ಭಾರತದಲ್ಲಿ ಈಗ ಗಲ್ಲಿ ಕ್ರಿಕೆಟ್‌ಗೂ ಒಳ್ಳೆಯ ಕಾಲ ಕೂಡಿ ಬಂದಿದೆ. ಈಚೆಗೆ ನಡೆದ ಇಂಡಿಯನ್ ಸ್ಟ್ರೀಟ್ ಪ್ರಿಮಿಯರ್ ಲೀಗ್ (ಐಎಸ್‌ಪಿಎಲ್) ಟೂರ್ನಿಯ ಮೊದಲ ಆವೃತ್ತಿಯು ಯಶಸ್ವಿಯಾಗಿದೆ. ಟೆನಿಸ್‌ಬಾಲ್ ಕ್ರಿಕೆಟ್‌ಗೂ ವೃತ್ತಿಪರತೆಯ ಸ್ಪರ್ಶ ನೀಡಿದೆ.
****
ಕಾಶ್ಮೀರದ 14 ವರ್ಷದ ಬಾಲಕ ಶರೀಕ್ ಯಾಸೀರ್ ಈಗ ಕ್ರಿಕೆಟ್ ಆಡಲು ಟೆನಿಸ್‌ಬಾಲ್, ಬ್ಯಾಟು ಹಿಡಿದು ಹೊರಟರೆ ಮನೆಯಲ್ಲಿ ತಡೆಯುವುದಿಲ್ಲ. ಬದಲಿಗೆ ಬೆನ್ನುತಟ್ಟಿ ಕಳಿಸುತ್ತಾರೆ. ಏಕೆಂದರೆ, ಈ ಹುಡುಗನ ಕ್ರಿಕೆಟ್ ಪ್ರೀತಿಗೆ ಈಗ ಹೆಸರು ಮತ್ತು ಹಣ ಎರಡೂ ಒಲಿದು ಬಂದಿವೆ. ಕಾಶ್ಮೀರದ ಪ್ರಮುಖ ಪತ್ರಿಕೆಗಳಲ್ಲಿ ಯಾಸೀರ್ ಚಿತ್ರಗಳು, ಸುದ್ದಿಗಳು ರಾರಾಜಿಸುತ್ತಿವೆ.
ಇತ್ತೀಚೆಗೆ ನಡೆದ ಇಂಡಿಯನ್ ಸ್ಟ್ರೀಟ್ ಪ್ರಿಮಿಯರ್ ಲೀಗ್ (ಐಎಸ್‌ಪಿಎಲ್) ಟಿ10 ಕ್ರಿಕೆಟ್ ಟೂರ್ನಿಯಲ್ಲಿ ಬೆಂಗಳೂರು ಸ್ಟ್ರೈಕರ್ಸ್ ಫ್ರ್ಯಾಂಚೈಸಿಯು ₹ 3.5 ಲಕ್ಷ ನೀಡಿ ಈ ಹುಡುಗನನ್ನು ಖರೀದಿಸಿತ್ತು.
ಟಿ.ವಿಯಲ್ಲಿ ತಮ್ಮ ನೆಚ್ಚಿನ ಕ್ರಿಕೆಟ್ ತಾರೆಗಳನ್ನು ನೋಡಿ ಗಲ್ಲಿ ಕ್ರಿಕೆಟ್‌ನಲ್ಲಿ ಆಡುವ ಇಂತಹ ಹಲವು ಹುಡುಗರಿಗೂ ಈಗ ಶುಕ್ರದೆಸೆ ಕೂಡಿ ಬಂದಿದೆ. ಲೆದರ್ ಬಾಲ್ ಕ್ರಿಕೆಟಿಗರಂತೆ ಅಂತರರಾಷ್ಟ್ರೀಯ ಮಟ್ಟದ ಟೆನಿಸ್‌ಬಾಲ್ ಕ್ರಿಕೆಟ್ ಆಡುವ ಕನಸು ಕೂಡ ಗರಿಗೆದರಿದೆ. ಅದರ ಮುನ್ನುಡಿ ಐಎಸ್‌ಪಿಎಲ್.
ಮುಂಬೈನಲ್ಲಿ ನಡೆದ ಟೂರ್ನಿಯಲ್ಲಿ ಬೆಂಗಳೂರು, ಮುಂಬೈ, ಹೈದರಾಬಾದ್, ಚೆನ್ನೈ, ಕೋಲ್ಕತ್ತ ಮತ್ತು ಶ್ರೀನಗರದ ತಂಡಗಳು ಕಣದಲ್ಲಿದ್ದವು. ಬಾಲಿವುಡ್ ದಿಗ್ಗಜರಾದ ಅಮಿತಾಭ್ ಬಚ್ಚನ್ (ಮಾಝಿ ಮುಂಬೈ), ಅಕ್ಷಯ್‌ಕುಮಾರ್ (ಶ್ರೀನಗರ್ ಕೆ ವೀರ್), ಹೃತಿಕ್ ರೋಷನ್ (ಕೆ.ವಿ.ಎನ್. ಬೆಂಗಳೂರು ಸ್ಟ್ರೈಕರ್ಸ್), ಸೂರ್ಯ (ಚೆನ್ನೈ ಸಿಂಗಮ್ಸ್), ರಾಮ್‌ಚರಣ್ (ಫಾಲ್ಕನ್ ರೈಸರ್ಸ್, ಹೈದರಾಬಾದ್) ಹಾಗೂ ಸೈಫ್ ಅಲಿ ಖಾನ್–ಕರೀನಾ (ಟೈಗರ್ಸ್ ಆಫ್ ಕೋಲ್ಕತ್ತ) ಅವರು ತಂಡಗಳ ಮಾಲೀಕರಾಗಿದ್ದಾರೆ.
ಯಾಸೀರ್ ಅಷ್ಟೇ ಅಲ್ಲ. ಅವರಂತಹ ಹಲವರು ಈಗ ಟೆನಿಸ್‌ಬಾಲ್ ಕ್ರಿಕೆಟ್‌ನಲ್ಲಿ ‘ಭವಿಷ್ಯ‘ದ ಕನಸು ಕಾಣುತ್ತಿದ್ದಾರೆ.
ಇದೇ ಟೂರ್ನಿಯಲ್ಲಿ ಆಡಿದ ಮಾಝಿ ಮುಂಬೈ ತಂಡದ ಅಭಿಷೇಕ್‌ಕುಮಾರ್ ದಲ್ಹೋರ್ ಅತಿ ಹೆಚ್ಚು ಮೌಲ್ಯ
(₹ 27 ಲಕ್ಷ) ಗಳಿಸಿದ ಆಟಗಾರ. ಟೂರ್ನಿಯ ನಂತರ ಅವರು, ‘ಅಬ್ ಹಮ್ ಭೀ ಬಡೇ ಸಪ್ನೇ ದೇಕ್ ಸಖತೆ ಹೈ’ (ಈಗ ನಾವೂ ದೊಡ್ಡ ಕನಸು ಕಾಣಬಹುದು)’ ಎಂದು ಹೇಳುವಾಗ ಭಾವುಕರಾಗಿದ್ದರು.
ಟೂರ್ನಿಯಲ್ಲಿ ಕೋಲ್ಕತ್ತ ತಂಡವು ಪ್ರಶಸ್ತಿ ಜಯಿಸಿತು. ಮುಂಬೈ ತಂಡ ರನ್ನರ್ಸ್ ಅಪ್ ಆಯಿತು.
ಈ ಟೂರ್ನಿಯಲ್ಲಿ ಫ್ರ್ಯಾಂಚೈಸಿಗಳು ಗಣನೀಯ ಮೊತ್ತವನ್ನೇ ಹೂಡಿವೆ. ಚೆನ್ನೈ (₹ 96.4 ಲಕ್ಷ), ಹೈದರಾಬಾದ್ (₹ 93.65ಲಕ್ಷ), ಕೋಲ್ಕತ್ತ (₹ 86.35ಲಕ್ಷ), ಮುಂಬೈ (₹84.3 ಲಕ್ಷ), ಬೆಂಗಳೂರು (₹ 77.3 ಲಕ್ಷ) ಹಾಗೂ ಶ್ರೀನಗರ (₹ 52.4 ಲಕ್ಷ) ತಂಡಗಳು ತಮ್ಮ ಆಟಗಾರರಿಗೆ ಒಳ್ಳೆಯ ಮೌಲ್ಯ ಕೊಟ್ಟು ಖರೀದಿಸಿದವು. ಇದರಿಂದಾಗಿ ಗಲ್ಲಿ ಕ್ರಿಕೆಟ್‌ನಲ್ಲಿ ಕಾಲಕ್ಷೇಪ ಮಾಡುವ ಹುಡುಗರೂ ಒಂದಿಷ್ಟು ಆದಾಯ ಗಳಿಸುವಂತಹ ಅವಕಾಶ ಲಭಿಸಿತು.
ಭಾರತದ ಬಹುತೇಕ ಎಲ್ಲ ಊರುಗಳಲ್ಲಿಯೂ ಗಲ್ಲಿ ಕ್ರಿಕೆಟ್ ನೋಡಬಹುದು. ಗೋಡೆಗೆ ಇದ್ದಿಲು, ಇಟ್ಟಿಗೆಪುಡಿ ಅಥವಾ ಬಣ್ಣದಿಂದ ಮೂರುಗೆರೆ ಎಳೆದು (ಸ್ಟಂಪ್ಸ್) 20 ಯಾರ್ಡ್ಸ್ ಪಿಚ್ ಮಾರ್ಕ್ ಮಾಡಿಕೊಂಡರೆ ಮುಗಿಯಿತು. ಆಟ ಶುರು. ಒಂದೆಡೆ ಲೆದರ್‌ಬಾಲ್ ಕ್ರಿಕೆಟ್ ವೃತ್ತಿಪರವಾಗಿ ಬೆಳೆಯುತ್ತಿದ್ದಂತೆ ಇತ್ತ ಗಲ್ಲಿ ಕ್ರಿಕೆಟ್ ಕೂಡ ಜನಪ್ರಿಯವಾಯಿತು. ಬಹುತೇಕ ಎಲ್ಲರ ಮನೆಯಲ್ಲಿಯೂ ಒಂದು ಟೆನಿಸ್‌ಬಾಲ್ ಮತ್ತು ಬ್ಯಾಟ್ ಇದ್ದೇ ಇರುತ್ತದೆ ಎನ್ನುವಷ್ಟರ ಮಟ್ಟಿಗೆ ಜನಪದವಾಗಿ ಹೋಗಿದೆ.
‘ನಾನು 17 ದಿನಗಳು ಭಾರತದಲ್ಲಿ ಪ್ರವಾಸ ಮಾಡಿದೆ. ರಾಜಸ್ಥಾನದ ಮರಳುಗಾಡಿನಲ್ಲಿ, ಹಿಮಾಚಲದ ಪದತಲಗಳಲ್ಲಿ, ಹಳ್ಳಿಯಿಂದ ದೇಶದ ರಾಜಧಾನಿಯವರೆಗೆ ನದಿ, ಕೆರೆ, ಕುಂಟೆಗಳ ಆವರಣಗಳಲ್ಲಿ ಗಲ್ಲಿ ಕ್ರಿಕೆಟ್ ವೈಭವ ನೋಡಿದೆ. ಆ ಮಕ್ಕಳೊಂದಿಗೆ ನಾನೂ ಆಡಿದೆ. ಅಲ್ಲಿ ಬರೀ ಕ್ರಿಕೆಟ್ ಆಟವಿರಲಿಲ್ಲ. ಕಲ್ಪನೆ, ಛಲ, ಉತ್ಸಾಹ ಮತ್ತು ಭಾವೋತ್ಕಟತೆಯ ಸಂಗಮವೇ ಇತ್ತು. ಅದೆಲ್ಲವೂ ಸೇರಿ ಭಾರತೀಯ ಕ್ರಿಕೆಟ್ ರೂಪುಗೊಂಡಿದೆ ಎನಿಸಿತು’ ಎಂದು ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟೀವ್ ವಾ ತಮ್ಮ ‘ದ ಸ್ಪಿರಿಟ್ ಆಫ್ ಕ್ರಿಕೆಟ್, ಇಂಡಿಯಾ’ ಕೃತಿಯಲ್ಲಿ ಬರೆದಿದ್ದಾರೆ. ಗಲ್ಲಿ ಕ್ರಿಕೆಟ್‌ನ 200ಕ್ಕೂ ಹೆಚ್ಚು ಚಿತ್ರಗಳನ್ನು ಅದರಲ್ಲಿ ಪ್ರಕಟಿಸಿದ್ದಾರೆ.
ಕ್ರಿಕೆಟ್ ತಾರೆಗಳಾಗಿ ಬೆಳಗುತ್ತಿರುವ ಹಲವಾರು ಖ್ಯಾತನಾಮರ ಆಟ ಆರಂಭವಾಗಿದ್ದು ಕೂಡ ಗಲ್ಲಿ ಕ್ರಿಕೆಟ್‌ನಿಂದಲೇ. ಬಹುಶಃ ಟೆನಿಸ್‌ಬಾಲ್ ಕ್ರಿಕೆಟ್ ಆಡಿದವರಲ್ಲಿ ಬಹುತೇಕರು ಲೆದರ್‌ಬಾಲ್ ಕ್ರಿಕೆಟ್ ಆಡಿರದೇ ಇರಬಹುದು. ಆದರೆ ಇವತ್ತು ವೃತ್ತಿಪರವಾಗಿ ವಿವಿಧ ಹಂತಗಳಲ್ಲಿ ಮಿಂಚುತ್ತಿರುವವರೆಲ್ಲರೂ ಟೆನಿಸ್‌ಬಾಲ್ ಆಡಿಯೇ ಆಡಿರುತ್ತಾರೆ. ಮಹೇಂದ್ರಸಿಂಗ್ ಧೋನಿ ಹೆಲಿಕಾಪ್ಟರ್ ಶಾಟ್ ಕಲಿತದ್ದು, ರೋಹಿತ್ ಶರ್ಮಾ ಪುಲ್‌ಶಾಟ್ ಹೊಡೆಯಲು ಆರಂಭಿಸಿದ್ದು, ಮೊಹಮ್ಮದ್ ಶಮಿ ಮೊನಚಾದ ಸ್ವಿಂಗ್ ಎಸೆತಗಳ ಮೂಲಪಾಠ ಕಲಿತದ್ದು ಇದೇ ಅಂಗಳದಿಂದ.
ಅದಕ್ಕಾಗಿಯೇ ಇದಕ್ಕೊಂದು ಸಂಘಟಿತ ರೂಪ ಕೊಡುವತ್ತ ಐಎಸ್‌ಪಿಎಲ್ ಟಿ10 ಕ್ರಿಕೆಟ್ ಟೂರ್ನಿ ಆರಂಭವಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಮುಂಬೈ, ಗೋವಾ, ಕೋಲ್ಕತ್ತ, ಬೆಂಗಳೂರು ಮತ್ತು ಮಂಗಳೂರು ಸೇರಿದಂತೆ ಹಲವೆಡೆ ಸಣ್ಣಪ್ರಮಾಣದಲ್ಲಿ ಇಂತಹ ಲೀಗ್‌ಗಳು ನಡೆಯುತ್ತಿದ್ದವು. ಆದರೆ ಐಎಸ್‌ಪಿಎಲ್ ದೊಡ್ಡ ಬಜೆಟ್‌ನಲ್ಲಿ ಆರಂಭವಾಗಿದ್ದು, ಮುಂಬರುವ ದಿನಗಳಲ್ಲಿ ವಿದೇಶಗಳಿಗೂ ವಿಸ್ತರಿಸುವತ್ತ ಯೋಜನೆ ರೂಪಿಸಿಕೊಂಡಿದೆ. ಗಲ್ಲಿ ಕ್ರಿಕೆಟ್‌ನಲ್ಲಿಯೂ ತಾರಾ ಆಟಗಾರರನ್ನು ಬೆಳೆಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ.
ಅಂತೂ ಗಲ್ಲಿ ಕ್ರಿಕೆಟ್‌ಗೂ ಒಂದು ಕಾಲ ಬಂತು!
ಕೋಟಿ ಪ್ರೇಕ್ಷಕರ ಸ್ಪಂದನೆ
ಮೊದಲ ಬಾರಿಗೆ ನಡೆದ ಐಎಸ್‌ಪಿಎಲ್ ಟೂರ್ನಿಯ ಪಂದ್ಯಗಳಿಗೆ ಪ್ರೇಕ್ಷಕರಿಂದಲೂ ಉತ್ತಮ ಸ್ಪಂದನೆ ದೊರೆತಿದೆ. ಕ್ರೀಡಾಂಗಣದಲ್ಲಿ ವೀಕ್ಷಿಸಿದ ಟಿ.ವಿ. ಮತ್ತು ಡಿಜಿಟಲ್ ವೇದಿಕೆಗಳ ಮೂಲಕ ನೇರಪ್ರಸಾರ ನೋಡಿದವರ ಸಂಖ್ಯೆಯು ಒಂದು ಕೋಟಿಗೂ ಹೆಚ್ಚು ಎಂದು ಟೂರ್ನಿಯ ಅಧಿಕೃತ ಪ್ರಸಾರಕ ಸಂಸ್ಥೆ ಸೋನಿ ಪಿಕ್ಚರ್ಸ್ ನೆಟ್‌ವರ್ಕ್ ತಿಳಿಸಿದೆ. ಇದರಲ್ಲಿ ಕ್ರೀಡಾಂಗಣದಲ್ಲಿ ಎಲ್ಲ ಪಂದ್ಯಗಳನ್ನು ವೀಕ್ಷಿಸಿದವರ ಸಂಖ್ಯೆಯು ಐದು ಲಕ್ಷ ದಾಟಿದೆ. ಜನವರಿಯಲ್ಲಿ 2ನೇ ಆವೃತ್ತಿ ಮೊದಲ ಆವೃತ್ತಿಯ ಯಶಸ್ಸಿನಿಂದ ತುಂಬು ಆತ್ಮವಿಶ್ವಾಸದಲ್ಲಿರುವ ಆಯೋಜಕರು ಎರಡನೇ ಆವೃತ್ತಿಗೆ ಸಿದ್ಧರಾಗಿದ್ದಾರೆ. 2025ರ ಜನವರಿ 31ರಿಂದ 9ರವರೆಗೆ ಟೂರ್ನಿ ನಡೆಯಲಿದೆ. ಇದೇ ವರ್ಷದ ನವೆಂಬರ್‌ನಲ್ಲಿ ಮಧ್ಯಪೂರ್ವ ದೇಶಗಳಿಗೂ ಟೂರ್ನಿಯನ್ನು ವಿಸ್ತರಿಸಲಾಗುತ್ತಿದೆ.
ನಿರೀಕ್ಷೆಗೂ ಮೀರಿದ ಸ್ಪಂದನೆ ದೊರೆತಿದೆ. ಜನರ ಗಲ್ಲಿ ಕ್ರಿಕೆಟ್ ಪ್ರೀತಿಯು ಅಮೋಘವಾದದ್ದು. ನಮ್ಮ ದೇಶದಲ್ಲಿ ಕ್ರಿಕೆಟ್‌ಗೆ ಇರುವ ಜನಪ್ರಿಯತೆಯ ದ್ಯೋತಕ ಇದು.-ಸೂರಜ್ ಸಮತ್, ಲೀಗ್ ಕಮಿಷನರ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.