ADVERTISEMENT

ಬಾಂಗ್ಲಾ ವಿರುದ್ಧ ಟಿ20 ಎರಡನೇ ಪಂದ್ಯ: ಸರಣಿ ಗೆಲುವಿಗೆ ಭಾರತಕ್ಕೆ ಅವಕಾಶ

ಪಿಟಿಐ
Published 8 ಅಕ್ಟೋಬರ್ 2024, 15:33 IST
Last Updated 8 ಅಕ್ಟೋಬರ್ 2024, 15:33 IST
<div class="paragraphs"><p>ಬಾಂಗ್ಲಾದೇಶ ವಿರುದ್ಧ ನವದೆಹಲಿಯಲ್ಲಿ ನಡೆಯಲಿರುವ ಪಂದ್ಯಕ್ಕೆ ಮುನ್ನಾದಿನವಾದ ಮಂಗಳವಾರ ರಿಯಾನ್ ಪರಾಗ್, ರವಿ ಬಿಷ್ಣೋಯಿ, ಸಂಜು ಸ್ಯಾಮ್ಸನ್ ಅವರು ಅಭ್ಯಾಸದ ಸಂದರ್ಭದಲ್ಲಿ ತಮಾಷೆಯ ಪ್ರಸಂಗದಲ್ಲಿ ತೊಡಗಿದ್ದು ಹೀಗೆ... ‍</p></div>

ಬಾಂಗ್ಲಾದೇಶ ವಿರುದ್ಧ ನವದೆಹಲಿಯಲ್ಲಿ ನಡೆಯಲಿರುವ ಪಂದ್ಯಕ್ಕೆ ಮುನ್ನಾದಿನವಾದ ಮಂಗಳವಾರ ರಿಯಾನ್ ಪರಾಗ್, ರವಿ ಬಿಷ್ಣೋಯಿ, ಸಂಜು ಸ್ಯಾಮ್ಸನ್ ಅವರು ಅಭ್ಯಾಸದ ಸಂದರ್ಭದಲ್ಲಿ ತಮಾಷೆಯ ಪ್ರಸಂಗದಲ್ಲಿ ತೊಡಗಿದ್ದು ಹೀಗೆ... ‍

   

ಪಿಟಿಐ ಚಿತ್ರ

ನವದೆಹಲಿ: ಕೆಲವು ಅನುಭವಿ ಆಟಗಾರರ ಗೈರಿನಲ್ಲೂ ಭಾರತ ತಂಡ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಸದೆಬಡಿದಿತ್ತು. ಬುಧವಾರ ನವದೆಹಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿರುವ ಎರಡನೇ ಪಂದ್ಯದಲ್ಲಿಇವೆರಡು ತಂಡಗಳು ಮುಖಾಮುಖಿಯಾಗುವಾಗಲೂ ಫಲಿತಾಂಶದಲ್ಲಿ ಬದಲಾವಣೆಯಾಗುವ ಸಾಧ್ಯತೆ ಕಡಿಮೆ.

ADVERTISEMENT

ಆತಿಥೇಯ ತಂಡದ ಯುವ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದರಿಂದ ಪ್ರಮುಖ ಆಟಗಾರರ ಗೈರುಹಾಜರಿ  ಎದ್ದುಕಾಣಲಿಲ್ಲ. ಬಾಂಗ್ಲಾದೇಶ ಯಾವುದೇ ಹಂತದಲ್ಲಿ ಪ್ರತಿರೋಧ ಒಡ್ಡುವ ರೀತಿ ಆಡಲಿಲ್ಲ.

ರಿಷಭ್ ಪಂತ್‌, ಅಕ್ಷರ್ ಪಟೇಲ್ ಮತ್ತು ಜಸ್‌ಪ್ರೀತ್ ಬೂಮ್ರಾ ಅಂಥ ಪ್ರಮುಖ ಆಟಗಾರರಿಗೆ ಈ ಸರಣಿಗೆ ವಿಶ್ರಾಂತಿ ನೀಡಲಾಗಿದೆ. ಆದರೆ ನಿಯಮಿತ ಓವರುಗಳ ಕ್ರಿಕೆಟ್‌ನಲ್ಲಿ ಭಾರತದ ಬ್ಯಾಟಿಂಗ್ ಆಳವಾಗಿರುವುದು, ಗ್ವಾಲಿಯರ್‌ನ ಮೊದಲ ಪಂದ್ಯದಲ್ಲಿ ಮತ್ತೆ ಸಾಬೀತಾಯಿತು. ತಂಡ ಏಳು ವಿಕೆಟ್‌ಗಳ ಅಧಿಕಾರಯುತ ಜಯದಾಖಲಿಸಿತು.

ಭಾನುವಾರದ ಆ ಪಂದ್ಯದಲ್ಲಿ ಗಮನಸೆಳೆದವರಲ್ಲಿ ಒಬ್ಬರು ಸಂಜು ಸ್ಯಾಮ್ಸನ್‌. ಸರಣಿಯ ಮೂರೂ ಪಂದ್ಯಗಳಿಗೆ ಅವರೇ ಆರಂಭ ಆಟಗಾರರಾಗಿರುತ್ತಾರೆ ಎಂದು ನಾಯಕ ಸೂರ್ಯಕುಮಾರ್ ಯಾದವ್ ಖಚಿತಪಡಿಸಿದ್ದರು. 2015ರಲ್ಲಿ ಮೊದಲ ಬಾರಿ ತಂಡಕ್ಕೆ ಪದಾರ್ಪಣೆ ಮಾಡಿದ ಅವರು ನಿಯಮಿತವಾಗಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಇದಕ್ಕೆ ಅಸ್ಥಿರ ಪ್ರದರ್ಶನವೂ ಕಾರಣ. ಮಧ್ಯಮ ಕ್ರಮಾಂಕದಲ್ಲಿ ಆಡುವ ಅವರು ಗ್ವಾಲಿಯರ್‌ನಲ್ಲಿ 19 ಎಸೆತಗಳಲ್ಲಿ 29 ರನ್ ಗಳಿಸಿದ್ದರು.

ಪವರ್‌ಪ್ಲೇಯಲ್ಲಿ ಆರಾಮವಾಗಿ ಆಡಿದ ಅವರು ಉತ್ತಮ ಆರಂಭವನ್ನು ದೊಡ್ಡ ಮೊತ್ತವಾಗಿ ಬೆಳೆಸಲಿಲ್ಲ. ಮೊದಲ ಆಯ್ಕೆಯ ಆರಂಭ ಆಟಗಾರರಾದ ಯಶಸ್ವಿ ಜೈಸ್ವಾಲ್ ಮತ್ತು ಶುಭಮನ್ ಗಿಲ್ ಅವರಿಗೆ ಈ ಸರಣಿಗೆ ವಿಶ್ರಾಂತಿ ನೀಡಿರುವ ಕಾರಣ ಸ್ಯಾಮ್ಸನ್ ಮತ್ತು ‘ಪವರ್‌ ಹಿಟ್ಟರ್‌’ ಅಭಿಷೇಕ್ ಶರ್ಮಾ ಅವರಿಗೆ ತಮ್ಮ ಸಾಮರ್ಥ್ಯ ತೋರಲು ಇದು ಸದವಕಾಶವಾಗಿದೆ.

ಪಂತ್‌ ಅನುಪಸ್ಥಿತಿಯಲ್ಲಿ ವಿಕೆಟ್‌ ಕೀಪರ್ ಆಗಿ ತಮ್ಮ ಸ್ಥಾನ ಗಟ್ಟಿಗೊಳಿಸಲೂ 29 ವರ್ಷ ವಯಸ್ಸಿನ ಸ್ಯಾಮ್ಸನ್ ಅವರಿಗೆ ಇದು ಸುವರ್ಣಾವಕಾಶ.

ಮೊದಲ ಪಂದ್ಯದಲ್ಲಿ ನಡೆಸಿದ ಸಂಯೋಜನೆಗಳು ಫಲಪ್ರದವಾದ ಕಾರಣ, ಭಾರತ ಎರಡನೇ ಪಂದ್ಯಕ್ಕೆ ಆಡುವ 11ರಲ್ಲಿ ಬದಲಾವಣೆಗಳನ್ನು ಮಾಡುವ ಸಾಧ್ಯತೆ ಕಡಿಮೆ. ಪದಾರ್ಪಣೆ ಮಾಡಿದ ಶರವೇಗಿ ಮಯಂಕ್ ಯಾದವ್ ಗಮನ ಸೆಳೆದಿದ್ದಾರೆ. ಅವರಂತೆ ಮೊದಲ ಸಲ ಅವಕಾಶ ಪಡೆದ ನಿತೀಶ್ ಕುಮಾರ್ ರೆಡ್ಡಿ ಕೂಡ ಭರವಸೆ ಮೂಡಿಸಿದ್ದಾರೆ. ಸೀಮ್‌ ಬೌಲಿಂಗ್‌ ಆಲ್‌ರೌಂಡರ್‌ ಆಗಿ ತಮ್ಮ ಸ್ಥಾನ ಗಟ್ಟಿಗೊಳಿಸಲು ಅವರಿಗೆ ಈ ಸರಣಿ ವೇದಿಕೆಯಾಗಿದೆ.

ಅರ್ಷದೀಪ್ ಸಿಂಗ್ ವೇಗದ ದಾಳಿಯ ನೇತೃತ್ವ ಸಮರ್ಥವಾಗಿ ನಿಭಾಯಿಸಿದರೆ, ಸ್ಪಿನ್ನರ್‌ ವರುಣ್ ಚಕ್ರವರ್ತಿ ಮೂರು ವರ್ಷಗಳ ನಂತರ ಪುನರಾಗಮನದಲ್ಲಿ ಯಶಸ್ಸು ಪಡೆದಿದ್ದಾರೆ. ರವೀಂದ್ರ ಜಡೇಜ ತೆರವುಗೊಳಿಸಿದ ಸ್ಥಾನದಲ್ಲಿ ಸ್ಪಿನ್ ಆಲ್‌ರೌಂಡರ್ ಆಗಿ ರೂಪುಗೊಳ್ಳಲು ವರುಣ್‌ಗೆ ಅವಕಾಶವಿದೆ.

ಇನ್ನೊಂದು ಕಡೆ ಬಾಂಗ್ಲಾದೇಶ ತಂಡಕ್ಕೆ ಒತ್ತಡ ಹೆಚ್ಚೇ ಇದೆ. ಜೊತೆಗೆ ಸುಧಾರಿಸಿಕೊಳ್ಳಲು ಇರುವ ಅವಧಿ ಕಡಿಮೆ. ಮೂರು ಪಂದ್ಯಗಳ ಸರಣಿ ಗೆಲ್ಲುವ ಯತ್ನಕ್ಕೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯ.

ಈ ವರ್ಷದ ಮಧ್ಯದಲ್ಲಿ ನಡೆದ ವಿಶ್ವಕಪ್‌ನಲ್ಲಿ ಆಡಿದ ಅನುಭವಿ ಆಟಗಾರರೇ ಈಗಲೂ ತಂಡದಲ್ಲಿರುವುದು ಬಾಂಗ್ಲಾದೇಶಕ್ಕೆ ಇರುವ ಅನುಕೂಲ. ಆದರೆ ಟಿ20 ಮಾದರಿಯಲ್ಲಿ ತಂಡ ದೀರ್ಘ ಕಾಲದಿಂದ ನಿರೀಕ್ಷಿತ ಪ್ರದರ್ಶನ ನೀಡುತ್ತಿಲ್ಲ.

ಬ್ಯಾಟಿಂಗ್‌ ವೈಫಲ್ಯ ತಂಡದ ಹಿನ್ನಡೆಗೆ ಪ್ರಮುಖ ಕಾರಣವಾಗಿದೆ. ಭಾರತದ ಶಿಸ್ತುಬದ್ಧ ದಾಳಿಯೆದುರು ಆಟಗಾರರು ಪರದಾಡಿದ್ದಾರೆ. ಸೀನಿಯರ್ ಆಟಗಾರರಾದ ಲಿಟನ್ ದಾಸ್ ಮತ್ತು ಮಹಮದುಲ್ಲಾ ಅವರಿಂದ ತಂಡ ಉತ್ತಮ ಪ್ರದರ್ಶನ ನಿರೀಕ್ಷಿಸುತ್ತಿದೆ. ಪ್ರಬಲ ಆತಿಥೇಯರಿಗೆ ಹೋರಾಟ ನೀಡಬೇಕಾದರೆ ಬಾಂಗ್ಲಾದೇಶ ತನ್ನೆಲ್ಲಾ ಸಾಮರ್ಥ್ಯ ಬಳಸಬೇಕಾಗಿದೆ.

ಪಂದ್ಯ ಆರಂಭ: ರಾತ್ರಿ 7.

ನೇರ ಪ್ರಸಾರ: ಸ್ಪೋರ್ಟ್ಸ್‌ 18

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.