ಹೈದರಾಬಾದ್:ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದ ಮುಂಬೈ ಆಲ್ರೌಂಡರ್ ಶಿವಂ ದುಬೆ, ಇದೀಗ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿಯೂ ಸ್ಥಾನ ಪಡೆದಿದ್ದಾರೆ.ಗಾಯಾಳು ಹಾರ್ದಿಕ್ ಪಾಂಡ್ಯ ಸದ್ಯ ವಿಶ್ರಾಂತಿಯಲ್ಲಿರುವುದರಿಂದಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲೂ ಪಾಂಡ್ಯ ಬದಲು ದುಬೆ ಅವಕಾಶ ಗಿಟ್ಟಿಸಲಿದ್ದಾರೆಯೇ ಎಂಬ ಚರ್ಚೆ ಆರಂಭವಾಗಿದೆ.
ಹೈದರಾಬಾದ್‌ನಲ್ಲಿ ಅಭ್ಯಾಸ ನಡೆಸುತ್ತಿರುವ ದುಬೆ,ಹಾರ್ದಿಕ್ ಕುರಿತು ಕೇಳಲಾದ ಪ್ರಶ್ನೆಗೆ, ‘ವಿಂಡೀಸ್ ಸರಣಿಗೆ ತಂಡದಲ್ಲಿ ಸ್ಥಾನ ದೊರೆತಿರುವುದನ್ನುಹಾರ್ದಿಕ್ ಪಾಂಡ್ಯ ಸ್ಥಾನ ಆಕ್ರಮಿಸಿಕೊಳ್ಳಲು ಸಿಕ್ಕ ಅವಕಾಶ ಎಂದು ಭಾವಿಸಿಲ್ಲ. ಆದರೆ,ದೇಶಕ್ಕಾಗಿ ಆಡಲು ಅವಕಾಶ ಸಿಕ್ಕಿದೆ ಎಂದುಕೊಂಡಿದ್ದೇನೆ. ಅದನ್ನು ಸಾಧ್ಯವಾದಷ್ಟು ಉತ್ತಮವಾಗಿ ಮಾಡಲು ಪ್ರಯತ್ನಿಸುತ್ತೇನೆ’ ಎಂದು ಪ್ರತಿಕ್ರಿಯಿಸಿದ್ದಾರೆ.
‘ಪ್ರತಿಯೊಬ್ಬರೂ ನನ್ನನ್ನು ಬೆಂಬಲಿಸಿದ್ದಾರೆ. ತಂಡದ ನಾಯಕ ಹಾಗೂ ಆಡಳಿತ ಮಂಡಳಿಯಿಂದ ಸಿಕ್ಕ ಬೆಂಬಲವೂ ಅಮೋಘವಾದುದು. ಅವರೆಲ್ಲ ನನಗೆ ಸಾಕಷ್ಟು ವಿಶ್ವಾಸ ತುಂಬಿದ್ದಾರೆ. ಹಾಗಾಗಿ ನಾನು ತುಂಬಾ ಸಂತಸಗೊಂಡಿದ್ದೇನೆ. ಡೆಸ್ಸಿಂಗ್ ರೂಂ ನಲ್ಲಿಯೂ ಮುಕ್ತವಾಗಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.
ವಿಂಡೀಸ್ ತಂಡ ಚುಟುಕು ಮಾದರಿಯಲ್ಲಿ ಪ್ರಬಲವಾಗಿದೆ ಎಂಬುದನ್ನು ಅರಿತಿರುವ ದುಬೆ, ‘ನಾವೂ ಉತ್ತಮವಾಗಿ ತಯಾರಿ ನಡೆಸಿದ್ದೇವೆ. ನನ್ನ ಪ್ರಕಾರ ಭಾರತ ವಿಶ್ವ ಕ್ರಿಕೆಟ್‌ನ ಅತ್ಯುತ್ತಮ ತಂಡ. ನಾವು ಈ ಸರಣಿ ಗೆಲ್ಲಲಿದ್ದೇವೆ’ ಎಂದಿದ್ದಾರೆ. ಮಾತ್ರವಲ್ಲದೆ,ಬೌಲಿಂಗ್‌ನಲ್ಲಿ ಮಿಂಚುವ ವಿಶ್ವಾದಲ್ಲಿರುವ ಅವರು, ‘ನಾನು ನನ್ನ ಬೌಲಿಂಗ್ ಬಗ್ಗೆ ವಿಶ್ವಾಸ ಹೊಂದಿದ್ದೇನೆ. ಟಿ20 ಕ್ರಿಕೆಟ್‌ನಲ್ಲಿ ಎಲ್ಲ ಬೌಲರ್‌ಗಳಿಗೆ ದಂಡನೆ ಇದ್ದದ್ದೆ. ಹಾಗಾಗಿ ಪೂರ್ಣ ನಾಲ್ಕೂ ಓವರ್‌ಗಳನ್ನು ಉತ್ತಮವಾಗಿ ಎಸೆಯುವಷ್ಟು ಸಿದ್ಧತೆ ನಡೆಸುತ್ತಿದ್ದೇನೆ’ ಎಂದಿದ್ದಾರೆ.
ಆರು ಅಡಿ ಎತ್ತರವಿರುವ ದುಬೆ ದೇಹ ತೂಕಕ್ಕೆ ಸಂಬಂಧಿಸಿದಂತೆಯೂ ಸಾಕಷ್ಟು ಟೀಕೆಗಳು ಕೇಳಿಬಂದಿದ್ದವು. ಹೀಗಾಗಿ ಫಿಟ್‌ನೆಸ್ ಕಾಪಾಡಿಕೊಳ್ಳಲು ಅವರು ಸಾಕಷ್ಟು ಬೆವರು ಹರಿಸಿದ್ದಾರೆ. ಫಿಟ್‌ನೆಸ್‌ಗೆ ಸಂಬಂಧಿಸಿದಂತೆ, ‘ಆಲ್ರೌಂಡರ್ ಆಗಿ ಉಳಿಯುವುದು ತುಂಬಾ ಕಠಿಣ. ನಾನು ಫಿಟ್‌ನೆಸ್ ಕಾಪಾಡಿಕೊಳ್ಳಬೇಕಿರುವುದು ತುಂಬಾ ಮುಖ್ಯ. ಏಕೆಂದರೆ ಆಲ್ರೌಂಡರ್‌ಎಂದ ಮೇಲೆ ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡನ್ನೂ ನಿಭಾಯಿಸಬೇಕು. ಫಿಟ್‌ನೆಸ್ ಉಳಿಸಿಕೊಳ್ಳುವುದು ತುಂಬಾ ಕಷ್ಟದ ಕೆಲಸ’ ಎಂದುಹೇಳಿಕೊಂಡಿದ್ದಾರೆ.
ಈ ಆಲ್ರೌಂಡರ್ ಬಾಂಗ್ಲಾ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಪರಿಣಾಮಕಾರಿ ಪ್ರದರ್ಶನ ನೀಡಲು ಸಾಧ್ಯವಾಗದಿದ್ದರೂ, ಮೂರನೇ ಪಂದ್ಯದಲ್ಲಿ 30 ರನ್ ನೀಡಿ ಮೂರು ವಿಕೆಟ್ ಪಡೆದು ಮಿಂಚಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.