ಚೆನ್ನೈ: ಭಾರತ ಕ್ರಿಕೆಟ್ ತಂಡದ ಆಫ್–ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಐಪಿಎಲ್‌ನಿಂದ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ. ಅವರ ಕುಟುಂಬದ ಸದಸ್ಯರು ಕೋವಿಡ್–19 ವಿರುದ್ಧದ ಹೋರಾಟದಲ್ಲಿದ್ದಾರೆ.
ಐಪಿಎಲ್ 2021ರಲ್ಲಿ ಅಶ್ವಿನ್ (34) ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಆಡುತ್ತಿದ್ದಾರೆ.
'ಈ ವರ್ಷದ ಐಪಿಎಲ್‌ನಿಂದ ನಾನು ವಿರಾಮ ತೆಗೆದುಕೊಳ್ಳುತ್ತಿದ್ದೇನೆ. ನನ್ನ ಕುಟುಂಬದವರು ಮತ್ತು ಸಂಬಂಧಿಗಳು ಕೋವಿಡ್–19 ವಿರುದ್ಧ ಹೋರಾಡುತ್ತಿದ್ದಾರೆ, ಇಂಥ ಕಠಿಣ ಸಮಯದಲ್ಲಿ ನಾನು ಅವರಿಗೆ ಬೆಂಬಲವಾಗಿ ನಿಲ್ಲುವುದು ಅಗತ್ಯವಾಗಿದೆ' ಎಂದು ಭಾನುವಾರ ರಾತ್ರಿ ಅಶ್ವಿನ್ ಟ್ವೀಟಿಸಿದ್ದಾರೆ.
ಕುಟುಂಬದ ಆಪ್ತರಿಗೆ ಕೊರೊನಾ ವೈರಸ್ ಸೊಂಕು ದೃಢಪಟ್ಟಿರುವ ಬೆನ್ನಲ್ಲೇ ಅಶ್ವಿನ್ ಈ ನಿರ್ಧಾರ ಪ್ರಕಟಿಸಿದ್ದಾರೆ. 'ಎಲ್ಲವೂ ಸರಿಯಾದರೆ ನಾನು ಮತ್ತೆ ಆಟಕ್ಕೆ ಮರಳುವ ನಿರೀಕ್ಷೆಯಲ್ಲಿದ್ದೇನೆ' ಎಂದು ಡೆಲ್ಲಿ ಕ್ಯಾಪಿಟಲ್ಸ್‌ಗೆ ಧನ್ಯವಾದ ಅರ್ಪಿಸಿದ್ದಾರೆ.
ಭಾನುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಸನ್‌ರೈಸರ್ಸ್ ಹೈದರಾಬಾದ್ ಎದುರು ಸೂಪರ್ ಓವರ್‌ನಲ್ಲಿ ರೋಚಕ ಗೆಲುವು ಸಾಧಿಸಿತು.
'ಇಂಥ ಕಠಿಣ ಪರಿಸ್ಥಿತಿಯಲ್ಲಿ ನಮ್ಮ ಪೂರ್ಣ ಬೆಂಬಲ ನಿಮ್ಮೊಂದಿಗಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರವಾಗಿ ನಿಮಗೆ ಮತ್ತು ನಿಮ್ಮ ಕುಟುಂಬದ ಸದಸ್ಯರಿಗೆ ನಮ್ಮ ಪ್ರಾರ್ಥನೆಗಳನ್ನು ಸಲ್ಲಿಸುತ್ತೇವೆ' ಎಂದು ಡೆಲ್ಲಿ ಕ್ಯಾಪಿಟಲ್ಸ್ ಪ್ರತಿಕ್ರಿಯಿಸಿದೆ.
ಕೋವಿಡ್ ಕಾರಣಗಳಿಂದಾಗಿ ಈ ಬಾರಿಯ ಐಪಿಎಲ್‌ನಿಂದ ಹೊರ ನಡೆಯುತ್ತಿರುವ ಮೊದಲ ಆಟಗಾರ ಅಶ್ವಿನ್. ಐಪಿಎಲ್ ಬಯೋ–ಬಬಲ್ ಕ್ರಮವನ್ನು ಅನುಸರಿಸುತ್ತಿದ್ದು, ಅಶ್ವಿನ್ ಆಟಕ್ಕೆ ಮರಳಿ ಬರುವುದಾದರೆ ಕೆಲವು ದಿನಗಳು ಕ್ವಾರಂಟೈನ್‌ನಲ್ಲಿ ಇರಬೇಕಾಗುತ್ತದೆ.
ಸೋಮವಾರ 24 ಗಂಟೆಗಳ ಅಂತರದಲ್ಲಿ ದೇಶದಾದ್ಯಂತ 3,52,991 ಹೊಸ ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿವೆ. ಇದೇ ಅವಧಿಯಲ್ಲಿ 2,812 ಸೋಂಕಿತರು ಮೃತಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.