ADVERTISEMENT

ಮನಗೆದ್ದ ಬೂಮ್ರಾ ಬೌಲಿಂಗ್

ಆಪ್ತ ನಡವಳಿಕೆ ಮತ್ತು ಶಾಂತಚಿತ್ತದ ಮೂಲಕ ಸಹ ಆಟಗಾರರನ್ನು ಹುರಿದುಂಬಿಸಿದ ‘ಡೆತ್ ಓವರ್‌’ ಪರಿಣತ

​ಪ್ರಜಾವಾಣಿ ವಾರ್ತೆ
Published 13 ಮೇ 2019, 20:01 IST
Last Updated 13 ಮೇ 2019, 20:01 IST
ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ, ಚೆನ್ನೈ ಎದುರಿನ ಪಂದ್ಯದಲ್ಲಿ ಗೆದ್ದ ಬಳಿಕ ಮಗಳೊಂದಿಗೆ ಖುಷಿಪಟ್ಟರು –ಪಿಟಿಐ ಚಿತ್ರ
ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ, ಚೆನ್ನೈ ಎದುರಿನ ಪಂದ್ಯದಲ್ಲಿ ಗೆದ್ದ ಬಳಿಕ ಮಗಳೊಂದಿಗೆ ಖುಷಿಪಟ್ಟರು –ಪಿಟಿಐ ಚಿತ್ರ   

ಹೈದರಾಬಾದ್:‘ಡೆತ್ ಓವರ್‌’ ಪರಿಣತ ಜಸ್‌ಪ್ರೀತ್ ಬೂಮ್ರಾ ಭಾನುವಾರ ರಾತ್ರಿ ತಮ್ಮ ಬೌಲಿಂಗ್‌ನಿಂದಷ್ಟೇ ಅಲ್ಲ, ಆಪ್ತ ನಡವಳಿಕೆ ಮತ್ತು ಶಾಂತಚಿತ್ತದ ಮೂಲಕ ತಮ್ಮ ಸಹ ಆಟಗಾರರನ್ನು ಹುರಿದುಂಬಿಸಿದರು. ಪ್ರೇಕ್ಷಕರ ಮನಗೆದ್ದರು.

ಚೆನ್ನೈ ಎದುರಿನ ಫೈನಲ್ ಪಂದ್ಯ ದಲ್ಲಿ ಮುಂಬೈ ಫೀಲ್ಡರ್‌ಗಳು ಕಳಪೆ ಫೀಲ್ಡಿಂಗ್ ಮಾಡಿದರು. ಸುಮಾರು ಐದು ಕ್ಯಾಚ್‌ಗಳನ್ನು ನೆಲಕ್ಕೆ ಚೆಲ್ಲಿದರು. ಮಿಸ್‌ಫೀಲ್ಡಿಂಗ್, ಓವರ್‌ಥ್ರೋ ಮಾಡಿದರು. ರನ್‌ಔಟ್ ಅವಕಾಶ ಗಳನ್ನು ಕೈಚೆಲ್ಲಿದರು.

19ನೇ ಓವರ್‌ನಲ್ಲಿ ಪಂದ್ಯವು ರೋಚಕ ಘಟ್ಟದಲ್ಲಿತ್ತು ಆ ಸಂದರ್ಭದಲ್ಲಿ ಬೂಮ್ರಾ ಬೌನ್ಸರ್‌ ಅನ್ನು ಆಡಲು ವಾಟ್ಸನ್
ಪ್ರಯತ್ನಿಸಿದರು. ಆದರೆ ಅವರು ಸಫಲರಾಗಲಿಲ್ಲ. ಚೆಂಡು ಹಿಂದೆ ಸಾಗಿತು. ವಿಕೆಟ್‌ ಕೀಪರ್ ಕ್ವಿಂಟನ್ ಡಿಕಾಕ್ ಅದನ್ನು ಹಿಡಿತಕ್ಕೆ ಪಡೆಯುವಲ್ಲಿ ವಿಫಲರಾದರು. ಚೆಂಡು ಬೌಂಡರಿಗೆರೆ ದಾಟಿತು. ಆದರೆ, ಬೂಮ್ರಾ ಸಿಡಿಮಿಡಿಗೊಳ್ಳಲಿಲ್ಲ. ಸೀದಾ ಕ್ವಿಂಟನ್ ಬಳಿ ಹೋಗಿ ಅವರನ್ನು ತಬ್ಬಿಕೊಂಡು ತಲೆ ನೆವರಿಸಿದರು.

ADVERTISEMENT

ಬೂಮ್ರಾ ಅವರ ಇನ್ನೊಂದು ಓವರ್‌ನಲ್ಲಿ ಶೇನ್ ವಾಟ್ಸನ್ ಕ್ಯಾಚ್ ಅನ್ನು ಬೌಂಡರಿ ಲೈನ್ ಬಳಿ ಫೀಲ್ಡರ್ ರಾಹುಲ್ ಚಾಹರ್ ಕೈಚೆಲ್ಲಿದ್ದರು. ಆಗಲೂ ಬೂಮ್ರಾ ನಗುತ್ತ ನಿಂತಿದ್ದರು. ಚಪ್ಪಾಳೆ ತಟ್ಟಿ ರಾಹುಲ್ ಅವರನ್ನು ಹುರಿದುಂಬಿಸಿದರು. ಅವರ ಈ ರೀತಿಯ ನಡವಳಿಕೆಯು ಸಹ ಆಟಗಾರರ ಹುಮ್ಮಸ್ಸಿಗೆ ಕಾರಣವಾಯಿತು ಎಂದು ರೋಹಿತ್ ಶರ್ಮಾ ಶ್ಲಾಘಿಸಿದ್ದಾರೆ.

ಮಹೇಂದ್ರ ಸಿಂಗ್‌ ಧೋನಿ ಪತ್ನಿ ಸಾಕ್ಷಿ ಸಿಂಗ್‌ (ಎಡತುದಿ) ಮತ್ತು ಮಗಳು ಜೀವಾ ಫೈನಲ್‌ ಪಂದ್ಯಕ್ಕೆ ಸಾಕ್ಷಿಯಾಗಿದ್ದರು

ಮುಂಬೈ ತಂಡದ ಮಾರ್ಗದರ್ಶಕ ಸಚಿನ್ ತೆಂಡೂಲ್ಕರ್, ‘ಬೂಮ್ರಾ ವಿಶ್ವಶ್ರೇಷ್ಠ ಬೌಲರ್‌ ಆಗಿದ್ದಾರೆ. ಒತ್ತಡದ ಸಂದರ್ಭದಲ್ಲಿಯೂ ತಮ್ಮ ವಿಶಿಷ್ಟ ಶೈಲಿಯ ಮೂಲಕ ಬ್ಯಾಟ್ಸ್‌ಮನ್‌ಗಳಿಗೆ ಕಠಿಣ ಸವಾಲೊಡ್ಡಬಲ್ಲರು’ ಎಂದು ಹೊಗಳಿದ್ದಾರೆ.

ಫೈನಲ್ ಪಂದ್ಯದಲ್ಲಿ ಬೂಮ್ರಾ ನಾಲ್ಕು ಓವರ್‌ಗಳಲ್ಲಿ ಕೇವಲ 14 ರನ್ ನೀಡಿ ಎರಡು ವಿಕೆಟ್ ಗಳಿಸಿದರು.

‘ಅಂಕಿ–ಸಂಖ್ಯೆಗಳ ದಾಖಲೆಗಳನ್ನು ತೆಗೆದುನೋಡಿ. ಪ್ರಸ್ತುತ ಬೂಮ್ರಾ ಅವರೇ ಶ್ರೇಷ್ಠ ಬೌಲರ್ ಎಂಬುದು ಗೋತ್ತಾಗುತ್ತದೆ. ಅವರಿಂದ ಇನ್ನೂ ಹೆಚ್ಚಿನ ಉತ್ಕೃಷ್ಠ ಬೌಲಿಂಗ್ ಹೊರಹೊಮ್ಮಲಿದೆ’ ಎಂದು ಸಚಿನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಲೆಗ್‌ಸ್ಪಿನ್ನರ್ ರಾಹುಲ್ ಚಾಹರ್ ಕೂಡ ಪ್ರತಿಭಾನ್ವಿತ ಆಟಗಾರ. ನಾಲ್ಕು ಓವರ್‌ಗಳಲ್ಲಿ 14 ರನ್‌ ನೀಡಿ ಒಂದು ವಿಕೆಟ್ ಪಡೆದರು. 13 ಡಾಟ್ ಬಾಲ್‌ಗಳನ್ನು ಹಾಕಿದರು’ ಎಂದು ಸಚಿನ್ ಶ್ಲಾಘಿಸಿದರು.

ಜಸ್‌ಪ್ರೀತ್ ಬೂಮ್ರಾ ಅವರಿಗೆ ಪಂದ್ಯಶ್ರೇಷ್ಠ ಗೌರವ ಗಳಿಸಿದರು.

ಐಪಿಎಲ್ ಕೀಪಿಂಗ್‌ನಲ್ಲಿ ದಾಖಲೆ ಬರೆದ ಮಹೇಂದ್ರ ಸಿಂಗ್‌ ಧೋನಿ

ಹೈದರಾಬಾದ್:ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ನಾಯಕ ಮಹೇಂದ್ರಸಿಂಗ್ ಧೋನಿ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ವಿಕೆಟ್‌ಕೀಪಿಂಗ್‌ನಲ್ಲಿ ದಾಖಲೆ ಬರೆದರು.

ಭಾನುವಾರ ರಾತ್ರಿ ನಡೆದ ಮುಂಬೈ ಇಂಡಿಯನ್ಸ್‌ ವಿರುದ್ಧದ ರೋಚಕ ಫೈನಲ್‌ನಲ್ಲಿ ಧೋನಿ ಎರಡು ಕ್ಯಾಚ್ ಪಡೆದರು. ಅದರೊಂದಿಗೆ ಅವರು ಅತಿ ಹೆಚ್ಚು ಬಲಿ ಪಡೆದ ಐಪಿಎಲ್ ವಿಕೆಟ್‌ಕೀಪರ್ ಹೆಗ್ಗಳಿಕೆಗೆ ಪಾತ್ರರಾದರು. ಅವರು ಒಟ್ಟು 132 ಬಲಿ (94 ಕ್ಯಾಚ್ ಮತ್ತು 38 ಸ್ಟಂಪಿಂಗ್ಸ್‌) ಪಡೆದಿದ್ದಾರೆ. ಇದರೊಂದಿಗೆ ಕೋಲ್ಕತ್ತ ನೈಟ್ ರೈಡರ್ಸ್‌ ತಂಡದ ದಿನೇಶ್ ಕಾರ್ತಿಕ್ ಅವರ (131) ದಾಖಲೆಯನ್ನು ಧೋನಿ ಮೀರಿ ನಿಂತಿದ್ದಾರೆ.

ಫೈನಲ್ ಪಂದ್ಯದಲ್ಲಿ ಧೋನಿ ಮುಂಬೈ ಇಂಡಿಯನ್ಸ್‌ ತಂಡದ ಬ್ಯಾಟ್ಸ್‌ಮನ್‌ಗಳಾದ ಕ್ವಿಂಟನ್ ಡಿ ಕಾಕ್ (29 ರನ್) ಮತ್ತು ರೋಹಿತ್ ಶರ್ಮಾ (15 ರನ್) ಅವರ ಕ್ಯಾಚ್‌ಗಳನ್ನು ಪಡೆದಿದ್ದರು.

ಫನ್ನಿ ಫೈನಲ್: ಇಡೀ ಫೈನಲ್ ಪಂದ್ಯವು ತಮಾಷೆಯಾಗಿತ್ತು. ಪಂದ್ಯದುದ್ದಕ್ಕೂ ಟ್ರೋಫಿಯನ್ನು ಉಭಯ ತಂಡಗಳು ಪರಸ್ಪರ ಕೈ ಬದಲಾಯಿಸಿದಂತೆ ಕಂಡುಬಂದಿತು ಎಂದು ಮಹೇಂದ್ರಸಿಂಗ್ ಧೋನಿ ಅಭಿಪ್ರಾಯಪಟ್ಟರು.

ಭಾನುವಾರ ಫೈನಲ್ ಪಂದ್ಯದಲ್ಲಿ ಸೋತ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಇವತ್ತಿನ ಪಂದ್ಯದಲ್ಲಿ ನಾವು ಇನ್ನಷ್ಟು ಉತ್ತಮವಾಗಿ ಆಡಬಹುದಿತ್ತು. ಎರಡೂ ತಂಡಗಳಿಂದ ಬಹಳಷ್ಟು ತಪ್ಪುಗಳಾದವು. ತಪ್ಪು ಮಾಡುವ ಪೈಪೋಟಿಯಲ್ಲಿ ಒಂದೇ ಒಂದು ಕಡಿಮೆ ಲೋಪವೆಸಗಿದ ತಂಡವು ವಿಜೇತವಾಯಿತು’ ಎಂದರು.

ರಾಜೀವಗಾಂಧಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್‌ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 149 ರನ್‌ ಗಳಿಸಿತ್ತು. ಚೆನ್ನೈ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 148 ರನ್‌ ಗಳಿಸಿ, ಒಂದು ರನ್‌ನಿಂದ ಸೋತಿತು. ಚೆನ್ನೈ ತಂಡದ ಶೇನ್ ವಾಟ್ಸನ್ (80 ರನ್) ಅರ್ಧಶತಕ ಗಳಿಸಿದರು.

‘ನಮ್ಮ ಬೌಲರ್‌ಗಳು ಉತ್ತಮವಾಗಿ ಆಡಿದರು. ಈ ಪಿಚ್‌ನಲ್ಲಿ ರನ್‌ಗಳನ್ನು ಗಳಿಸಲು ಅವಕಾಶವಿತ್ತು. ಆದರೆ 150 ರನ್‌ಗಳೊಳಗೆ ಮುಂಬೈ ತಂಡವನ್ನು ನಮ್ಮ ಬೌಲಿಂಗ್ ಪಡೆ ಕಟ್ಟಿ ಹಾಕಿತು. ಬ್ಯಾಟಿಂಗ್‌ನಲ್ಲಿ ಒಂದು ಉತ್ತಮ ಜೊತೆಯಾಟದ ಅಗತ್ಯವಿತ್ತು. ಮುಂದಿನ ವರ್ಷ ಈ ವಿಭಾಗದಲ್ಲಿ ಹೆಚ್ಚಿನ ಸುಧಾರಣೆಯ ಅಗತ್ಯವಿದೆ’ ಎಂದು ಧೋನಿ ಹೇಳಿದರು.

ಪೊಲಾರ್ಡ್‌ಗೆ ದಂಡ

ಮುಂಬೈ ಇಂಡಿಯನ್ಸ್‌ ತಂಡದ ಬ್ಯಾಟ್ಸ್‌ಮನ್ ಕೀರನ್ ಪೊಲಾರ್ಡ್‌ ಅವರಿಗೆ ಅಶಿಸ್ತಿನ ನಡವಳಿಕೆಗಾಗಿ ದಂಡ ವಿಧಿಸಲಾಗಿದೆ.

ಭಾನುವಾರ ರಾತ್ರಿ ರಾಜೀವಗಾಂಧಿ ಕ್ರೀಡಾಂಗಣದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಎದುರಿನ ಐಪಿಎಲ್ ಫೈನಲ್ ಪೊಲಾರ್ಡ್‌ ಅವರು ಬ್ಯಾಟಿಂಗ್ ಮಾಡುವಾಗ ವೈಡ್ ಗೆರೆಯ ಬಳಿ (ಆಫ್‌ಸ್ಟಂಪ್‌ನಿಂದ ಹೊರಗೆ) ನಿಂತು ಆಡಲು ಯತ್ನಿಸಿದರು. ಆ ಸಂದರ್ಭದಲ್ಲಿ ಇನಿಂಗ್ಸ್‌ನ ಕೊನೆಯ ಓವರ್‌ ಅನ್ನು ಚೆನ್ನೈ ತಂಡದ ಡ್ವೇನ್ ಬ್ರಾವೊ ಬೌಲಿಂಗ್ ಮಾಡುತ್ತಿದ್ದರು. ಆದರೆ, ಪೊಲಾರ್ಡ್ ಅವರು ತಾವು ಮೊದಲೇ ಪಡೆದುಕೊಂಡಿದ್ದ ಗಾರ್ಡ್‌ ಬಿಟ್ಟು ಬೇರೆ ಕಡೆ ಬ್ಯಾಟಿಂಗ್ ಮಾಡುವುದನ್ನು ಅಂಪೈರ್ ಇಯಾನ್ ಗೌಲ್ಡ್‌ ಮತ್ತು ನಿತಿನ್ ಮೆನನ್ ತಡೆದರು. ಅವರಿಗೆ ಎಚ್ಚರಿಕೆ ನೀಡಿದರು. ನಂತರ ಬ್ರಾವೊಗೆ ಬೌಲಿಂಗ್ ಮಾಡಲು ಅವಕಾಶ ನೀಡಿದರು.

ಇದಕ್ಕೂ ಮುನ್ನದ ಎಸೆತದಲ್ಲಿ ಬ್ರಾವೊ ಹಾಕಿದ್ದ ಎಸೆತವೊಂದು ವೈಡ್ ಗೆರೆಯ ಪಕ್ಕದಿಂದಲೇ ಸಾಗಿ ಹೋಗಿತ್ತು. ಆದರೆ, ಅಂಪೈರ್ ವೈಡ್ ಬಾಲ್ ಸೂಚನೆ ನೀಡಿರಲಿಲ್ಲ. ಇದನ್ನು ವಿರೋಧಿಸಿ ಪೊಲಾರ್ಡ್ ವೈಡ್ ಗೆರೆಯ ಬಳಿಯೇ ಬ್ಯಾಟಿಂಗ್‌ಗೆ ನಿಂತಿದ್ದರು. ಇದನ್ನು ಅಶಿಸ್ತಿನ ವರ್ತನೆ ಎಂದು ಪರಿಗಣಿಸಿರುವ ಐಪಿಎಲ್ ಸಮಿತಿಯು ಪೊಲಾರ್ಡ್ ಅವರಿಗೆ ಪಂದ್ಯ ಶುಲ್ಕದ ಶೇ 25ರಷ್ಟನ್ನು ದಂಡ ವಿಧಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.