ಹುಬ್ಬಳ್ಳಿ: ಇಲ್ಲಿನರಾಜನಗರ ಕೆಎಸ್‌ಸಿಎ ಮೈದಾನದಲ್ಲಿ ನಡೆದ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಭಾರತ ಎ ತಂಡವು ಪ್ರವಾಸಿ ಶ್ರೀಲಂಕಾ ವಿರುದ್ಧ 152 ರನ್ ಗಳಿಂದ ಗೆಲುವು ಸಾಧಿಸುವ ಮೂಲಕ ಸರಣಿಯನ್ನು 2-0 ಅಂತರದಿಂದ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು.
430 ರನ್ ಗಳ ಕಠಿಣ ಸವಾಲು ಪಡೆದಿದ್ದ ಶ್ರೀಲಂಕಾ ಎ ತಂಡವು ಪಂದ್ಯದ 4ನೇ ಹಾಗೂ ಕೊನೆಯ ದಿನವಾದ ಸೋಮವಾರ ತನ್ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ 277ರನ್ ಗಳಿಸುವಷ್ಟಕ್ಕೆ ಆಲೌಟ್ ಆಯಿತು.
ನಿನ್ನೆ ಆಟ ಮುಗಿದಾಗ ಶ್ರೀಲಂಕಾ 51 ಓವರ್ ಗಳಲ್ಲಿ 7 ವಿಕೆಟ್ ಗೆ 210 ರನ್ ಗಳಿಸಿತ್ತು.
ಭಾರತದ ಪರವಾಗಿ ಲೆಗ್ ಸ್ಪಿನ್ನರ್ ರಾಹುಲ್ ಚಹರ್ 112 ರನ್ ನೀಡಿ 5 ವಿಕೆಟ್ ಪಡೆದರು.
3 ನೇ ಕ್ರಮಾಂಕದ ಬ್ಯಾಟ್ಸ್‌ಮನ್ ಬನುಕಾ ರಾಜಪಕ್ಷ ಶತಕ (110) ರನ್ )ದ ಹೊರತಾಗಿಯೂ ಶ್ರೀಲಂಕಾ ಸೋಲಿನ ಸುಳಿಗೆ ಸಿಲುಕಿತು. ಕಮಿಂದು ಮೆಂಡಿಸ್ 46 ರನ್, ವಿಶ್ವಾ ಫರ್ನಾಂಡೊ 32 ರನ್ ಗಳಿಸಿದರು.
ಭಾರತ ಎ ಮೊದಲ ಇನ್ನಿಂಗ್ಸ್ ನಲ್ಲಿ 269 ರನ್ ಗಳಿಸಿತ್ತು. ಶ್ರೀಲಂಕಾ ಎ ಮೊದಲ ಇನ್ನಿಂಗ್ಸ್ ನಲ್ಲಿ 212 ರನ್ ಗಳಿಸಿ ಆತಿಥೇಯರಿಗೆ 56 ರನ್ ಗಳ ಮುನ್ನಡೆ ಬಿಟ್ಟು ಕೊಟ್ಟಿತ್ತು. ಭಾರತ ಎ ದ್ವಿತೀಯ ಇನ್ನಿಂಗ್ಸ್‌ನಲ್ಲಿ 372 ರನ್ ಗಳಸಿ ಶ್ರೀಲಂಕಾ ಗೆ 430ರನ್ ಗಳ ಕಠಿಣ ಗುರಿ ನೀಡಿತ್ತು.
2 ಪಂದ್ಯಗಳ ಟೆಸ್ಟ್ ಸರಣಿ ಯಲ್ಲಿ ಭಾರತ ಎ ತಂಡವು ಬೆಳಗಾವಿಯಲ್ಲಿ ನಡೆದ ಮೊದಲ ಚತುರ್ದಿನ ಪಂದ್ಯವನ್ನು ಭಾರತ ಎ ಇನ್ನಿಂಗ್ಸ್ ಹಾಗೂ 205 ರನ್ ಗಳ ಅಂತರದಿಂದ ಜಯಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.