ಬೆಂಗಳೂರು: ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ಅವರು, ಕರ್ನಾಟಕ ವಿರುದ್ಧದ ರಣಜಿ ಪಂದ್ಯದಲ್ಲಿ ಬಂಗಾಳ ಪರ ಕಣಕ್ಕಿಳಿಯುವುದಿಲ್ಲ ಎಂದು ವರದಿಯಾಗಿದೆ.
ಕರ್ನಾಟಕ ಎದುರು ನವೆಂಬರ್ 6ರಿಂದ 9ರ ವರೆಗೆ ನಡೆಯಲಿರುವ ಪಂದ್ಯಕ್ಕೆ ಅನುಸ್ತಪ್ ಮಜುಂದಾರ್ ನಾಯಕತ್ವದ ಬಂಗಾಳ ತಂಡ ಶನಿವಾರ ಘೋಷಣೆಯಾಗಿದೆ. ಇದರಲ್ಲಿ ಶಮಿ ಹೆಸರನ್ನು ಸೇರಿಸಿಲ್ಲ.
ಮಧ್ಯಪ್ರದೇಶ ವಿರುದ್ಧ ಇಂದೋರ್‌ನ ಹೋಳ್ಕರ್ ಕ್ರೀಡಾಂಗಣದಲ್ಲಿ ನವೆಂಬರ್ 13ರಂದು ಆರಂಭಗೊಳ್ಳುವ ಪಂದ್ಯದಲ್ಲಿ ಶಮಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಆ ಪಂದ್ಯವು ಪ್ರಸ್ತುತ ರಣಜಿ ಟೂರ್ನಿಯಲ್ಲಿ ಬಂಗಾಳ ಪಡೆ ಆಡುವ 5ನೇ ಪಂದ್ಯವಾಗಲಿದೆ.
ಈವರೆಗೆ ಆಡಿರುವ ಮೂರರಲ್ಲಿ ಉತ್ತರ ಪ್ರದೇಶ, ಕೇರಳ ಎದುರಿನ ಎರಡು ಪಂದ್ಯಗಳನ್ನು ಡ್ರಾ ಮಾಡಿಕೊಂಡಿರುವ ಬಂಗಾಳ, 5 ಪಾಯಿಂಟ್‌ಗಳೊಂದಿಗೆ 'ಸಿ' ಗುಂಪಿನ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಬಿಹಾರ ಎದುರಿನ ಇನ್ನೊಂದು ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು.
'ಶಮಿ, ಕರ್ನಾಟಕದ ವಿರುದ್ಧ ಆಡುವುದಿಲ್ಲ. ಮಧ್ಯಪ್ರದೇಶದ ಎದುರು ಕಾಣಿಸಿಕೊಳ್ಳಲಿದ್ದಾರೆ. ಅವರು ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳುವ ಆಲೋಚನೆಯಲ್ಲಿದ್ದಾರೆ' ಎಂದು ತಂಡದ ಮೂಲಗಳು ತಿಳಿಸಿವೆ.
ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡಿರುವ ಅವರು, ಆಸ್ಟ್ರೇಲಿಯಾದಲ್ಲಿ ಇದೇ ತಿಂಗಳಲ್ಲಿ ಆರಂಭವಾಗುವ ಬಾರ್ಡರ್ - ಗವಾಸ್ಕರ್ ಟೆಸ್ಟ್ ಸರಣಿಗೂ ಆಯ್ಕೆಯಾಗಿಲ್ಲ. ಹಾಗಾಗಿ, ರಣಜಿ ಟೂರ್ನಿಯಲ್ಲಿ ಆಡುವ ಮೂಲಕ ಪುನರಾಗಮನ ಮಾಡುವರೆ ಅಥವಾ ಸಂಪೂರ್ಣ ಚೇತರಿಕೆಗೆ ಇನ್ನಷ್ಟು ಸಮಯ ಬೇಕೇ ಎಂಬುದು ಕುತೂಹಲ ಮೂಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.