ನವಿ ಮುಂಬೈ: ಭಾರತ ಮಹಿಳಾ ಕ್ರಿಕೆಟ್ ತಂಡವು ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ಬಿಗಿ ಹಿಡಿತ ಸಾಧಿಸಿದೆ.
ಇಲ್ಲಿನ ಡಿ.ವೈ ಪಾಟೀಲ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನದಾಟದಲ್ಲಿ ದೀಪ್ತಿ ಶರ್ಮಾ ದಾಳಿಗೆ (5 ವಿಕೆಟ್) ತತ್ತರಿಸಿದ ಇಂಗ್ಲೆಂಡ್ ಕೇವಲ 136 ರನ್ನಿಗೆ ಆಲೌಟ್ ಆಗಿದೆ.
ಆ ಮೂಲಕ ಭಾರತ ತಂಡವು ಮೊದಲ ಇನಿಂಗ್ಸ್‌ನಲ್ಲಿ 292 ರನ್‌ಗಳ ಬೃಹತ್ ಮುನ್ನಡೆ ಗಳಿಸಿದೆ. ಮೊದಲ ಇನಿಂಗ್ಸ್‌ನಲ್ಲಿ ಭಾರತ 428 ರನ್ ಪೇರಿಸಿತ್ತು.
ಬಳಿಕ ಆಂಗ್ಲರ ಪಡೆಗೆ ಫಾಲೋಆನ್ ಹೇರದ ಭಾರತೀಯ ವನಿತೆಯರ ಬಳಗ ದ್ವಿತೀಯ ಇನಿಂಗ್ಸ್ ಮುಂದುವರಿಸಿದೆ.
ದೀಪ್ತಿ ಅರ್ಧಶತಕ ಹಾಗೂ 5 ವಿಕೆಟ್ ಸಾಧನೆ...
ಮೊದಲು ಬ್ಯಾಟಿಂಗ್‌ನಲ್ಲಿ ಅರ್ಧಶತಕ ಸಾಧನೆ ಮಾಡಿದ್ದ (67) ದೀಪ್ತಿ ಬಳಿಕ ಬೌಲಿಂಗ್‌ನಲ್ಲಿ ಕೈಚಳಕ ತೋರಿದ್ದಾರೆ. ಕೇವಲ ಏಳು ರನ್ ಮಾತ್ರ ನೀಡಿ ಐದು ವಿಕೆಟ್ ಗಳಿಸಿ ಮಿಂಚಿದ್ದಾರೆ.
ಆ ಮೂಲಕ ಆಲ್‌ರೌಂಡ್ ಪ್ರದರ್ಶನ ನೀಡಿರುವ ದೀಪ್ತಿ, ಒಂದೇ ಟೆಸ್ಟ್ ಪಂದ್ಯದಲ್ಲಿ ಅರ್ಧಶತಕ ಹಾಗೂ ಐದು ವಿಕೆಟ್ ಗಳಿಸಿದ ಹಿರಿಮೆಗೆ ಭಾಜನರಾಗಿದ್ದಾರೆ.
ಮತ್ತೊಂದೆಡೆ ಇಂಗ್ಲೆಂಡ್ ತಂಡವು ಕೊನೆಯ ಆರು ವಿಕೆಟ್‌ಗಳನ್ನು ಕೇವಲ 11 ರನ್ ಅಂತರದಲ್ಲಿ ಕಳೆದುಕೊಂಡಿತು.
ಇಂಗ್ಲೆಂಡ್ ಪರ ನ್ಯಾಟ್ ಶಿವೆರ್ ಬ್ರಂಟ್ ಗರಿಷ್ಠ 59 ರನ್ ಗಳಿಸಿದರು. ಭಾರತದ ಪರ ಚೊಚ್ಚಲ ಪಂದ್ಯ ಆಡುತ್ತಿರುವ ರೇಣುಕಾ ಸಿಂಗ್ ಒಂದು ವಿಕೆಟ್ ಗಳಿಸಿದರು.
ಮೊದಲ ಇನಿಂಗ್ಸ್‌ನಲ್ಲಿ ಭಾರತದ ನಾಲ್ವರು ಬ್ಯಾಟರ್‌ಗಳು ಅರ್ಧಶತಕ ಸಾಧನೆ ಮಾಡಿದರು. ದೀಪ್ತಿ ಅವರಲ್ಲದೆ ಚೊಚ್ಚಲ ಪಂದ್ಯ ಆಡುತ್ತಿರುವ ಕನ್ನಡತಿ ಶುಭಾ ಸತೀಶ್ (69), ಜೆಮಿಮಾ ರಾಡ್ರಿಗಸ್ (68) ಮತ್ತು ಯಸ್ತಿಕಾ ಭಾಟಿಯಾ (66) ಅರ್ಧಶತಕಗಳನ್ನು ಗಳಿಸಿದರು. ನಾಯಕಿ ಹರ್ಮನ್‌ಪ್ರೀತ್ ಕೌರ್ ಕೇವಲ ಒಂದು ರನ್ ಅಂತದಲ್ಲಿ (49) ಅರ್ಧಶತಕ ವಂಚಿತರಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.