ಬಯೊಬಬಲ್‌ನಲ್ಲಿ ವಾಸ: ಭಾರತ ಕ್ರಿಕೆಟ್ ತಂಡಗಳ ಕ್ವಾರಂಟೈನ್ ಆರಂಭ

ಜೂನ್ 2ರಂದು ಇಂಗ್ಲೆಂಡ್‌ಗೆ ವಿಮಾನವೇರುವ ಸಾಧ್ಯತೆ

ಪಿಟಿಐ
Published 25 ಮೇ 2021, 14:59 IST
Last Updated 25 ಮೇ 2021, 14:59 IST
ವಿರಾಟ್ ಕೊಹ್ಲಿ –ಎಎಫ್‌ಪಿ ಚಿತ್ರ
ವಿರಾಟ್ ಕೊಹ್ಲಿ –ಎಎಫ್‌ಪಿ ಚಿತ್ರ   

ಮುಂಬೈ: ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿರುವ ಭಾರತದ ಪುರುಷ ಮತ್ತು ಮಹಿಳಾ ಕ್ರಿಕೆಟ್ ತಂಡಗಳ ಎಂಟು ದಿನಗಳ ಕಠಿಣ ಕ್ವಾರಂಟೈನ್ ಮಂಗಳವಾರ ಆರಂಭವಾಗಿದೆ. ವಿಮಾನನಿಲ್ದಾಣ ಸಮೀಪದ ಗ್ರ್ಯಾಂಡ್ ಹಯಾತ್ ಹೋಟೆಲ್‌ನಲ್ಲಿ ತಂಡಗಳು ಬಯೊಬಬಲ್ ಪ್ರವೇಶಿಸಿವೆ.

ಎಲ್ಲ ಆಟಗಾರರು ಮತ್ತು ಸಿಬ್ಬಂದಿಯನ್ನು ಮೂರು ಬಾರಿ ಪರೀಕ್ಷೆಗೆ ಒಳಪಡಿಸಲಾಗುವುದು. ಮೂರೂ ಪರೀಕ್ಷೆಗಳ ವರದಿ ನೆಗೆಟಿವ್ ಬಂದವರು ಇಂಗ್ಲೆಂಡ್‌ಗೆ ತೆರಳುವರು. ಜೂನ್ ಎರಡರಂದು ತಂಡಗಳು ವಿಮಾನವೇರುವ ಸಾಧ್ಯತೆ ಇದೆ.

ಇಂಗ್ಲೆಂಡ್‌ನಲ್ಲಿ ಕ್ವಾರಂಟೈನ್ ದಿನಗಳನ್ನು ಕಡಿಮೆ ಮಾಡುವ ಕುರಿತು ಮಾತುಕತೆ ನಡೆಯುತ್ತಿದೆ. ಹೋಟೆಲ್ ಕೊಠಡಿಗಳಲ್ಲೇ ಕುಳಿತುಕೊಳ್ಳಬೇಕಾಗಿರುವ ಕಠಿಣ ಕ್ವಾರಂಟೈನ್‌ನಿಂದ ವಿನಾಯಿತಿ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ.

ADVERTISEMENT

ಪುರುಷರ ತಂಡ ಮೊದಲು ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್‌ ಪಂದ್ಯವನ್ನು ಆಡಲಿದೆ. ನ್ಯೂಜಿಲೆಂಡ್ ಎದುರಿನ ಈ ಹಣಾಹಣಿ ಜೂನ್ 18ರಂದು ಆರಂಭವಾಗಲಿದೆ. ನಂತರ ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲಿದೆ.

ಮಹಿಳೆಯರ ತಂಡದವರು ಜೂನ್ 16ರಿಂದ ನಡೆಯಲಿರುವ ಏಕೈಕ ಟೆಸ್ಟ್ ಪಂದ್ಯದೊಂದಿಗೆ ಅಭಿಯಾನ ಆರಂಭಿಸಲಿದ್ದಾರೆ. ಟೆಸ್ಟ್‌ ನಂತರ ತಲಾ ಮೂರು ಪಂದ್ಯಗಳ ಏಕದಿನ ಸರಣಿ ಮತ್ತು ಟಿ20 ಸರಣಿಗಳು ನಡೆಯಲಿವೆ.

’ಕೋವಿಡ್‌–19ರಿಂದ ಗುಣಮುಖರಾಗಿರುವ ವೃದ್ಧಿಮಾನ್ ಸಹಾ ಮತ್ತು ಪ್ರಸಿದ್ಧ ಕೃಷ್ಣ ಎರಡು ದಿನಗಳ ಹಿಂದೆಯೇ ಬಯೊಬಬಲ್ ಪ್ರವೇಶಿಸಿದ್ದು ನಾಯಕ ವಿರಾಟ್ ಕೊಹ್ಲಿ, ಉಪನಾಯಕ ರೋಹಿತ್ ಶರ್ಮಾ, ಕೋಚ್ ರವಿಶಾಸ್ತ್ರಿ ಮತ್ತಿತರರು ಮಂಗಳವಾರ ಬಯೊಬಬಲ್‌ ಪ್ರವೇಶಿಸಿದ್ದಾರೆ.

ಆಟಗಾರರ ಜೊತೆ ತೆರಳಲು ಕುಟುಂಬದವರಿಗೆ ಅವಕಾಶ ನೀಡುವುದರ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ. ಆದರೆ ಸಹಪ್ರಯಾಣಕ್ಕೆ ಬಿಸಿಸಿಐ ಎಲ್ಲ ರೀತಿಯಲ್ಲೂ ಪ್ರಯತ್ನಿಸುತ್ತಿದೆ ಎಂದು ತಿಳಿದುಬಂದಿದೆ.

‘ಮೂರು ತಿಂಗಳ ಕಾಲ ಅದೂ ಬಯೊಬಬಲ್‌ನಲ್ಲಿರಬೇಕಾಗಿರುವ ಆಟಗಾರರ ಕುಟುಂಬದವರನ್ನು ದೂರ ಇರಿಸಲು ನಮಗೆ ಇಷ್ಟವಿಲ್ಲ. ಹಾಗೆ ಮಾಡಿದರೆ ಅವರ ಮಾನಸಿಕ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ. ಆದ್ದರಿಂದ ಸಹ ಪ್ರಯಾಣಕ್ಕೆ ಪ್ರಯತ್ನ ಮಾಡಲಾಗುತ್ತಿದೆ’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.