ಮೆಲ್ಬರ್ನ್ : ಭಾರತ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ತಂಡ ತಂಡಗಳ ನಡುವಣ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯು ಡಿಸೆಂಬರ್ 17ರಂದು ಆರಂಭವಾಗಲಿದೆ. ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಬುಧವಾರ ಭಾರತ ತಂಡದ 69 ದಿನಗಳ ಪ್ರವಾಸದ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಅಡಿಲೇಡ್‌ನಲ್ಲಿ ಆರಂಭವಾಗುವ ಮೊದಲ ಟೆಸ್ಟ್‌ಗೂ ಮುನ್ನ ಪಿಂಕ್ ಬಾಲ್ ಅಭ್ಯಾಸ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ.
ನವೆಂಬರ್ 10ರಂದು ಇಂಡಿಯನ್ ಪ್ರೀಮಿಯರ್ ಟೂರ್ನಿ (ಐಪಿಎಲ್) ಮುಗಿದ ನಂತರ ಭಾರತದ ಆಟಗಾರರು ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ನವೆಂಬರ್ 12ರಿಂದ 14 ದಿನಗಳ ಕ್ವಾರಂಟೈನ್ ಮತ್ತು ತರಬೇತಿ ಅವಧಿಯನ್ನು ಪೂರ್ಣಗೊಳಿಸಬೇಕಾಗುತ್ತದೆ.
‘ನವೆಂಬರ್ 12ರಂದು ಭಾರತ ತಂಡ ಸಿಡ್ನಿಯನ್ನು ತಲುಪಲಿದೆ. ನವೆಂಬರ್ 27ರಂದು ಏಕದಿನ ಪಂದ್ಯದೊಂದಿಗೆ ಸರಣಿ ಆರಂಭವಾಗಲಿದೆ. ಅದಕ್ಕಿಂತ ಮೊದಲು ಕ್ವಾರಂಟೈನ್ ಅವಧಿಯನ್ನು ತಂಡ ಪೂರ್ಣಗೊಳಿಸಬೇಕಾಗುತ್ತದೆ‘ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ.
ಅಡಿಲೇಡ್‌ನಲ್ಲಿ ಡಿಸೆಂಬರ್ 17ರಂದು ಪಿಂಕ್ ಬಾಲ್ ಟೆಸ್ಟ್‌ನೊಂದಿಗೆ ಬಾರ್ಡರ್–ಗವಾಸ್ಕರ್ ಟ್ರೋಫಿ ಸರಣಿ ಆರಂಭವಾಗಲಿದೆ. ಡಿಸೆಂಬರ್ 26ರಂದು ಮೆಲ್ಬರ್ನ್‌ನಲ್ಲಿ ಬಾಕ್ಸಿಂಗ್ ಡೇ ಟೆಸ್ಟ್, ಬಳಿಕ ಸಿಡ್ನಿ (ಜನವರಿ 7-11) ಹಾಗೂ ಬ್ರಿಸ್ಬೇನ್‌ನಲ್ಲಿ (ಜನವರಿ 15-19) ಪಂದ್ಯಗಳು ಆಯೋಜನೆಯಾಗಿವೆ.
’ಟೆಸ್ಟ್ ಸರಣಿಗೂ ಮೊದಲು ಭಾರತ ಎ ತಂಡ ನ್ಯೂ ಸೌತ್ ವೇಲ್ಸ್‌ನಲ್ಲಿ ಆಸ್ಟ್ರೇಲಿಯಾ ಎ ತಂಡವನ್ನು (ಡಿಸೆಂಬರ್ 6–8) ಎದುರಿಸಲಿದೆ. ಭಾರತ ತಂಡ ಸಿಡ್ನಿಯಲ್ಲಿ ಆಸ್ಟ್ರೇಲಿಯಾ ಎ ತಂಡಕ್ಕೆ (ಡಿ.11–13) ಮುಖಾಮುಖಿಯಾಗಲಿದೆ‘ ಎಂದು ಸಿಎ ಹೇಳಿದೆ.
ಡಿಸೆಂಬರ್ 4ರಿಂದ ಮೂರು ಟ್ವೆಂಟಿ–20 ಪಂದ್ಯಗಳ ಸರಣಿ ಆರಂಭವಾಗಲಿದೆ.
ವೇಳಾಪಟ್ಟಿ
ಪಂದ್ಯ;ದಿನಾಂಕ;ಸ್ಥಳ
ಏಕದಿನ ಸರಣಿ
ಮೊದಲ ಏಕದಿನ;ನ.27;ಸಿಡ್ನಿ
ಎರಡನೇ ಏಕದಿನ;ನ.29;ಸಿಡ್ನಿ
ಮೂರನೇ ಏಕದಿನ;ಡಿ.2;ಕ್ಯಾನ್‌ಬೆರಾ
ಟ್ವೆಂಟಿ–20 ಸರಣಿ
ಮೊದಲ ಟಿ–20;ಡಿ.4;ಕ್ಯಾನ್‌ಬೆರಾ
ಎರಡನೇ ಟಿ–20;ಡಿ.6;ಸಿಡ್ನಿ
ಮೂರನೇ ಟಿ–20;ಡಿ.8;ಸಿಡ್ನಿ
ಟೆಸ್ಟ್ ಸರಣಿ
ಮೊದಲ ಟೆಸ್ಟ್;ಡಿ.17–21;ಅಡಿಲೇಡ್
ಎರಡನೇ ಟೆಸ್ಟ್;ಡಿ.26–30;ಮೆಲ್ಬರ್ನ್
ಮೂರನೇ ಟೆಸ್ಟ್;ಜ.7–11;ಸಿಡ್ನಿ
ನಾಲ್ಕನೇ ಟೆಸ್ಟ್;ಜ.15–19;ಬ್ರಿಸ್ಬೇನ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.