ನವದೆಹಲಿ: ಹೆಚ್ಚು ಪಂದ್ಯಗಳನ್ನು ಆಡಿದರಷ್ಟೇ ಹೆಚ್ಚು ತಿಳಿವಳಿಕೆ ಇರುತ್ತದೆ ಎಂಬುದು ತಪ್ಪು ಕಲ್ಪನೆ ಎಂದು ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ. ಪ್ರಸಾದ್ ತಮ್ಮ ಟೀಕಾಕಾರಿಗೆ ತಿರುಗೇಟು ನೀಡಿದ್ದಾರೆ.
ಭಾರತ ತಂಡವು ವಿಶ್ವಕಪ್ ಸೆಮಿಫೈನಲ್‌ನಲ್ಲಿ ಸೋತ ನಂತರ ಮತ್ತು ವೆಸ್ಟ್ ಇಂಡೀಸ್ ಪ್ರವಾಸಕ್ಕೆ ತಂಡದ ಆಯ್ಕೆಯ ನಂತರ ಪ್ರಸಾದ್ ವಿರುದ್ಧ ಕೆಲವು ದಿಗ್ಗಜ ಕ್ರಿಕೆಟಿಗರು ಟೀಕೆ ಮಾಡಿದ್ದರು. ‘ಆಯ್ಕೆ ಸಮಿತಿಯಲ್ಲಿ ಪ್ರಸಾದ್ ಸೇರಿ ಇರುವ ಐವರು ಆಟಗಾರರು ಆಡಿದ ಟೆಸ್ಟ್‌ಗಳ ಸಂಖ್ಯೆಯನ್ನು ಕೂಡಿಸಿದರೂ 13 ದಾಟುವುದಿಲ್ಲ’ ಎಂದು ಸುನಿಲ್ ಗಾವಸ್ಕರ್ ಮತ್ತಿತರರು ಟೀಕಿಸಿದ್ದರು. ಈ ಕುರಿತು ಪ್ರಸಾದ್ ಪ್ರತಿಕ್ರಿಯಿಸಿದ್ದಾರೆ.
‘ನಮ್ಮ ಸಮಿತಿಯ ಸದಸ್ಯರು ಆಡಿರುವ ಪಂದ್ಯಗಳ ಸಂಖ್ಯೆಯ ಬಗ್ಗೆ ಪದೇ ಪದೇ ಲೇವಡ ಮಾಡಲಾಗುತ್ತಿದೆ. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ ಮುಖ್ಥಸ್ಥರಗಿರುವ ಏಡ್ ಸ್ಮಿತ್ ಅವರು ಕೇವಲ ಒಂದು ಟೆಸ್ಟ್ ಪಂದ್ಯ ಅಡಿದವರು. ಕ್ರಿಕೆಟ್ ಆಸ್ಟ್ರೇಲಿಯಾದ ಮುಖ್ಯಸ್ಥ ಟ್ರೆವರ್ ಹಾನ್ಸ್ ಅವರು ಅಲ್ಲಿಯ ಆಯ್ಕೆ ಸಮಿತಿ ಮುಖ್ಯಸ್ಥರಾಗಿದ್ದರು’ ಎಂದು ವಿವರಿಸಿದರು.
‘ಹಿರಿಯ ಕ್ರಿಕೆಟಿಗರ ಬಗ್ಗೆ ನನಗೆ ಅಪಾರ ಗೌರವ ಇದೆ. ಅವರ ಎಲ್ಲ ಅಭಿಪ್ರಾಯಗಳನ್ನೂ ಗೌರವಿಸುತ್ತೇನೆ. ಅವರ ಟೀಕೆಗಳು ಮತ್ತು ಸಲಹೆಗಳನ್ನು ನಮಗೆ ಮನನೋಯಿಸಿಲ್ಲ. ಬದಲಾಗಿ ಅವುಗಳನ್ನು ನಮ್ಮ ಸಮಿತಿಯನ್ನು ಸದೃಢಗೊಳಿಸಲು ಬಳಸಿಕೊಂಡಿದ್ದೇವೆ’ ಎಂದರು.
‘ವಿರಾಟ್ ಕೊಹ್ಲಿ ಮತ್ತು ರವಿಶಾಸ್ತ್ರಿ ಅವರು ಭಾರತ ತಂಡದ ನಾಯಕ ಮತ್ತು ಕೋಚ್ ಆಗಿದ್ದಾರೆ. ರಾಹುಲ್ ದ್ರಾವಿಡ್ ಅವರು ‘ಎ’ ತಂಡಗಳ ಕೋಚ್ ಆಗಿದ್ದಾರೆ. ಅವರೆಲ್ಲರೂ ತಮ್ಮ ಕರ್ತವ್ಯವನ್ನು ನಿಭಾಯಿಸುತ್ತಿದ್ದಾರೆ. ಅದೇ ರೀತಿ ನಾವು ಆಯ್ಕೆಗಾರರಾಗಿ ನಮ್ಮ ಹೊಣೆಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದೇವೆ. ನಮ್ಮ ಹಾಗೂ ತಂಡದ ನಾಯಕ, ಕೋಚ್‌ಗಳ ನಡುವೆ ನಡೆಯುವ ಮಾತುಕತೆಯು ನಾಲ್ಕು ಗೋಡೆಗಳ ನಡುವೆ ಇರುತ್ತವೆ. ಅದನ್ನು ದಾಟಿ ಸಾರ್ವಜನಿಕ ವಲಯದಲ್ಲಿ ಹರಿದಾಡಬಾರದು’ ಎಂದು ಪ್ರಸಾದ್ ಹೇಳಿದರು.
‘ನಮ್ಮ ಸಮಿತಿಯ ಕಾರ್ಯನಿರ್ವಹಣೆಯ ಬಗ್ಗೆ ಸಂತೃಪ್ತಿ ಇದೆ. ದೇಶದ ಪ್ರತಿಯೊಂದು ಭಾಗದಲ್ಲಿಯೂ ನಾವು ಸಂಚರಿಸಿದ್ದೇವೆ. ದೇಶಿ ಕ್ರಿಕೆಟ್‌ನಲ್ಲಿ ಹೊಸ ಪ್ರತಿಭೆಗಳನ್ನು ಗುರುತಿಸಿದ್ದೇವೆ. ಭಾರತ ‘ಎ’ ಮತ್ತು ಸೀನಿಯರ್ ತಂಡಗಳಿಗೆ ಹೊಸ ಆಟಗಾರರನ್ನು ಆಯ್ಕೆ ಮಾಡಿದ್ದೇವೆ. ನಮ್ಮಿಂದ ಆಯ್ಕೆಯಾದ ಭಾರತ ತಂಡವು 13 ಟೆಸ್ಟ್ ಸರಣಿಗಳಲ್ಲಿ 11ರಲ್ಲಿ ಜಯಿಸಿದೆ. ಹೋದ ಮೂರು ವರ್ಷಗಳಿಂದ ಐಸಿಸಿ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿದೆ. ಏಕದಿನ ಕ್ರಿಕೆಟ್‌ನಲ್ಲಿಯೂ ಶೇ 80–85ರಷ್ಟು ಯಶಸ್ಸು ಗಳಿಸಿದ್ದೇವೆ. ಚಾಂಪಿಯನ್ಸ್ ಟ್ರೋಫಿ, ಎರಡು ಏಷ್ಯಾ ಕಪ್ ಟೂರ್ನಿಗಳಲ್ಲಿ ತಂಡವು ಫೈನಲ್ ಪ್ರವೇಶಿಸಿತ್ತು’ ಎಂದು ವಿವರಿಸಿದರು.
‘ ತಂಡಗಳ ಬೆಂಚ್ ಶಕ್ತಿಯನ್ನು ಮತ್ತಷ್ಟು ಸದೃಢಗೊಳಿಸಿದ್ದೇವೆ. ನಮ್ಮ ಅವಧಿಯಲ್ಲಿ ಸುಮಾರು 35 ಹೊಸ ಪ್ರತಿಭೆಗಳು ರಾಷ್ಟ್ರೀಯ ತಂಡಗಳಲ್ಲಿ ಆಡುವ ಅವಕಾಶ ಪಡೆದರು. ಮೂರು ಮಾದರಿಗಳಲ್ಲಿಯೂ ಉತ್ತಮ ಸಾಧನೆ ದಾಖಲಾಗಿದೆ. ಮುಂಬರಲಿರುವ ಸಮಿತಿಗೆ ಅಧಿಕಾರವನ್ನು ಹಸ್ತಾಂತರಿಸಲು ನಾವು ಸಂತೋಷದಿಂದಲೇ ಸಿದ್ಧರಾಗಿದ್ದೇವೆ’ ಎಂದು ಪ್ರಸಾದ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.