ಪುಣೆ: ಭಾರತ ತಂಡವು ಸ್ಪಿನ್‌ನಲ್ಲಿ ಉತ್ತಮವಾಗಿರಬಹುದು. ಆದರೂ ಸ್ಪಿನ್ ಎದುರು ಆಡಲು ಸಮರ್ಥವಾಗಿಲ್ಲ.
ಅವರಿಗೆ ಸ್ವಿಂಗ್ ಬೌಲಿಂಗ್ ಎದುರಿನ ಆಟ ನಿರ್ವಹಣೆ ಕೂಡ ಅಷ್ಟಕ್ಕಷ್ಟೇ ಎಂಬುದೂ ಖಚಿತ. ಈಚೆಗೆ ಬೆಂಗಳೂರಿನಲ್ಲಿ ನಡೆದಿದ್ದ ನ್ಯೂಜಿಲೆಂಡ್ ಎದುರಿನ ಮೊದಲ ಟೆಸ್ಟ್‌ನಲ್ಲಿ ಅನುಭವಿಸಿದ ಸೋಲು ಇದಕ್ಕೆ ಸಾಕ್ಷಿ. ಉಪಖಂಡದಲ್ಲಿ ಚುರುಕಾದ ಪಾದಚಲನೆಯ ಪಾರಂಗತರೆನಿಸಿಕೊಂಡಿರುವ ತಂಡಕ್ಕೆ ಸ್ಪಿನ್ ಬೌಲಿಂಗ್ ಎಂಬುದು ಉಪಜೀವನವೇ ಆಗಿರಬೇಕಿತ್ತು.
ಒಂದೊಮ್ಮೆ ಈ ಮಾತೇ ಸತ್ಯವಾಗಿದ್ದರೆ, ಶುಕ್ರವಾರ ಅವರು ಎಡಗೈ ಸ್ಪಿನ್ನರ್ ಮಿಚೆಲ್ ಸ್ಯಾಂಟನರ್‌ಗೆ ಏಳು ವಿಕೆಟ್ ಮತ್ತು ಸಾಂದರ್ಭಿಕ ಆಫ್‌ಸ್ಪಿನ್ನರ್ ಗ್ಲೆನ್ ಫಿಲಿಪ್ಸ್‌ಗೆ ಎರಡು ವಿಕೆಟ್‌ಗಳ ಕಾಣಿಕೆ ಕೊಡುತ್ತಿರಲಿಲ್ಲ. ಇದರಿಂದಾಗಿ 2012ರ ನಂತರ ತವರಿನಲ್ಲಿ ಒಂದೂ ಟೆಸ್ಟ್ ಸರಣಿ ಸೋಲದ ಭಾರತದ ದಾಖಲೆಗೆ ಈಗ ಕುತ್ತು ಬಂದಿದೆ.
ಕಳೆದ 13 ವರ್ಷಗಳಲ್ಲಿ ಕೆಲವು ಸರಣಿಗಳಲ್ಲಿ ಬ್ಯಾಟರ್‌ಗಳು ಮಿಂಚಿದರು. ಇನ್ನೂ ಕೆಲವು ಸರಣಿಗಳಲ್ಲಿ ಬೌಲರ್‌ಗಳು ಪಾರಮ್ಯ ಮೆರೆದರು. ಅದರಿಂದಾಗಿ ಭಾರತ ತಂಡವು ಸೋಲು ತಪ್ಪಿಸಿಕೊಳ್ಳುತ್ತಲೇ ಬಂದಿದೆ. ಆದರೆ ಇದೀಗ ಪ್ರವಾಸಿ ತಂಡದ ಸ್ಪಿನ್ನರ್‌ಗಳು ಚಾರಿತ್ರಿಕ ಸಾಧನೆಯ ಹೊಸ್ತಿಲಲ್ಲಿದ್ದಾರೆ. ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ (ಎಂಸಿಎ) ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಭಾರತ ತಂಡವು ಮೊದಲ ಇನಿಂಗ್ಸ್‌ನಲ್ಲಿ 102 ರನ್‌ಗಳ ಭಾರಿ ಹಿನ್ನಡೆ ಅನುಭವಿಸಿದೆ.
ಗುರುವಾರ ನ್ಯೂಜಿಲೆಂಡ್ ತಂಡವನ್ನು 259 ರನ್‌ಗಳ ಮೊತ್ತಕ್ಕೆ ನಿಯಂತ್ರಿಸಲು ವಾಷಿಂಗ್ಟನ್ ಸುಂದರ್ (59ಕ್ಕೆ7) ಮಾಡಿದ್ದ ಕೆಲಸವನ್ನೇ ಎರಡನೇ ದಿನದಾಟದಲ್ಲಿ ಸ್ಯಾಂಟನರ್ ಮಾಡಿದರು. ಭಾರತ ತಂಡವು ಕೇವಲ 156 ರನ್‌ಗಳಿಗೆ ಕುಸಿಯಿತು. ಎರಡನೇ ಇನಿಂಗ್ಸ್ ಆರಂಭಿಸಿದ ಪ್ರವಾಸಿ ಬಳಗವು ನಾಯಕ ಟಾಮ್ ಲೇಥಮ್ (86; 133ಎ) ಅವರ ಆಟದ ಬಲದಿಂದ ದಿನದಾಟದ ಕೊನೆಗೆ 53 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 198 ರನ್ ಗಳಿಸಿತು. ಇದರೊಂದಿಗೆ ಒಟ್ಟು 301 ರನ್‌ಗಳ ಮುನ್ನಡೆ ಸಾಧಿಸಿದೆ. ಈ ಇನಿಂಗ್ಸ್‌ನಲ್ಲಿಯೂ ತಮಿಳುನಾಡಿನ ವಾಷಿಂಗ್ಟನ್ (56ಕ್ಕೆ4) ಮತ್ತು ಅಶ್ವಿನ್ (64ಕ್ಕೆ1) ವಿಕೆಟ್‌ಗಳನ್ನು ಗಳಿಸಿದರು.
ಪಂದ್ಯದಲ್ಲಿ ಇನ್ನೂ ಮೂರು ದಿನಗಳು ಬಾಕಿಯಿವೆ. ತ್ವರಿತವಾಗಿ ಕ್ಷೀಣಿಸುತ್ತಿರುವ ಪಿಚ್‌ನಲ್ಲಿ ಬ್ಯಾಟಿಂಗ್ ಸುಲಭವಲ್ಲ. ಆದ್ದರಿಂದ ಶನಿವಾರ ಸಂಜೆಯ ಹೊತ್ತಿಗೆ ಪಂದ್ಯ ಮುಗಿದರೂ ಅಚ್ಚರಿಯಿಲ್ಲ.
ಪಂದ್ಯದಲ್ಲಿ ಸೋಲು ತಪ್ಪಿಸಿಕೊಳ್ಳಬೇಕಾದರೆ ಆತಿಥೇಯರು ಅಪಾರ ಪರಿಶ್ರಮ ಮತ್ತು ತಾಳ್ಮೆಯಿಂದ ಬ್ಯಾಟಿಂಗ್ ಮಾಡಬೇಕು. ಆಗ ಮಾತ್ರ ಐದು ವರ್ಷಗಳ ನಂತರ ನ್ಯೂಜಿಲೆಂಡ್ ತಂಡವು ವಿದೇಶಿ ನೆಲದಲ್ಲಿ ಟೆಸ್ಟ್ ಸರಣಿ ಜಯಿಸುವುದನ್ನು ತಡೆಯಲು ಸಾಧ್ಯವಾಗುತ್ತದೆ.
ಆದರೆ, ಸ್ಯಾಂಟನರ್ ಅವರನ್ನು ಎದುರಿಸಿ ನಿಲ್ಲುವ ಸವಾಲು ಅವರ ಮುಂದಿದೆ. ಸದ್ಯ ನ್ಯೂಜಿಲೆಂಡ್ ತಂಡದ ಸೂಪರ್‌ಮ್ಯಾನ್ ಆಗಿರುವ ಸ್ಯಾಂಟನರ್ (28 ಟೆಸ್ಟ್‌ಗಳಲ್ಲಿ 42.16ರ ಸರಾಸರಿಯಲ್ಲಿ ವಿಕೆಟ್ ಗಳಿಸಿದ್ದಾರೆ) ಅವರನ್ನು ಪ್ರಮುಖ ಸ್ಪಿನ್ನರ್ ಎಜಾಜ್ ಪಟೇಲ್ ಅವರಿಗೆ ಜೊತೆ ನೀಡಲು ಆಯ್ಕೆ ಮಾಡಲಾಗಿತ್ತು. ಆದರೆ ಭಾರತದ ಬೌಲರ್‌ಗಳು ಮೊದಲ ಇನಿಂಗ್ಸ್‌ನಲ್ಲಿ ಅನುಸರಿಸಿದ್ದ ತಂತ್ರಗಳನ್ನು (ನ್ಯೂಜಿಲೆಂಡ್ ಬ್ಯಾಟಿಂಗ್ ಕೋಚ್ ಲೂಕ್ ರಾಂಚಿ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು) ಅನುಸರಿಸಿದರು.
ಸ್ಯಾಂಟನರ್ ಅವರು ಪ್ರತಿ ಗಂಟೆಗೆ 75 ರಿಂದ 95 ಕಿಲೋಮೀಟರ್ಸ್ ವೇಗದ ಎಸೆತಗಳನ್ನು ಪ್ರಯೋಗಿಸಿದರು. ಲೆಂಗ್ತ್‌ನಲ್ಲಿ ತಾವೇ ಆಯ್ದ ಕೆಲವು ಪ್ಯಾಚ್‌ಗಳಲ್ಲಿ ಚೆಂಡು ಭೂಸ್ಪರ್ಷ ಮಾಡುವಂತೆ ನೋಡಿಕೊಂಡರು. ಅದು ಅವರಿಗೆ ಹೆಚ್ಚು ಲಾಭ ನೀಡಿತು. ಗುರುವಾರ ಸಂಜೆ ರೋಹಿತ್ ಶರ್ಮಾ ಅವರನ್ನು ಟಿಮ್ ಸೌಥಿ ಕ್ಲೀನ್‌ಬೌಲ್ಡ್ ಮಾಡಿದ್ದರು. ಉಳಿದ 9 ವಿಕೆಟ್‌ಗಳನ್ನು ಸ್ಯಾಂಟನರ್ ಮತ್ತು ಫಿಲಿಪ್ಸ್ ಹಂಚಿಕೊಂಡರು. ಅದರಲ್ಲಿ ಮೂರು ವಿಕೆಟ್‌ಗಳು (ವಿರಾಟ್ ಕೊಹ್ಲಿ, ರಿಷಭ್ ಪಂತ್ ಮತ್ತು ಸರ್ಫರಾಜ್ ಖಾನ್) ಉಡುಗೊರೆಯಂತೆ ಒಲಿದವು.
ರಾಹುಲ್ ದ್ರಾವಿಡ್ ಅವರು 2010ರಲ್ಲಿ ಇಂಗ್ಲೆಂಡ್‌ನ ಕೆವಿನ್ ಪೀಟರ್ಸನ್ ಅವರಿಗೆ ಸ್ಪಿನ್ ಎದುರಿಸುವ ಕುರಿತು ಬರೆದ ಪತ್ರ ನೆನಪಿದೆಯಲ್ಲವೇ? ಆ ಪತ್ರ ಮತ್ತು ಅದರಿಂದ ಕಲಿತ ಅಂಶಗಳು 2012ರಲ್ಲಿ ಇಂಗ್ಲೆಂಡ್ ತಂಡವು ಭಾರತದಲ್ಲಿ ಟೆಸ್ಟ್ ಸರಣಿ ಜಯಿಸಲು ಸಹಾಯಕವಾಗಿದ್ದವಲ್ಲವೇ?
ಬಹುಶಃ ದ್ರಾವಿಡ್ ಅವರು ಈಗ ಮತ್ತೆ ಪತ್ರಗಳನ್ನು ಬರೆಯಲು ಶುರು ಮಾಡಬೇಕೆನೋ?
‘ಸ್ಪಿನ್ ಎದುರು ರಚಿನ್ ಉತ್ತಮ ಬ್ಯಾಟರ್’
ಬೆಂಗಳೂರು: ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಆಟಗಾರ ರಚಿನ್ ರವೀಂದ್ರ ಅವರು ಸ್ಪಿನ್ ಬೌಲಿಂಗ್ ಅನ್ನು ಬಹಳ ಚೆನ್ನಾಗಿ ಆಡುತ್ತಾರೆ. ಪಕ್ಕಾ ಭಾರತದ ಬ್ಯಾಟರ್ ರೀತಿಯಲ್ಲಿ ಅವರು ಆಡುತ್ತಾರೆ ಎಂದು ಜಿಯೊ ಸಿನಿಮಾ ಮತ್ತು ಸ್ಪೋರ್ಟ್ಸ್ 18 ಕ್ರಿಕೆಟ್ ಪರಿಣತ ಆಕಾಶ್ ಚೋಪ್ರಾ ಶ್ಲಾಘಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ರಚಿನ್ ಶತಕ ಗಳಿಸಿದ್ದರು. ಪುಣೆಯಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಮೊದಲ ಇನಿಂಗ್ಸ್ ನಲ್ಲಿ ರಚಿನ್ ಅರ್ಧಶತಕ ಗಳಿಸಿದ್ದರು.
‘ಅವರು ಬಹಳ ಸುಂದರವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಅವರ ಶೈಲಿ ಸೊಗಸಾಗಿದೆ. ಹೊಡೆತ ಗಳು ನವಿರಾಗಿವೆ. ಪಾದಚಲನೆ ಅದ್ಭುತ ವಾಗಿದೆ. ರಕ್ಷಣಾತ್ಮಕ ವಾಗಿ ಆಡುವ ಏಕಾಗ್ರತೆ ಮತ್ತು ನಿಯಂತ್ರಣ ಅಮೋಘವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಅವರಲ್ಲಿ ಅಪಾರ ಆತ್ಮವಿಶ್ವಾಸ ಇದೆ’ ಎಂದರು.
‘ಹಲವು ವಿದೇಶಿ ಆಟಗಾರರು ಭಾರತಕ್ಕೆ ಮೊದಲ ಸಲ ಬಂದಾಗ ಉತ್ತಮ ಆಟವಾಡಲು ಕಷ್ಟಪಡುತ್ತಾರೆ. ಆದರೆ ರಚಿನ್ ಲೀಲಾಜಾಲವಾಗಿ ಆಡುತ್ತಿದ್ದಾರೆ’ ಎಂದು ಆಕಾಶ್ ರೌಂಡ್ ಟೇಬಲ್ ಸಂವಾದದಲ್ಲಿ ಅಭಿಪ್ರಾಯಪಟ್ಟರು.
ವಿರಾಟ್ ಔಟ್; ಬೌಲರ್‌ಗೆ ಅಚ್ಚರಿ: ಕಿವೀಸ್ ಸ್ಪಿನ್ನರ್ ಮಿಚೆಲ್ ಸ್ಯಾಂಟನರ್ ಅವರಿಗೆ ಭಾರತ ತಂಡದ ಬ್ಯಾಟಿಂಗ್ ಚಾಂಪಿಯನ್ ವಿರಾಟ್ ಕೊಹ್ಲಿ ಅವರ ವಿಕೆಟ್ ಗಳಿಸಿದ ಖುಷಿಯ ಜೊತೆಗೆ ಅಚ್ಚರಿಯನ್ನೂ ಮೂಡಿಸಿದೆ.
‘ಕೊಹ್ಲಿ ಅವರು ಫುಲ್‌ಟಾಸ್ ಎಸೆತಕ್ಕೆ ಔಟಾಗಿದ್ದು ನನಗ ಬಹಳ ಆಶ್ಚಯವಾಗಿದೆ. ಅಂತಹ ಎಸೆತಗಳನ್ನು ಅವರು ಎಂದಿಗೂ ತಪ್ಪುವುದಿಲ್ಲ’ ಎಂದು ಸ್ಯಾಂಟನರ್ ಅವರು ದಿನದಾಟದ ನಂತರದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.